ಸುಧಾಕರ್ ಗೆ ಅಂತಿಮ ನಮನ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್

ಸಾರ್ವಜನಿಕ ಬದುಕಿನಲ್ಲಿ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಸುಧಾಕರ್ ಅವರ ಸರಳತೆ, ಸೌಜನ್ಯ ಹಾಗೂ ಜನಪರ ಕಾಳಜಿ ನಮ್ಮೆಲ್ಲರಿಗೂ ಮಾದರಿಯಾದದ್ದು ಎಂದು ಸಚಿವೆ ಹೇಳಿದರು

May 11, 2026 - 21:27
ಸುಧಾಕರ್ ಗೆ ಅಂತಿಮ ನಮನ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್

ಚಿತ್ರದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಚಿತ್ರದುರ್ಗದ ಚಳ್ಳಕೆರೆಗೆ ತೆರಳಿ, ನಿನ್ನೆ ನಿಧನರಾದ ಸಚಿವ ಡಿ. ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನಗಳನ್ನು ಸಲ್ಲಿಸಿದರು.

ಸುಧಾಕರ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವರು,
​ಸಾರ್ವಜನಿಕ ಬದುಕಿನಲ್ಲಿ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಸುಧಾಕರ್ ಅವರ ಸರಳತೆ, ಸೌಜನ್ಯ ಹಾಗೂ ಜನಪರ ಕಾಳಜಿ ನಮ್ಮೆಲ್ಲರಿಗೂ ಮಾದರಿಯಾದದ್ದು. ಸದಾ ನಗುಮುಖದಿಂದ, ಹೃದಯ ಶ್ರೀಮಂತಿಕೆಯಿಂದ ಇರುತ್ತಿದ್ದ ಇಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ಮನಸ್ಸಿಗೆ ಅತೀವ ನೋವಾಗಿದೆ ಎಂದರು.

​ಅವರ ಅಗಲಿಕೆ ನಮ್ಮ ಸರ್ಕಾರಕ್ಕೆ ಹಾಗೂ ಅವರ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಹಾಗೂ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಈ ನೋವು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ ಸೇರಿದಂತೆ ಹಲವಾರು ಸಚಿವರು, ಮುಖಂಡರು, ಸುಧಾಕರ್ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.