ವಿವೇಕಾನಂದ ಕಾಲೇಜು: 45ನೇ ಮಾನ್ಸೂನ್ ಚೆಸ್ ಪಂದ್ಯಾವಳಿ ಆಯೋಜನೆ
Vivekananda College: ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಕ್ರೀಡಾ ಇಲಾಖೆ ಹಾಗೂ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ, ಈಚೆಗೆ ಅಂತರ ಕಾಲೇಜು & ಅಂತರ ಜಿಲ್ಲಾ ಮಟ್ಟದ 45ನೇ ಮಾನ್ಸೂನ್ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು.
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಕ್ರೀಡಾ ಇಲಾಖೆ ಹಾಗೂ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ, ಈಚೆಗೆ ಅಂತರ ಕಾಲೇಜು & ಅಂತರ ಜಿಲ್ಲಾ ಮಟ್ಟದ 45ನೇ ಮಾನ್ಸೂನ್ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿದರು. 'ಚೆಸ್ ಆಟಗಾರ ಮಾನಸಿಕವಾಗಿ ಸದೃಢನಾಗಿರಬೇಕು. ಆತನ ಯೋಚನಾಶೀಲ ಮನೋಭಾವ ಕೂಡ ಇತರರಿಗಿಂತ ಭಿನ್ನವಾಗಿರಬೇಕು. ಆಟಗಾರ ಆಟದ ನಿಯಮ ಹಾಗೂ ಶಿಸ್ತುಗಳನ್ನು ದೈನಂದಿನ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಆಟದಲ್ಲಿ ಅನುಸರಿಸುವ ನಡೆ, ಇತರೆ ಆಟಗಾರರಿಗೂ ಪ್ರೇರಣೆಯಾಗಲಿ' ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಈಗ ವಿದ್ಯಾರ್ಥಿಗಳು ಚೆಸ್ ಆಟಗಳಲ್ಲಿ ಭಾಗವಹಿಸುವುದು ಬಹಳ ಕಡಿಮೆ. ಕಲಿಕಾ-ಹಂತ ಪೂರ್ಣಗೊಂಡ ಬಳಿಕ, ವಿದ್ಯಾರ್ಥಿಗಳ ಅಭಿರುಚಿ ಮತ್ತು ಆದ್ಯತೆಗಳು ಬದಲಾಗುತ್ತವೆ. ಆಟಗಾರರು ಚೆಸ್ ಆಡುವುದರೊಂದಿಗೆ, ಆಟವನ್ನು ಹೇಗೆ ಉತ್ತಮಗೊಳಿಸಬಹುದು ಎಂದು ಯೋಚಿಸುವುದು ಬಹಳ ಮುಖ್ಯ. ಎದುರಾಳಿಯ ಚಿಂತನೆ & ತಂತ್ರಗಳನ್ನು ನಿಖರವಾಗಿ ತಿಳಿದುಕೊಂಡು, ಹೇಗೆ ಸೋಲಿಸಬಹುದು ಎಂದು ಯೋಚಿಸಿ ಆಡುವುದು ಮುಖ್ಯ' ಎಂದರು.
ಈ ಪಂದ್ಯಾವಳಿಯಲ್ಲಿ ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಪ್ರಥಮ ಸ್ಥಾನ, ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ವಿಷ್ಣುಪ್ರಸಾದ್ ದ್ವಿತೀಯ ಸ್ಥಾನ ಹಾಗೂ ಕುಂದಾಪುರದ ಡಾ.ಬಿ.ಬಿ.ಹೆಗಡೆ ಕಾಲೇಜಿನ ಸಿಂಚನ್ ಜಿ ನಾಯಕ್ ತೃತೀಯ ಸ್ಥಾನಕ್ಕೆ ಭಾಜನರಾಗಿದ್ದಾರೆ.
ನಾಲ್ಕರಿಂದ ಹತ್ತನೇ ಸ್ಥಾನವನ್ನು ಕ್ರಮವಾಗಿ, ನಿಶಾಂತ್ ಡಿಸೋಜಾ (ಡಾ.ಬಿ.ಬಿ.ಹೆಗಡೆ ಕಾಲೇಜು ಕುಂದಾಪುರ), ಶ್ರೇಯಸ್ ಆಚಾರ್ಯ (ಎಂಜಿಎಂ ಕಾಲೇಜು ಉಡುಪಿ), ಶ್ರೇಯಸ್ ಎಂ.ಎಸ್ (ಎಸ್‌ಡಿಎಂ ಕಾಲೇಜು ಉಜಿರೆ), ಅಂಕಿತ್ ಜೆ ಶೆಟ್ಟಿ (ಎಸ್‌ಡಿಎಂ ಕಾಲೇಜು ಉಜಿರೆ), ನಿತ್ಯಂತ ಹೆಚ್ (ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್), ಭಾಸ್ಕರ್ (ಎಸ್‌ಡಿಎಂ ಕಾಲೇಜು ಉಜಿರೆ) ಹಾಗೂ ಗಗನ್ ಸ್ವರ್ಣ (ಜಿಎಫ್‌ಜಿಸಿ ಹಳೆಯಂಗಡಿ) ಅವರುಗಳು ತಮ್ಮದಾಗಿಸಿಕೊಂಡಿದ್ದಾರೆ.
ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಸಮನ್ವಿತ (ಎಸ್‌ಡಿಎಂ ಕಾಲೇಜು ಉಜಿರೆ), ಸಹನಾ ಕೆ (ವಿವೇಕಾನಂದ ಕಾಲೇಜು ಪುತ್ತೂರು) ಹಾಗೂ ನಿಶಾ ಆರ್.ಎಸ್ (ವಿವೇಕಾನಂದ ಕಾಲೇಜು ಪುತ್ತೂರು) ಪಡೆದುಕೊಂಡಿದ್ದಾರೆ.
ಪಂದ್ಯಾವಳಿಯ ಮುಖ್ಯ ತೀರ್ಪುಗಾರರಾಗಿ ಮಂಗಳೂರಿನ ರಾಷ್ಟ್ರೀಯ ತೀರ್ಪುಗಾರ ಕೌಶಿಕ್ ಭಾಗವಹಿಸಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಡಾ.ಜ್ಯೋತಿ ಕುಮಾರಿ ಹಾಗೂ ಯತೀಶ್ ಪಂದ್ಯಕೂಟವನ್ನು ಸಂಯೋಜಿಸಿದರು. ತೃತೀಯ ಬಿಸಿಎ ವಿದ್ಯಾರ್ಥಿನಿ ರಶ್ಮಿತಾ ಸ್ವಾಗತಿಸಿದರು. ತೃತೀಯ ಬಿಎ ವಿದ್ಯಾರ್ಥಿನಿ ಹೇಮಲತಾ ವಂದಿಸಿದರು. ಭೂಮಿಕಾ ಹಾಗೂ ಕೃತಿಕಾ ನಿರೂಪಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.