ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಗೆ ಮತ ನೀಡಬೇಡಿ: ರಣದೀಪ್ ಸಿಂಗ್ ಸೂರ್ಜೇವಾಲ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚಗ್ಯಾರಂಟಿ ಯೋಜನೆಗಳನ್ನು ಟೀಕಿಸಿ, ಅನಗತ್ಯ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಮತ ನೀಡಬಾರದು. ಗ್ಯಾರಂಟಿ ಯೋಜನೆಗಳು ಜನರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಬೆಲೆ ಏರಿಕೆಯಿಂದ ಬಸವಳಿಯುತ್ತಿರುವ ಜನತೆಗೆ ಗ್ಯಾರಂಟಿ ಯೋಜನೆಗಳು ನೆರವಾಗಿವೆ. ಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್ ಸರ್ಕಾರ 1 ಲಕ್ಷ 36 ಸಾವಿರ ಕೋಟಿ ಹಣ ಖರ್ಚು ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚಗ್ಯಾರಂಟಿ ಯೋಜನೆಗಳನ್ನು ಟೀಕಿಸಿ, ಅನಗತ್ಯ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಮತ ನೀಡಬಾರದು. ಗ್ಯಾರಂಟಿ ಯೋಜನೆಗಳು ಜನರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಬೆಲೆ ಏರಿಕೆಯಿಂದ ಬಸವಳಿಯುತ್ತಿರುವ ಜನತೆಗೆ ಗ್ಯಾರಂಟಿ ಯೋಜನೆಗಳು ನೆರವಾಗಿವೆ. ಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್ ಸರ್ಕಾರ 1 ಲಕ್ಷ 36 ಸಾವಿರ ಕೋಟಿ ಹಣ ಖರ್ಚು ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಗ್ಯಾರಂಟಿ ಫಲಾನುಭವಿಗಳ ಜೊತೆ ಸಂವಾದ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಎರಡು ಮಾಡೆಲ್ ಗಳಿವೆ. ಮೊದಲನೆಯದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಮಾಡೆಲ್. ಎರಡನೇಯದು ಮೋದಿ ಸರ್ಕಾರದಿಂದ ರಾಜ್ಯದ ಜನತೆಯ ಜೇಬು ಕತ್ತರಿಸುವ ಮಾಡೆಲ್. ಜನರ ಜೇಬಿಗೆ ಹಾಕುತ್ತಿರುವ ಕತ್ತರಿಯಿಂದ ಬಚಾವ್ ಆಗಲು ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದರು.
2014ರಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬರುವ ಮುನ್ನ ಗ್ಯಾಸ್ ಬೆಲೆ 400 ರೂ. ಆಸುಪಾಸಿನಲ್ಲಿತ್ತು. ಈಗ ಎಲ್ ಪಿಜಿ ಸಿಲಿಂಡರ್ ಬೆಲೆ 950 ರೂ. ದಾಟಿದೆ. ಲೀಟರ್ ಗೆ 70 ರೂಪಾಯಿಯಿದ್ದ ಪೆಟ್ರೋಲ್ ಈಗ 102ರ ಗಡಿ ದಾಟಿದೆ. ಡೀಸೆಲ್ 56 ರೂಪಾಯಿಂದ 96ಕ್ಕೆ ಜಿಗಿದಿದೆ. ಏ.1ರಿಂದ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಕರ್ನಾಟಕದಿಂದ ವರ್ಷಕ್ಕೆ 5000 ಸಾವಿರ ಕೋಟಿ ರೂ. ಟೋಲ್ ಟ್ಯಾಕ್ಸ್ ಸಂಗ್ರಹ ಮಾಡಲಾಗಿದೆ. ದೇಶದಾದ್ಯಂತ 2.80 ಲಕ್ಷ ಕೋಟಿ ಟೋಲ್ ಟ್ಯಾಕ್ಸ್ ಸಂಗ್ರಹವಾಗುತ್ತಿದೆ ಎಂದರು.
ಪ್ಲಾಸ್ಟಿಕ್ ಸರಕು ಸಾಮಾಗ್ರಿಗಳ ಬೆಲೆಗಳು ಶೇ. 50 ಹೆಚ್ಚಾಗಿದೆ. ಪಿವಿಸಿ ಪೈಪ್ ಗಳ ಬೆಲೆ 30%, ಏರ್ ಟಿಕೆಟ್ ದರದಲ್ಲಿ 15% ಹೆಚ್ಚಾಗಿದೆ. ಖಾಸಗಿ ಪೆಟ್ರೋಲ್ ಬಂಕ್ ಗಳಾದ ಎಸ್ಸಾರ್, ಶೆಲ್ ನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು 3 ರಿಂದ 20 ರೂ.ವರೆಗೆ ಹೆಚ್ಚಾಗಿದೆ. ಚುನಾವಣೆ ಬಳಿಕ ಎಲ್ ಪಿಜಿ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದರು.
ಬೆಲೆ ಏರಿಕೆಯಿಂದ ಬಚಾವ್ ಆಗಲು ಇರುವ ಮಾರ್ಗವೇ ಗ್ಯಾರಂಟಿ. ಪಂಚಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ 50 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ ಇದನ್ನು ಬಂದ್ ಮಾಡಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸ ಮತದಾರರ ಮೇಲಿದೆ. ಸಮರ್ಥ್ ಒಬ್ಬ ಸಮರ್ಥ ಅಭ್ಯರ್ಥಿ. ಯುವಕರಿಗೆ ಸ್ಪೂರ್ತಿದಾಯಕ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕಾಂಗ್ರೆಸ್ ಬಲ ಹೆಚ್ಚಿಸಿ ಎಂದು ಕರೆಕೊಟ್ಟರು.
ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಂಚಗ್ಯಾರಂಟಿ ಯೋಜನೆಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ 538.81 ಕೋಟಿ ರೂ. ಖರ್ಚು ಮಾಡಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಕ್ಷೇತ್ರದ 58,684 ಮನೆಯ ಯಜಮಾನಿರಿಗೆ ಮಾಸಿಕ ಎರಡು ಸಾವಿರ ರೂಗಳಂತೆ 332 ಕೋಟಿ ರೂ. ಹಣ ನೀಡಲಾಗಿದೆ. ಶಕ್ತಿ ಯೋಜನೆಯಡಿ 2,47,50,558 ಬಾರಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣಿಸಿದ್ದು ಅದರ ಟಿಕೆಟ್ ಮೌಲ್ಯ 53.97 ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ಭರಿಸಿದೆ. ಗೃಹಜ್ಯೋತಿ ಯೋಜನೆಯ 49,770 ಫಲಾನುಭವಿಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿದ್ದು ಇದರ ಮೊತ್ತ 72.20 ಕೋಟಿ ರೂ. ಅನ್ನಭಾಗ್ಯ ಯೋಜನೆಯಡಿ 216.77 ಕೋಟಿ ರೂ. ಹಣ ನೀಡಲಾಗಿದೆ. ಯುವನಿಧಿ ಯೋಜನೆಯ 950 ಫಲಾನುಭವಿಗಳಿಗೆ 28.08 ಲಕ್ಷ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.
ಗ್ಯಾರಂಟಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ನೆರವಾಗಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಅವರ ಶಕ್ತಿ ವೃದ್ಧಿಸಿದೆ. ಪಂಚಗ್ಯಾರಂಟಿ ಯೋಜನೆಗಳು ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಶಕ್ತಿವಂತರನ್ನಾಗಿ ಮಾಡಿದೆ. ಮಲ್ಲಿಗೆನಹಳ್ಳಿಯಲ್ಲಿ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಹನುಮಂತ ದೇವಸ್ಥಾನದ ನಿರ್ಮಾಣಕ್ಕೆ 12 ಲಕ್ಷ ರೂ. ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ಗ್ಯಾರಂಟಿ ಯೋಜನೆಗಳು ಜನರಿಗೆ, ಸಮಾಜಕ್ಕೆ ನೆರವಾಗುತ್ತಿವೆ ಎಂದರು.
ಆರು ಬಾರಿ ಅಪ್ಪಾಜಿ ಶಾಮನೂರು ಶಿವಶಂಕರಪ್ಪ ಅವರನ್ನು ಗೆಲ್ಲಿಸಿದಂತೆ ಸಮರ್ಥ ಶಾಮನೂರು ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಬೇಕು. ಗ್ಯಾರಂಟಿ ಯೋಜನೆಗಳಿಗೆ, ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಉಪಾಧ್ಯಕ್ಷರುಗಳಾದ ದಿನೇಶ್ ಗೂಳಿಗೌಡ, ಮೆಹರೋಜ್ ಖಾನ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಗ್ಯಾರಂಟಿ ಸಮಿತಿಯ ಜಿಲ್ಲಾ, ತಾಲೂಕು ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು


