ಕಾರ್ಮಿಕರ ಪಾಲಿಗೆ ಕರಾಳ ದಿನ ಆರಂಭ- ಎಸ್.ವರಲಕ್ಷ್ಮಿ

ಹೊಸ ನಿಯಮಗಳು ಹಲವು ಬಗೆಯಲ್ಲಿ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ವಂಚಿಸಲಿವೆ. ಇಎಸ್‌ಐ, ಪಿಎಫ್‌ ಸೌಲಭ್ಯ ದೊರಕದಂತೆ ಮಾಡಲಿದೆ. ಕಾಯಂ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳದಂತಹ ವಾತಾವರಣ ಸೃಷ್ಟಿಸಿದೆ. ಎಂಟು ಗಂಟೆ ಬದಲಿಗೆ 12 ಗಂಟೆ ಕೆಲಸ ಇನ್ನು ಕಡ್ಡಾಯವಾಗಲಿದೆ,

May 11, 2026 - 09:50
ಕಾರ್ಮಿಕರ ಪಾಲಿಗೆ ಕರಾಳ ದಿನ ಆರಂಭ- ಎಸ್.ವರಲಕ್ಷ್ಮಿ

ಹೊಸಪೇಟೆ: ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸನ್ನದುಗಳಿಗೆ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಿದ್ದು, ಮೇ 9ರಿಂದ ದೇಶದ ಇಡೀ ಕಾರ್ಮಿಕರಿಗೆ ಕರಾಳ ದಿನ ಆರಂಭವಾದಂತಾಗಿದೆ. ಇದರ ವಿರುದ್ಧ ಈಗಲಾದರೂ ಸಂಘಟಿತ ಹೋರಾಟ ನಡೆಸದಿದ್ದರೆ ಪ್ರತಿಯೊಬ್ಬರಿಗೆ ಅಪಾಯ ತಪ್ಪಿದ್ದಲ್ಲ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯುದರ್ಶಿ ಎಸ್‌.ವರಲಕ್ಷ್ಮಿ ಎಚ್ಚರಿಸಿದರು.

ಹೊಸಪೇಟೆಯಲ್ಲಿ ಮೇ 10ರಂದು ಆರಂಭವಾದ ಅಖಿಲ ಭಾರತ ರಸ್ತೆ ಸಾರಿಗೆ ನೌಕರರ ಒಕ್ಕೂಟದ (ಎಐಆರ್‌ಟಿಡಬ್ಲ್ಯುಎಫ್‌) ವತಿಯಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ ಕಾರ್ಮಿಕರ ರಾಜ್ಯಮಟ್ಟದ ಸಂಘಟನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ತಕ್ಷಣ ಕೇಂದ್ರವು ನಾಗಾಲೋಟದಲ್ಲಿ ಕಾರ್ಮಿಕರ ವಿಚಾರದಲ್ಲಿ ಬಂಡವಾಳಶಾಹಿಗಳನ್ನು ಓಲೈಸುವ ಕ್ರಮಕ್ಕೆ ಮುಂದಾಗಿದೆ, ಇದರ ವಿರುದ್ಧ ದೆಹಲಿಯಲ್ಲಿ ಎರಡು ದಿನದಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಹೊಸ ನಿಯಮಗಳು ಹಲವು ಬಗೆಯಲ್ಲಿ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ವಂಚಿಸಲಿವೆ. ಇಎಸ್‌ಐ, ಪಿಎಫ್‌ ಸೌಲಭ್ಯ ದೊರಕದಂತೆ ಮಾಡಲಿದೆ. ಕಾಯಂ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳದಂತಹ ವಾತಾವರಣ ಸೃಷ್ಟಿಸಿದೆ. ಎಂಟು ಗಂಟೆ ಬದಲಿಗೆ 12 ಗಂಟೆ ಕೆಲಸ ಇನ್ನು ಕಡ್ಡಾಯವಾಗಲಿದೆ, ಮಹಿಳೆಯರು ಸಹ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಲಿದೆ. ಕಾರ್ಮಿಕ ನ್ಯಾಯಾಲಯವೇ ನಿರ್ಮೂಲನಗೊಳ್ಳಲಿದೆ. ಕಾರ್ಮಿಕ ನಿರೀಕ್ಷಕರ ಹುದ್ದೆಗಳು ರದ್ದಾಗಲಿವೆ. ಕಾರ್ಮಿಕ ಸಂಘಟನೆಗಳಿಗೆ ಹೊಡೆತ ಬೀಳಲಿದೆ. ಒಟ್ಟಾರೆ ಈ ಸನ್ನದು ಕಾರ್ಮಿಕರ ಪಾಲಿಗೆ ಮರಣಶಾಸನವೇ ಆಗಿದೆ ಎಂದು ವರಲಕ್ಷ್ಮಿ ಹೇಳಿದರು.

ಕರ್ನಾಟಕ ರಾಜ್ಯ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಈಗಾಗಲೇ ರಾಜ್ಯದಲ್ಲಿ 11 ಲಕ್ಷ ಮಂದಿ ಇದರಲ್ಲಿ ನೋಂದಣಿಯಾಗಿದ್ದಾರೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ಸಾರಿಗೆ ಇಲಾಖೆ ಇದಕ್ಕಾಗಿ ಸೆಸ್ ಸಂಗ್ರಹಿಸಿ ಕಾರ್ಮಿಕ ಇಲಾಖೆಯಿಂದ ಕಲ್ಯಾಣ ಕಾರ್ಯಕ್ರಮ ನಡೆಯಬೇಕು. ಆದರೆ ಈ ಯೋಜನೆಯನ್ನು ನಿರ್ವಹಿಸುತ್ತಿರುವ ಮಂಡಳಿಯನ್ನು ಕಾರ್ಮಿಕ ಇಲಾಖೆ ಬದಲಿಗೆ ಸಾರಿಗೆ ಇಲಾಖೆಯಿಂದ ನಿರ್ವಹಣೆ ಮಾಡಲು ಸರ್ಕಾರ ನಿರ್ಧರಿಸುವುದು ಖಂಡನೀಯ. ಸಾರಿಗೆ ಇಲಾಖೆಗೆ ಸಾಕಷ್ಟು ಇತರ ಕೆಲಸಗಳು ಇರುವ ಕಾರಣ ಕಲ್ಯಾಣ ಕಾರ್ಯಕ್ರಮಗಳನ್ನು ಕಾರ್ಮಿಕ ಇಲಾಖೆಯೇ ನಡೆಸುವಂತಾಗಬೇಕು ಎಂದು ವರಲಕ್ಷ್ಮಿ ಒತ್ತಾಯಿಸಿದರು.

ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಆಟೊ ಗ್ಯಾಸ್‌, ಸಿಎನ್‌ಜಿ , ಎಲ್‌ಎನ್‌ಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರ ನೇರ ಹೊಡೆತ ಆಟೊ, ಟ್ಯಾಕ್ಸಿ ಚಾಲಕರಿಗೆ ಆಗಿದೆ. ಹೀಗಾಗಿ ಕೋವಿಡ್ ಸಮಯದಲ್ಲಿ ನೀಡಿದಂತಹ ಒಂದಿಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ಸಾರಿಗೆ ಸಿಬ್ಬಂದಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಹಿತ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ 2024ರ ಜನವರಿ 1ರಿಂದಲೇ ಆಗಬೇಕಿತ್ತು, ಒಂದು ವರ್ಷದ ರಿಯಾಯಿತಿ ನೀಡಿದ ಮೇಲೆಯೂ ಇನ್ನೂ ತನಕ ಪರಿಷ್ಕರಣೆ ಆಗಿಲ್ಲ. ಈ ಸಾರಿಗೆ ಸಿಬ್ಬಂದಿಯ ಹೋರಾಟಕ್ಕೆ ಸಿಐಟಿಯುನಿಂದ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.

ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಕುಪ್ಪುಸ್ವಾಮಿ ಮಾತನಾಡಿದರು. ಕಾರ್ಮಿಕ ಮುಖಂಡರಾದ ಆರ್‌.ಎಸ್‌.ಬಸವರಾಜ, ಬಿ.ವಿ.ರಾಘವೇಂದ್ರ, ರೇವಪ್ಪ, ಸಪ್ನ, ಕೆ.ಎಂ.ಸಂತೋಷ್‌ ಕುಮಾರ್, ಎ.ಕರುಣಾನಿಧಿ ಇತರರು ಇದ್ದರು.