ಶಿವಶಂಕರಪ್ಪ ಅವರು ಮಾಡಿರುವ ಕೆಲಸ ನೋಡಿ ನಾವುಗಳು ಕಲಿಯುವುದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

“ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಮಾಡಿರುವ ಕೆಲಸ ನೋಡಿ ನನಗೆ ಬಹಳ ಸಂತೋಷವಾಗಿದೆ. ನಾವು ಅವರಿಂದ ಕಲಿಯುವುದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

Apr 3, 2026 - 19:45
ಶಿವಶಂಕರಪ್ಪ ಅವರು ಮಾಡಿರುವ ಕೆಲಸ ನೋಡಿ ನಾವುಗಳು ಕಲಿಯುವುದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
DCM D.K. Shivakumar

“ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಮಾಡಿರುವ ಕೆಲಸ ನೋಡಿ ನನಗೆ ಬಹಳ ಸಂತೋಷವಾಗಿದೆ. ನಾವು ಅವರಿಂದ ಕಲಿಯುವುದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದಾವಣಗೆರೆಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಉಪಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, “ಈ ಕ್ಷೇತ್ರದಲ್ಲಿ ನೂರಕ್ಕೆ 98% ಮಹಿಳೆಯರು ಗ್ಯಾರಂಟಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಸುಮಾರು 60 ಸಾವಿರ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದರೆ, 61 ಸಾವಿರ ಕುಟುಂಬಗಳು ಗೃಹಜ್ಯೋತಿ ಯೋಜನೆ ಪಡೆಯುತ್ತಿವೆ. 1.45 ಲಕ್ಷ ಜನ ಅನ್ನಭಾಗ್ಯ ಯೋಜನೆ ಫಲಾನುಭವಿಗಳಾಗಿದ್ದಾರೆ. ಅವರೆಲ್ಲರನ್ನು ಭೇಟಿ ಮಾಡಿದಾಗ, ಯಾರು ಏನಾದರೂ ಮಾಡಿಕೊಳ್ಳಲಿ ನಾವು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಾಗಿ ಇಲ್ಲಿನ ಮಹಿಳೆಯರು ತೀರ್ಮಾನಿಸಿದ್ದಾರೆ” ಎಂದರು. 

“ಶಾಮನೂರು ಶಿವಶಂಕರಪ್ಪ ಅವರು ಈ ಭಾಗದಲ್ಲಿ ಆಸ್ಪತ್ರೆ, ಸಭಾಂಗಣ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಸಹಾಯ ಮಾಡಿದ್ದಾರೆ. ನಾನು ಅನೇಕ ವರ್ತಕರನ್ನು ಭೇಟಿ ಮಾಡಿದ್ದು, ಅವರು ಶಿವಶಂಕರಪ್ಪ ಅವರ ನಾಯಕತ್ವದಲ್ಲಿ ನಮ್ಮ ವ್ಯಾಪಾರ ವ್ಯವಹಾರಕ್ಕೆ ಯಾವುದೇ ತೊಂದರೆ ಇರಲಿಲ್ಲ. ನಾನು ಈ ಕ್ಷೇತ್ರದ ಒಳಭಾಗಗಳಲ್ಲಿ ಪ್ರಚಾರಕ್ಕಾಗಿ ಸಂಚಾರ ಮಾಡಿದಾಗ, ಇಲ್ಲಿನ ರಸ್ತೆ, ಮನೆಗಳನ್ನು ನೋಡಿ ಬಹಳ ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ ಎಂದು ಸಂತೋಷವಾಯಿತು. ಅಗಲವಾದ ರಸ್ತೆಗಳು, ಕಾಂಕ್ರೀಟ್ ರಸ್ತೆಗಳು, ಉದ್ಯಾನಗಳು, ಬಸ್ ನಿಲ್ದಾಣ ಸೇರಿದಂತೆ ಎಲ್ಲ ಪ್ರದೇಶಗಳನ್ನು ಬಹಳ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಬೆಂಗಳೂರಿಗಿಂತ ಉತ್ತಮವಾಗಿ ಅಭಿವೃದ್ಧಿ ಮಾಡಿದ್ದಾರೆ” ಎಂದು ತಿಳಿಸಿದರು. “ಬಡವರಿಗೆ 15 ಸಾವಿರ ಆಶ್ರಯ ಮನೆಗಳನ್ನು ನೀಡಿದ್ದು, ಎಲ್ಲಾ ಸಮುದಾಯಗಳಿಗೆ ಪ್ರತ್ಯೇಕವಾಗಿ ಜಾಗ ನೀಡಿದ್ದು, ಇವರ ಕಾರ್ಯ ನೋಡಿ ನಾವು ಕಲಿಯಬೇಕಾದದ್ದು ಸಾಕಷ್ಟಿವೆ. ಕೋವಿಡ್ ಸಮಯದಲ್ಲಿ ಶಿವಶಂಕರಪ್ಪ ಅವರು ಉಚಿತ ಲಸಿಕೆ ನೀಡಿದ್ದನ್ನು ಎಲ್ಲರೂ ಸ್ಮರಿಸುತ್ತಿದ್ದಾರೆ. ಇದೆಲ್ಲವೂ ನಮಗೆ ಶಕ್ತಿ ನೀಡಿದೆ. ನಿನ್ನೆ ಸಮರ್ಥ ಅವರ ಭಾಷಣ ಕೇಳಿದೆ. ಅವರ ಮಾತು ಕೇಳಿ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿದ ಸಮಾಧಾನ ನಮಗಿದೆ. ಜನರು ಶಿವಶಂಕರಪ್ಪ ಅವರಿಗಿಂತ ಹೆಚ್ಚಿನ ಅಂತರದಲ್ಲಿ ಸಮರ್ಥ್ ಅವರನ್ನು ಗೆಲ್ಲಿಸುವ ವಿಶ್ವಾಸ ನಮಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.