ಎಸ್‍ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯ: ಆರ್.ಅಶೋಕ್

ಕಾಂಗ್ರೆಸ್ ಸರಕಾರದ ಕ್ರಮದಿಂದ ಎಸ್‍ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ. ಮೀಸಲಾತಿ ಕಡಿಮೆ ಮಾಡಲು ಮತ್ತು ಘನಂದಾರಿ ಕೆಲಸಕ್ಕೆ ಸಿದ್ದರಾಮಯ್ಯನವರ ಸರಕಾರವೇ ಬೇಕಿತ್ತೇ? ಇದೇನಾ ನಿಮ್ಮ ದಲಿತಪರ ನೀತಿ ಎಂದು ಅಶೋಕ್‌ ಪ್ರಶ್ನಿಸಿದರು.

May 13, 2026 - 14:47
ಎಸ್‍ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯ: ಆರ್.ಅಶೋಕ್

ಬೆಂಗಳೂರು, ಮೇ 13: ಕಾಂಗ್ರೆಸ್‍ನವರು ಏಕಾಏಕಿ ಕುತಂತ್ರ, ಷಡ್ಯಂತ್ರ ಮಾಡಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಮೀಸಲಾತಿ ಪ್ರಮಾಣ ಇಳಿಸುವ ಮೂಲಕ ವಂಚನೆ, ದ್ರೋಹವೆಸಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರವು ಎಸ್‍ಸಿ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ ಏರಿಸಿತ್ತು. ಎಸ್‍ಟಿ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸಿತ್ತು. ಎಸ್‍ಟಿ ಸಮುದಾಯಕ್ಕೆ ನ್ಯಾಯಯುತ ಬೇಡಿಕೆಯನ್ನು ನಾವು ಈಡೇರಿಸಿದ್ದೆವು ಎಂದರು.

ಮಾಧುಸ್ವಾಮಿ ವರದಿ, ಸದಾಶಿವ ಆಯೋಗವನ್ನು ಗಮನದಲ್ಲಿ ಇಟ್ಟುಕೊಂಡು ನಾವು ಮೀಸಲಾತಿಯನ್ನು ಹೆಚ್ಚಿಸಿದ್ದೆವು. ಇದು ಸುಮಾರು 30 ವರ್ಷಗಳ ಹೋರಾಟದ ಪ್ರತಿಫಲ ಎಂದು ವಿವರಿಸಿದರು.

ಕಾಂಗ್ರೆಸ್ ಸರಕಾರದ ಕ್ರಮದಿಂದ ಎಸ್‍ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ. ಮೀಸಲಾತಿ ಕಡಿಮೆ ಮಾಡಲು ಮತ್ತು ಘನಂದಾರಿ ಕೆಲಸಕ್ಕೆ ಸಿದ್ದರಾಮಯ್ಯನವರ ಸರಕಾರವೇ ಬೇಕಿತ್ತೇ? ಇದೇನಾ ನಿಮ್ಮ ದಲಿತಪರ ನೀತಿ ಎಂದು ಅಶೋಕ್‌ ಪ್ರಶ್ನಿಸಿದರು.

ಹಿಂದೆ 10 ವರ್ಷ ಮನಮೋಹನ್ ಸಿಂಗ್ ಸರಕಾರ ಇದ್ದಾಗ ಮೀಸಲಾತಿ ಪ್ರಮಾಣ ಹೆಚ್ಚಿಸಿಲ್ಲವೇಕೆ ಎಂದು ಕೇಳಿದರು. ಎಸ್‍ಟಿ ಸಮುದಾಯ ನ್ಯಾಯ ಕೇಳುತ್ತಿದೆ. ಅದಕ್ಕೆ ನಿಮ್ಮ ಉತ್ತರವೇನು ಎಂದು ಪ್ರಶ್ನೆಯನ್ನು ಮುಂದಿಟ್ಟರು. 7ರಿಂದ ಶೇ 3ಕ್ಕೆ ಇಳಿಸಲಾಗಿದೆ. ಇನ್ನೆಷ್ಟು ವರ್ಷ ಹೋರಾಟ ಮಾಡಬೇಕಾದೀತು ಎಂದರು.

ಮೀಸಲಾತಿ ಪ್ರಮಾಣ ಕಡಿತ ಮಾಡಿ ಎಸ್‍ಟಿಗಳಿಗೆ ಅವಮಾನ ಮಾಡಿದ್ದಾರೆ. ದಲಿತರ ಬೆನ್ನಿಗೆ ಇವರು ಚೂರಿ ಹಾಕಿದ್ದಾರೆ. ಇದು ಇವರ ದ್ವಂದ್ವ ನೀತಿ. ಇದನ್ನು ಕೂಡಲೇ ಸರಿಪಡಿಸಬೇಕು. ಇದನ್ನು ಸರಿಪಡಿಸದೇ ಇದ್ದರೆ ಹೋರಾಟವು ದೊಡ್ಡ ಜ್ವಾಲೆಯಾಗಿ ರಾಜ್ಯ ಸರಕಾರವನ್ನು ಕಿತ್ತೆಸೆಯುವಂಥ ತೀರ್ಮಾನವನ್ನು ಆ ಸಮುದಾಯದವರು ಮಾಡಲಿದ್ದಾರೆ. ನಾವು ಕೂಡ ಅವರ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಎಂದು ಅವರು ಘೋಷಿಸಿದರು.

ದಲಿತರ ಕಣ್ಣಿಗೆ ಮಣ್ಣೆರಚುವ ಕೆಲಸ ಸರಿಯೇ- ರಾಜುಗೌಡ ನಾಯಕ್

ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜುಗೌಡ ನಾಯಕ್ ಅವರು ಹೋರಾಟದ ಕುರಿತು ವಿವರ ನೀಡಿದರು. ಕಾಂಗ್ರೆಸ್ ಸರಕಾರವು ಕೋರ್ಟಿಗೆ ಸಮರ್ಪಕ ಮಾಹಿತಿ ಕೊಟ್ಟಿಲ್ಲ; ಒಳ್ಳೆಯ ವಕೀಲರನ್ನು ನೇಮಿಸಿಲ್ಲ. ವಕೀಲರು ಕೋರ್ಟಿಗೆ ಹಾಜರಾಗಿಲ್ಲ. ಇದರಿಂದ ಕೋರ್ಟಿನಲ್ಲಿ ತಡೆಯಾಜ್ಞೆ ಸಿಗುವಂತಾಗಿದೆ ಎಂದು ಆರೋಪಿಸಿದರು. ಸ್ಟೇ ತೆರವು ಮಾಡಲು ಆಗುವುದಿಲ್ಲವೇ ಎಂದ ಅವರು, ಸಿದ್ದರಾಮಯ್ಯನವರೇ, ದಲಿತರ ಕಣ್ಣಿಗೆ ಮಣ್ಣೆರಚುವ ಕೆಲಸ ಸರಿಯೇ ಎಂದು ಪ್ರಶ್ನಿಸಿದರು.ಕ

ಛತ್ತೀಸಗಡದಲ್ಲಿ ಎಸ್‍ಟಿಗೆ ಶೇ 32, ಎಸ್‍ಸಿ 10, ಒಬಿಸಿ 16 ಸೇರಿ ಒಟ್ಟು ಶೇ 58 ಮೀಸಲಾತಿ ಕೊಡಲಾಗಿದೆ. ಅಲ್ಲಿ ಎಸ್‍ಸಿ, ಎಸ್‍ಟಿಗೆ ಜನಸಂಖ್ಯೆ ಆಧಾರದಲ್ಲಿ ಶೇ 50ಕ್ಕಿಂತ ಹೆಚ್ಚಾದರೂ ಕೊಡಿ ಎಂದಿದ್ದಾರೆ. ಹಾಗಿದ್ದರೆ ಕರ್ನಾಟಕದಲ್ಲಿ ಯಾಕೆ ಕೊಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಎಸ್‍ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸದಾಸ ಕರಿಯಪ್ಪ ಇದ್ದರು.

 

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.