ಬಿಸಿ ರೋಡ್‌: ಯುವತಿ ಲಾವಣ್ಯ ಹತ್ಯೆ ಮಾಡಿದ್ದ ಆರೋಪಿ ಚೇತನ್‌ ಪೊಲೀಸ್‌ ವಶಕ್ಕೆ.. FIRನಲ್ಲಿ ಏನಿದೆ?

BC Road Murder Case: ಯುವತಿ ಲಾವಣ್ಯ ಹತ್ಯೆ ಮಾಡಿದ್ದ ಆರೋಪಿ ಚೇತನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Jul 17, 2026 - 12:25
Jul 17, 2026 - 15:01
ಬಿಸಿ ರೋಡ್‌: ಯುವತಿ ಲಾವಣ್ಯ ಹತ್ಯೆ ಮಾಡಿದ್ದ ಆರೋಪಿ ಚೇತನ್‌ ಪೊಲೀಸ್‌ ವಶಕ್ಕೆ.. FIRನಲ್ಲಿ ಏನಿದೆ?

ಬಂಟ್ವಾಳ: ಬಿಸಿ ರೋಡ್‌ನಲ್ಲಿ ಹಾಡಹಗಲೇ ಲಾವಣ್ಯ ಎಂಬ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಹಂತಕ ಚೇತನ್‌ನನ್ನು ಪೊಲೀಸರು ವಾಮಂಜೂರು ಬಳಿ ವಶಕ್ಕೆ ಪಡೆದಿದ್ದಾರೆ. 

ಬಸ್‌ ಕಾಯುತ್ತಿದ್ದ ಲಾವಣ್ಯಳನ್ನು ಚೇತನ್‌ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ, ಮಾರುತಿ ಆಲ್ಟೋ ಕಾರಿನಲ್ಲಿ ಪರಾರಿಯಾಗಿದ್ದನು. ಪೊಲೀಸರು, ಚೇತನ್‌ನನ್ನು ಪಚ್ಚನಾಡಿಯಲ್ಲಿ ಪತ್ತೆ ಮಾಡಿದ್ದು, ಆತ ಇಲಿ ಪಾಷಣ ತೆಗೆದುಕೊಂಡಿದ್ದಾನೆ. ಹೀಗಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಹಂತಕನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಅರುಣ್‌ ಪುತ್ತಿಲ ಸೇರಿ ಅನೇಕರು ಒತ್ತಾಯಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ? 

ಉಳಿಗ್ರಾಮದ ಕಕ್ಯಪದವು ನಿವಾಸಿಯಾಗಿರುವ ಗೌತಮ್ ಅವರ ಪತ್ನಿ ಮತ್ತು ಆಕೆಯ ತಂಗಿ ಲಾವಣ್ಯ, ಕಲ್ಲಡ್ಕ ಪುಷ್ಪರಾಜ್ ನರ್ಸಿಂಗ್ ಹೋಮ್‌ನಲ್ಲಿ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದರು. ಲಾವಣ್ಯರಿಗೆ ಗುರುವಾರ (ಜುಲೈ 17) ಬೆಳಗ್ಗಿನ ಪಾಳಿಯಿತ್ತು. ಅವರ ಅಕ್ಕ ಚೈತ್ರಾರಿಗೆ ರಾತ್ರಿ ಪಾಳಿಯಿತ್ತು. ಸಂಜೆ ಸುಮಾರು 5.45ಕ್ಕೆ ಚೈತ್ರಾ, ಪತಿಯ ಫೋನ್‌ಗೆ ಕರೆ ಮಾಡಿ, 'ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಲಾವಣ್ಯ ಕಕ್ಯಪದವಿಗೆ ಬರಲು ಕುಳಿತುಕೊಂಡಿದ್ದಾಳೆ. ಆಕೆಗೆ ಚೇತನ್ ಎಂಬಾತನು ಕಿರುಕುಳ ನೀಡುತ್ತಿದ್ದಾನೆ. ನೀವು ಲಾವಣ್ಯಳ ಮೊಬೈಲ್‌ಗೆ‌ ಕರೆ ಮಾಡಿ' ಎಂದು ಹೇಳಿದ್ದಾರೆ. 

ಗೌತಮ್ ಕರೆ ಮಾಡಿದಾಗ ಲಾವಣ್ಯ ಕರೆಯನ್ನು ಸ್ವೀಕರಿಸಿ, ಚೇತನ್ ಕಿರುಕುಳ ನೀಡಿದ್ದು ನಿಜ ಎಂದು ಹೇಳುವಷ್ಠರಲ್ಲಿ ಆಕೆ ಜೋರಾಗಿ ಕಿರುಚುವುದು ಕೇಳಿಸಿತು. ಗೌತಮ್‌ ತಕ್ಷಣವೇ ಬಿ.ಸಿ.ರೋಡ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಅಜಯ್ ಅವರಿಗೆ ಕರೆ ಮಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚೇತನ್ ಎಂಬಾತನು ನನ್ನ ಪತ್ನಿಯ ತಂಗಿ ಲಾವಣ್ಯಳಿಗೆ ಕಿರುಕುಳ ನೀಡುತ್ತಿದ್ದಾನೆ. ನೀನು ಕೂಡಲೇ ಅಲ್ಲಿಗೆ ಹೋಗು ಎಂದು ತಿಳಿಸಿದ್ದಾರೆ.

ಅಲ್ಲಿಗೆ ಹೋಗುತ್ತೇನೆಂದು ಹೇಳಿ ಅಜಯ್ ಕರೆ ಕಟ್ ಮಾಡಿದ್ದಾರೆ. 10 ನಿಮಿಷ ಬಳಿಕ, ಗೌತಮ್‌ ಅವರಿಗೆ ಫೋನ್ ಮಾಡಿ 'ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಲಾವಣ್ಯಳ ಕೊಲೆಯಾಗಿದೆ. ನೀನು ಕೂಡಲೇ ಬಾ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಗೌತಮ್‌ ಬೆಳ್ತಂಗಡಿ ಸರಳಿ ಕಟ್ಟೆಯಿಂದ ಊರವರಾದ ಸುರೇಶ್ ಹಾಗೂ ವಸಂತ ಎಂಬವರೊಂದಿಗೆ ಘಟನಾ ಸ್ಥಳಕ್ಕೆ ಬರುತ್ತಿರುವಾಗ, ಲಾವಣ್ಯರ ಮೃತ ದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರು ನೇರವಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಬಂದು ಆಕೆಯ ಮೃತದೇಹವನ್ನು ನೋಡಿದ್ದಾರೆ.

ಲಾವಣ್ಯ ತಲೆಗೆ ತೀವ್ರ ಗಾಯವಾಗಿರುವುದನ್ನು ಅವರು ಕಂಡಿದ್ದಾರೆ. ಘಟನಾ ಸ್ಥಳದಲ್ಲಿ ಬ್ಯಾಗ್, ರಕ್ತದ ಕಲೆ ಮತ್ತು ಲಾವಣ್ಯರ ಹತ್ಯೆಗೆ ಉಪಯೋಗಿಸಿದ ತಲವಾರು ಬಿದ್ದಿತ್ತು ಎಂದು ಅಲ್ಲಿಗೆ ಹೋಗಿದ್ದ ಅಜಯ್, ಗೌತಮ್‌ ಅವರಿಗೆ ತಿಳಿಸಿದ್ದಾರೆ. ಚೇತನ್ ಎಂಬಾತನು ಮೃತ ಲಾವಣ್ಯಳ ದೂರದ ಸಂಬಂಧಿಯಾಗಿದ್ದು, ಆತ ಕೆಲವು ಸಮಯದಿಂದ ಪ್ರೀತಿಸುವಂತೆ ಆಕೆಯನ್ನು ಒತ್ತಾಯ ಮಾಡುತ್ತಿನು. ಆದರೆ ಲಾವಣ್ಯ ತಿರಸ್ಕರಿಸಿದ್ದಳು. 

ಇದರಿಂದ ಕೋಪಗೊಂಡ ಚೇತನ್ ಗುರುವಾರ ಸಂಜೆ 5.30ಕ್ಕೆ ಲಾವಣ್ಯ ಕೆಲಸ ಮುಗಿಸಿ, ಮನೆಗೆ ಬರಲು ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುವುದನ್ನು ತಿಳಿದುಕೊಂಡು ಆಕೆಯನ್ನು ಕೊಲ್ಲಲು ತಲವಾರನ್ನು ತೆಗೆದುಕೊಂಡು ಬಂದಿದ್ದನು. ಸಂಜೆ 5.30 ರಿಂದ ಸಂಜೆ 6 ಗಂಟೆ ನಡುವೆ ಆಕೆಯನ್ನು ಹಿಂಬಾಲಿಸಿ ತಡೆದು ನಿಲ್ಲಿಸಿದ್ದಾನೆ. ತಲವಾರಿನಿಂದ ತಲೆಯ ಹಿಂಬದಿ ಕೊಚ್ಚಿ ಹತ್ಯೆ ಮಾಡಿ, ಮಾರಕಾಸ್ತ್ರವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.