ವಿವೇಕಾನಂದ ಪಿಯು ಕಾಲೇಜಿನಲ್ಲಿ ವಿವೇಕ ಸ್ಮೃತಿ ಸರಣಿ ಕಾರ್ಯಕ್ರಮ

Vivekananda PU College: ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ವತಿಯಿಂದ 'ವಿವೇಕ ಸ್ಮೃತಿ' ಸರಣಿ ಕಾರ್ಯಕ್ರಮ ನಡೆಯಿತು.

Oct 16, 2026 - 15:41
ವಿವೇಕಾನಂದ ಪಿಯು ಕಾಲೇಜಿನಲ್ಲಿ ವಿವೇಕ ಸ್ಮೃತಿ ಸರಣಿ ಕಾರ್ಯಕ್ರಮ

ಪುತ್ತೂರು: ದೇವರ ಕುರಿತಾಗಿ ಪ್ರಶ್ನಿಸುವ ಮೂಲಕ ಜೀವನದ ಸಾರವನ್ನು ಅರ್ಥೈಸಿಕೊಂಡವರು ಸ್ವಾಮಿ ವಿವೇಕಾನಂದರು. ಅವರು ತಮ್ಮ ಗುರು ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಿಂದ ದೈವಿಕ ಅನುಭವ ಪಡೆದು, ಪರಮ ಜ್ಞಾನವನ್ನು ಸಿದ್ಧಿಸಿಕೊಂಡು ಜಗತ್ತಿಗೆ ಪ್ರೇರಣೆಯಾದವರು. ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ದಕ್ಷಿಣೇಶ್ವರದ ಕಾಳಿಕಾಮಾತೆಯ ದರ್ಶನ ತಂದ ಜ್ಞಾನ ಮತ್ತು ವೈರಾಗ್ಯದ ದಾರಿ ಅವರ ಜೀವನವನ್ನು ರೂಪಿಸಿತು. ಅಂತೆಯೇ ನಾವು ನಮ್ಮ ಸಂಸ್ಕೃತಿಯ ಬಗ್ಗೆ ಧೃಢವಾದ ನಂಬಿಕೆಯಿಟ್ಟಾಗ ಅದುವೇ ನಮಗೆ ಶಕ್ತಿಯಾಗಬಲ್ಲದು ಎಂದು ವಾಗ್ಮಿ ಹಾಗೂ ಕಲ್ಮಾಡಿಯ ಆಸೆಮ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಹೇಳಿದ್ದರು.

ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ, ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ವತಿಯಿಂದ ನಡೆದ 'ವಿವೇಕ ಸ್ಮೃತಿ' ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಾಹಿಸಿ, ಅವರು ಮಾತನಾಡಿದರು.

ಶಕ್ತಿ ಎಂದರೆ ಚೈತನ್ಯಶೀಲವಾದುದು ಮತ್ತು ಇದೇ ಶಕ್ತಿಯಿಂದ ಸ್ಫೂರ್ತಿ ಪಡೆದ ಸ್ವಾಮಿ ವಿವೇಕಾನಂದರು ಭಾರತೀಯ ತತ್ವಗಳನ್ನು ಜಗತ್ತಿಗೆ ಸಾರಿದವರು. ನಾವು ಜೀವನದಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಸಂಸ್ಕೃತಿಯ ಮೇಲೆ ಧೃಢ ನಂಬಿಕೆಯಿಟ್ಟಾಗ, ಆಗುವ ಪರಿಣಾಮಗಳನ್ನು ಕಂಡುಕೊಳ್ಳುತ್ತಾ ಸಾಗಬೇಕು ಎಂದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ರವೀಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಭಾರತ ದೇಶವೆಂದರೆ ತಾಯ್ತನದ ಪ್ರತೀಕವಾಗಿದೆ. ಸ್ವಾಮಿ ವಿವೇಕಾನಂದರು ಭಾರತದ ಕೀರ್ತಿಯನ್ನು ಜಗತ್ತಿಗೆ ಪಸರಿಸಿ ಭಾರತೀಯರನ್ನು ಜಾಗೃತರನ್ನಾಗಿಸಿದವರು. ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಭಾರತವನ್ನು ತಾಯಿ ಎಂಬಂತೆ ಕಂಡ ವಿವೇಕಾನಂದರಂತಹ ಅನೇಕರು ಕಾರಣ. ಇದು ವಿವಿಧ ರಾಜ್ಯಗಳನ್ನೊಳಗೊಂಡ ಭೂಪ್ರದೇಶವಷ್ಟೇ ಅಲ್ಲ. ಬದಲಾಗಿ ಮೌಲ್ಯಯುತ ಸಂಸ್ಕೃತಿ ಇರುವ ನಾಡು ಎನಿಸಿದೆ. ನಮ್ಮ ವೈಯುಕ್ತಿಕ ವಿಚಾರಧಾರೆಗಳು ಭಿನ್ನವಾದರೂ ಕೂಡಾ ಭಾರತೀಯರಾಗಿ ನಾವು ದೇಶಾಭಿಮಾನವನ್ನು ಮೈಗೂಡಿಸಿಕೊಂಡು ಒಂದಾಗಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ ಉಪಸ್ಥಿತರಿದ್ದರು.

ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ವಿಜಯಸರಸ್ವತಿ ಬಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ವಿದ್ಯಾ.ಎಸ್ ವಂದಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಾವತಿ ಬಿ ನಿರ್ವಹಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.