MRPL ಗುತ್ತಿಗೆ ಕಾರ್ಮಿಕರಿಗೆ ರೂ.5 ಲಕ್ಷ ಆರೋಗ್ಯ ವಿಮೆ: ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಹತ್ವದ ತೀರ್ಮಾನ

MRPL: ಎಂಆರ್‌ಪಿಎಲ್‌ ಗುತ್ತಿಗೆ ಕಾರ್ಮಿಕರಿಗೆ ಗುಡ್‌ನ್ಯೂಸ್‌ ದೊರೆತಿದೆ. ಸಂಸ್ಥೆಯ ಗುತ್ತಿಗೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ರೂ.5 ಲಕ್ಷದ ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವನೆಗೆ ಕೊನೆಗೂ ಒಪ್ಪಿಗೆ ದೊರೆತಿದೆ.

Oct 15, 2026 - 19:24
MRPL ಗುತ್ತಿಗೆ ಕಾರ್ಮಿಕರಿಗೆ ರೂ.5 ಲಕ್ಷ ಆರೋಗ್ಯ ವಿಮೆ: ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಹತ್ವದ ತೀರ್ಮಾನ

ಮಂಗಳೂರು: ನವರಾತ್ರಿಯ ಈ  ಶುಭ ಸಂದರ್ಭದಲ್ಲಿ 'ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌'ನಲ್ಲಿ (ಎಂಆರ್‌ಪಿಎಲ್‌) ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಗುಡ್‌ನ್ಯೂಸ್‌ ದೊರೆತಿದೆ. ಸಂಸ್ಥೆಯ ಗುತ್ತಿಗೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ರೂ.5 ಲಕ್ಷದ ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವನೆಗೆ ಕೊನೆಗೂ ಒಪ್ಪಿಗೆ ದೊರೆತಿದೆ. 

ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ (Brijesh Chowta) ನೇತೃತ್ವದಲ್ಲಿ, ಮಂಗಳೂರಿನ ಅವರ ಅಧಿಕೃತ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಈ ಆರೋಗ್ಯ ವಿಮೆ ಯೋಜನೆಯಿಂದ ಎಂಆರ್‌ಪಿಎಲ್‌ನಲ್ಲಿ ದುಡಿಯುತ್ತಿರುವ 2,000ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಾರ್ಮಿಕರು ಮತ್ತು ಅವರ ಕುಟುಂಬಗಳ ಆರೋಗ್ಯ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮವು ಹೆಚ್ಚು ಮಹತ್ವ ಪಡೆದುಕೊಂಡಿದೆ.

8 ವರ್ಷಗಳ ಬೇಡಿಕೆಗೆ ಸ್ಪಂದನೆ:
 
ಎಂಆರ್‌ಪಿಎಲ್‌ ಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ವಿಮೆ ಒದಗಿಸಬೇಕೆಂಬ ಬೇಡಿಕೆ ಕಳೆದ ಎಂಟು ವರ್ಷಗಳಿಂದ ಕೇಳಿಬರುತ್ತಿತ್ತು. ಈ ವಿಚಾರವಾಗಿ ಕಳೆದ ವರ್ಷ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. 

ಆ ವೇಳೆ ಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ವಿಮೆ ಒದಗಿಸುವ ಅಗತ್ಯದ ಕುರಿತು ಚರ್ಚೆ ನಡೆಸಲಾಗಿತ್ತು. ಈಗ ಸಂಸದರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, ಕಾರ್ಮಿಕರ ಬಹುಕಾಲದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸಿದಂತಾಗಿದೆ.

ಮಹಿಳಾ ಕಾರ್ಮಿಕರಿಗೂ ವಿಶೇಷ ಸೌಲಭ್ಯ: 

ಆರೋಗ್ಯ ವಿಮೆಯ ಜೊತೆಗೆ ಎಂಆರ್‌ಪಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಗುತ್ತಿಗೆ ಕಾರ್ಮಿಕರ ಸೌಲಭ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮಹಿಳಾ ಕಾರ್ಮಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಪ್ರತ್ಯೇಕ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಒದಗಿಸಲು ಒಪ್ಪಿಗೆ ಸೂಚಿಸಲಾಗಿದೆ. ಇದರಿಂದ ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಅಗತ್ಯ ಮೂಲಸೌಕರ್ಯ ಮತ್ತು ಉತ್ತಮ ಕಾರ್ಯಪರಿಸರ ಕಲ್ಪಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.

ಸಂಸದರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ರಾಜು,ಎಂಆರ್‌ಪಿಎಲ್‌ನ ಉನ್ನತಾಧಿಕಾರಿಗಳು ಹಾಗೂ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.