ಚಿಕ್ಕಬಳ್ಳಾಪುರ: ಅಧಿಕಾರಿಗಳಿಗೆ ಡಿಸಿಎಂ ಡಾ.ಜಿ.ಪರಮೇಶ್ವರ ಖಡಕ್‌ ಸೂಚನೆ

Chikkaballapur: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲೆಯ ʼಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯʼಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.

Jul 22, 2026 - 15:12
ಚಿಕ್ಕಬಳ್ಳಾಪುರ: ಅಧಿಕಾರಿಗಳಿಗೆ ಡಿಸಿಎಂ ಡಾ.ಜಿ.ಪರಮೇಶ್ವರ ಖಡಕ್‌ ಸೂಚನೆ

ಚಿಕ್ಕಬಳ್ಳಾಪುರ: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ (Dr.G.Parameshwara), ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲೆಯ ʼಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯʼಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು. 

ಬೆಳೆ ವಿಮೆ ಎಂಬುದು ರೈತರಿಗೆ ವರದಾನ. ಬೆಳೆ ನಷ್ಟವಾದ ಸಂದರ್ಭದಲ್ಲಿ ವಿಮೆಯಿಂದ ರೈತರಿಗೆ ಒಂದಷ್ಟು ಅನುಕೂಲವಾಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 80 ಸಾವಿರ ನೋಂದಣಿಗೆ ಗುರಿ ನೀಡಲಾಗಿದೆ. ಈವರೆಗೆ 24 ಸಾವಿರ ಮಾತ್ರ ನೋಂದಣಿಯಾಗಿದೆ. ಬೆಳೆ ವಿಮೆ ಕಟ್ಟಲು ಪ್ರೋತ್ಸಾಹಿಸದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. 

ರೈತರಿಗೆ ಸಹಾಯ ಮಾಡಲು ಅವಕಾಶವಿದೆ. ನಿಮ್ಮ ಸೋಮಾರಿತನದಿಂದ ರೈತರು ಕಷ್ಟ ಅನುಭವಿಸಬೇಕೆ? ನಿಮ್ಮ ಅನಗತ್ಯ ಉತ್ತರಗಳು ನನಗೆ ಬೇಕಿಲ್ಲ. ಬೆಳೆ ವಿಮೆ ಕಟ್ಟಿಸುವ ಗುರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. 

ಬೆಳೆ ವಿಮೆ ಕಟ್ಟಿಸುವಲ್ಲಿ ಅಧಿಕಾರಿಗಳು ಯಾವುದೇ ರೀತಿಯಲ್ಲೂ ನಿರ್ಲಕ್ಷಿಸುವುದು ಬೇಡ. ನಷ್ಟ ಅನುಭವಿಸಿದ ರೈತರಿಗೆ ವಿಮೆ ಹಣ ಸಿಗುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಲೋಪ, ನಿರ್ಲಕ್ಷ್ಯ ಕಂಡು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. 

ಜಿಲ್ಲೆಯಲ್ಲಿ 1.86 ಲಕ್ಷ ಜಾನುವಾರು, 10 ಲಕ್ಷ ಕುರಿ - ಮೇಕೆಗಳಿವೆ. ‌3 ಲಕ್ಷ ಟನ್ ಮೇವು ಸಂಗ್ರಹವಿದೆ ಎಂದು ಮಾಹಿತಿ ನೀಡಿದ್ದೀರಿ. ಮೇವು ಸಂಗ್ರಹ ಯಾವ ಆಧಾರದ‌ ಮೇಲೆ ಮಾಹಿತಿ ನೀಡಿದ್ದೀರಿ. ರೈತರ ಬಳಿ ಮೇವು ಇರುವುದನ್ನು ಖಾತ್ರಿ‌ ಪಡಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಮುಂದಿನ ಬೇಸಿಗೆಗೆ ಯಾವುದೇ ರೀತಿಯಲ್ಲಿ ಮೇವಿನ ಕೊರತೆ ಎದುರಾಗಬಾರದು. ನೀರು ಲಭ್ಯತೆ ಇರುವ ರೈತರಿಗೆ ಬೀಜ ವಿತರಿಸಿ, ಮೇವು ಬೆಳೆಯಲು ಪ್ರೋತ್ಸಾಹಿಸಿ ಎಂದು ನಿರ್ದೇಶಿಸಿದರು. 

ಕುಡಿಯುವ ನೀರಿಗಾಗಿ ಕ್ಷೇತ್ರವಾರು ರೂ.1 ಕೋಟಿ ನೀಡಲಾಗುತ್ತಿದೆ. ಈ ಬಗ್ಗೆ ತಾಲೂಕು ಟಾಸ್ಕ್‌ಫೋರ್ಸ್ ತಂಡವು ಕ್ರಿಯಾ ಯೋಜನೆ ರೂಪಿಸಬೇಕು. ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿರಂತರವಾಗಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.