Talakaveri Theerthodbhava: ಇಂದು ತಲಕಾವೇರಿಯಲ್ಲಿ ತೀರ್ಥೋದ್ಭವ
Talakaveri Theerthodbhava: ರಾಜ್ಯದ ಜೀವನದಿ ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇಂದು ತೀರ್ಥೋದ್ಭವ ನಡೆಯಲಿದೆ.
ಕೊಡಗು: ರಾಜ್ಯದ ಜೀವನದಿ ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇಂದು (ಅ.17) ತೀರ್ಥೋದ್ಭವ ನಡೆಯಲಿದೆ. ಸಂಜೆ 7:50ಕ್ಕೆ ಮೇಷ ಲಗ್ನದಲ್ಲಿ (ತುಲಾ ಸಂಕ್ರಮಣ) ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಬರಲಿದೆ.
ಈಗಾಗಲೇ ಭಾಗಮಂಡಲದಿಂದ ದೇವರ ಭಂಡಾರ ಪೆಟ್ಟಿಗೆಯನ್ನು ಸಾಂಪ್ರದಾಯಿಕವಾಗಿ ತಲಕಾವೇರಿಗೆ ತರಲಾಗಿದೆ. ಇದರಲ್ಲಿ ಕಾವೇರಿ ತಾಯಿಯ ಆಭರಣಗಳಿವೆ.
ಜಿಲ್ಲಾಡಳಿತ ಮತ್ತು ದೇಗುಲ ಸಮಿತಿಯಿಂದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಗಮಂಡಲ-ತಲಕಾವೇರಿ ಮಾರ್ಗದಲ್ಲಿ ದೀಪಾಲಂಕಾರ ಹಾಗೂ ಹೂವಿನ ಅಲಂಕಾರಗಳನ್ನು ಮಾಡಲಾಗಿದೆ.
ಕಳೆದ ವರ್ಷದಂತೆಯೇ, ಈ ಬಾರಿಯೂ ಭಕ್ತರಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲು 25 ಕೆಎಸ್ಆರ್ಟಿಸಿ ಬಸ್ಗಳು ಕಾರ್ಯಾಚರಣೆ ನಡೆಸಲಿವೆ. ಕೊಡಗು ಏಕೀಕರಣ ರಂಗದ ವತಿಯಿಂದ ಪ್ರಸಾದ ವಿತರಣೆಯನ್ನು ಮಾಡಲಾಗಿದೆ.
ಕಾವೇರಿ ತಾಯಿಯ 'ಭಕ್ತಿಗಾಯನ'ಕ್ಕಾಗಿ ಪ್ರತ್ಯೇಕ ವೇದಿಕೆ ಸಿದ್ಧಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ & ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗಳು ಜಂಟಿಯಾಗಿ ಆಯೋಜಿಸಲಿವೆ.
ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಅಗತ್ಯವಿರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.
ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಶುಕ್ರವಾರ ತಲಕಾವೇರಿಗೆ ಭೇಟಿ ನೀಡಿ, ದೇವಾಲಯದ ಸಮೀಪ ನೂತನವಾಗಿ ನಿರ್ಮಿಸಲಾದ 'ಭಂಡಾರ ಮನೆ' ಕಟ್ಟಡವನ್ನು ಉದ್ಘಾಟಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೀಡಿದ ಸುಮಾರು ರೂ.1 ಕೋಟಿ ಅನುದಾನದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ.