ಕೇರಳಕ್ಕೆ ಅಕ್ರಮ ಜಾನುವಾರುಗಳ ಸಾಗಾಟ, ನಾಲ್ವರ ಬಂಧನ
ಈಚರ್ ಲಾರಿಯಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 27 ಕೋಣಗಳನ್ನು ರಕ್ಷಿಸಿದ ನಗರದ ಕಂಕನಾಡಿ ಠಾಣೆ ಪೊಲೀಸರು.
ಮಂಗಳೂರು, ಮೇ 16: ಕರ್ನಾಟಕದ ಹಾವೇರಿಯಿಂದ ಕೇರಳಕ್ಕೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ, ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ 27 ಕೋಣಗಳನ್ನು ಮಂಗಳೂರು ಪೊಲೀಸರು ರಕ್ಷಿಸಿದ್ದಾರೆ. ಈ ಅಕ್ರಮ ದನಗಳ ಸಾಗಾಟ ದಂದೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಈಚರ್ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ನಡೆದದ್ದು ಹೇಗೆ?: ಮೇ 16ರಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗೆರಿ ಇಂಡಿಯಾನ ಹಾಲ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಂಗಳೂರು ಹೈವೇ ಪೆಟ್ರೋಲ್ ಪೊಲೀಸರು ಮತ್ತು ಬೆಳಿಗ್ಗೆ ಗಸ್ತು ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಪೊಲೀಸರು ಜಂಟಿಯಾಗಿ ತಪಾಸಣೆ ನಡೆಸಿದಾಗ ಈ ಅಕ್ರಮ ಸಾಗಾಟ ಪತ್ತೆಯಾಗಿದೆ. ಹಾವೇರಿಯಿಂದ ಕೇರಳದ ತಲಿಪರಂಬು ಎಂಬಲ್ಲಿಗೆ ಈ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳನ್ನು ಸಯ್ಯದ್ ಮೆಹಬೂಬ್ ಅಲಿ (28), ಅರುಣ ಚಂದ್ರಪ್ಪ ಜಾವಳಿ (32),
ಹಿರಿಯಣ್ಣ ಗೌಡ (46), ಸುನೀಲ್ ಲಕ್ಷ್ಮಪ್ಪ ಜಾವಳಿ (24) ಎಂದು ಗುರುತಿಸಲಾಗಿದೆ.
ಕಾನೂನು ಕ್ರಮ ಮತ್ತು ತನಿಖೆ:
ಈ ದಂದೆಯ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 59/2026 ರಂತೆ, ಪ್ರಾಣಿ ಹಿಂಸೆ ತಡೆ ಕಾಯ್ದೆ (Prevention of Cruelty to Animals Act, 1960), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಹಾಗೂ ಬಿ.ಎನ್.ಎಸ್ (BNS) ಕಾಯ್ದೆಗಳ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ರಕ್ಷಿಸಲಾದ 27 ಕೋಣಗಳನ್ನು ನ್ಯಾಯಾಲಯದ ಆದೇಶದಂತೆ ಸುರಕ್ಷಿತವಾಗಿ ಗೋಶಾಲೆಗೆ ಒಪ್ಪಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


