ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

D.K.Shivakumar: ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು.

Aug 15, 2026 - 11:33
ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು: ಕರ್ನಾಟಕದಾದ್ಯಂತ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆ ಕಟ್ಟಿದೆ. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು.

ರಾಜ್ಯದ ಜನರನ್ನುದ್ದೇಶಿಸಿ ಅವರು ಮಾತನಾಡಿದರು. ನಮ್ಮ ನಾಡಿನ 7.5 ಕೋಟಿ ಕನ್ನಡಿಗರಿಗೆ ಹಾಗೂ ಎಲ್ಲಾ ಭಾರತೀಯರಿಗೆ 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಈ ಪವಿತ್ರ ದಿನದಂದು ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದರು. 

ಸ್ವಾತಂತ್ರ್ಯ ಸಿಕ್ಕ ನಂತರವು ನಮ್ಮ ದೇಶ ಹಲವು ಸವಾಲುಗಳನ್ನು ಎದುರಿಸುತ್ತಿತ್ತು. ಅಂತಹ ಸಮಯದಲ್ಲೂ ದೇಶವನ್ನು ಸದೃಡವಾಗಿ ಕಟ್ಟುವ ಕೆಲಸ ನಡೆಯುತ್ತಲೇ ಇತ್ತು. ಈ ಹಾದಿಯಲ್ಲಿ ಮಹಾತ್ಮ ಗಾಂಧಿ, ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿ ಅವರು ದುಷ್ಟಶಕ್ತಿಗಳ ದಾಳಿಗೆ ಬಲಿಯಾಗಿ ಹುತಾತ್ಮರಾದರು ಎಂದು ಹೇಳಿದರು.

ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ, ಅವರ ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ದೇಶದ ಗಡಿ ಕಾಯಲು ತಮ್ಮ ಪ್ರಾಣ ಕೊಟ್ಟ ಹೆಮ್ಮೆಯ ಸೈನಿಕರ ತ್ಯಾಗವನ್ನು ನಾವು ಸದಾ ನೆನಪಿಸಿಕೊಳ್ಳೋಣ. ಅವರ ಆಶಯದಂತೆ ನಾಡಿನ ಎಲ್ಲಾ ಜನರನ್ನು ಒಳಗೊಂಡ ಅಭಿವೃದ್ಧಿಯ ಕಡೆಗೆ ನಾವು ನೀವು ಒಟ್ಟಾಗಿ ಸಾಗೋಣ ಎಂದು ತಿಳಿಸಿದರು. 

ನಾನು ಮುಖ್ಯಮಂತ್ರಿಯಾದ ಎರಡು ತಿಂಗಳಿನಲ್ಲಿ ಜನಸ್ನೇಹಿ ಹಾಗೂ ಜನಪರ ಆಡಳಿತ ನೀಡಲು ಹಲವು ಯೋಜನೆಗಳನ್ನು ಆರಂಭಿಸಿದ್ದೇನೆ. ಪಂಚಾಯಿತಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ, ಜನರ ಕುಂದು ಕೊರತೆ ಮತ್ತು ಸಮಸ್ಯೆಗಳನ್ನು ಆಲಿಸಲು ಹೊಸದಾಗಿ ಪ್ರತ್ಯೇಕವಾದ ಪ್ರಜಾಸೇವೆ ಇಲಾಖೆಯನ್ನು ಸ್ಥಾಪಿಸಿದ್ದೇವೆ ಎಂದರು.

ಬರ ಎದುರಿಸಲು ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಈಗ, ರಾಜ್ಯ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನಮ್ಮ ಸರ್ಕಾರ ಈ ಪರಿಸ್ಥಿತಿಯ ಗಂಭೀರತೆಯನ್ನು ಅರಿತಿದೆ. ಕುಡಿಯುವ ನೀರು, ಮೇವು ಹಾಗೂ ಅಗತ್ಯ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳುತ್ತಿದೆ. ವಿಭಾಗ ಮಟ್ಟದ ಸಭೆಗಳನ್ನು ನಡೆಸಿ ಸ್ಥಳದಲ್ಲೇ ತೀರ್ಮಾನಗಳನ್ನು ಕೈಗೊಂಡಿದ್ದೇನೆ. ಕೆರೆ-ಕಟ್ಟೆಗಳನ್ನು ತುಂಬಿಸಲು, ಕುಡಿಯುವ ನೀರಿನ ಮೂಲಗಳನ್ನು ಕಾಪಾಡಲು ಸೂಚನೆ ನೀಡಿದ್ದೇನೆ. ಬೆಂಗಳೂರಿನ ಜನತೆಗೆ ನೀರಿನ ಬವಣೆಯನ್ನು ತಪ್ಪಿಸಲು, ನಗರದ ಸುತ್ತಮುತ್ತವಿರುವ ಕೆರೆಗಳ ರಕ್ಷಣೆ ಮೂಲಕ ಅಂತರ್ಜಲವನ್ನು ಹೆಚ್ಚಿಸಲು ಒಂದು ಹೊಸ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇನೆ ಎಂದು ಹೇಳಿದರು. 

ಗ್ಯಾರಂಟಿ ಯೋಜನೆಗಳು ನಾಡಿನ ಜನರ ಬದುಕಿಗೆ ಹೊಸ ರೂಪ ಕೊಟ್ಟಿವೆ. ನಮ್ಮ ಸರ್ಕಾರದ  ಗುರಿ  ಸ್ಪಷ್ಟವಾಗಿದೆ. ಪ್ರತಿ ಕುಟುಂಬಕ್ಕೂ ಭದ್ರತೆ. ಪ್ರತಿ ನಾಗರಿಕನಿಗೂ ಗೌರವ. ಯುವಜನರಿಗೆ ಅವಕಾಶ. ಇದೇ ನಮ್ಮ ಮೂಲ ತತ್ವ. ಅದಕ್ಕಾಗಿಯೇ ನಾವು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಹಾಕಿರುವ ಅಡಿಪಾಯ. ಇವು ನಮ್ಮ ಜನರ ಮೇಲೆ ಹಾಕಿರುವ ಬಂಡವಾಳ. ಇದು 'ಕರ್ನಾಟಕ ಮಾದರಿ' ಎಂದೇ ಜನಪ್ರಿಯವಾಗಿದೆ ಹಾಗೂ ಇಡೀ ರಾಷ್ಟ್ರ ಅನುಸರಿಸುತ್ತಿದೆ ಎಂದು ತಿಳಿಸಿದರು.

ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ ಎಐ ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು. ಜನವರಿ 2027ರ ವೇಳೆಗೆ ಎಐ ಸರ್ಟಿಫಿಕೇಶ್‌ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ಜೊತೆಗೆ ಎಐ ಹಬ್‌ಗಳನ್ನು ಸ್ಥಾಪಿಸಲಾಗುವುದು ಎಂದರು.

ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಬಹಳ ಮುಖ್ಯ. ಎಲ್‌ಕೆಜಿ ಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಆಧುನಿಕ ಮೂಲ ಸೌಕರ್ಯ, ದ್ವಿಭಾಷಾ ಶಿಕ್ಷಣ, ಡಿಜಿಟಲ್ ತರಗತಿಗಳು, ವೃತ್ತಿ ಶಿಕ್ಷಣ ಹಾಗೂ ವಿದ್ಯಾರ್ಥಿ ಸಾರಿಗೆ ಸೌಲಭ್ಯಗಳನ್ನು ನೀಡಲು 1,000 ಸರ್ಕಾರಿ ಶಾಲೆಗಳನ್ನು 'ಕರ್ನಾಟಕ ಪಬ್ಲಿಕ್ ಶಾಲೆ'ಗಳಾಗಿ 2 ವರ್ಷದಲ್ಲಿ ಅಭಿವೃದ್ಧಿಪಡಿಸುತ್ತೇವೆ. ಇದರಿಂದ 10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕೃಷಿಯು ನಮ್ಮ ಆರ್ಥಿಕತೆಯ ಬೆನ್ನೆಲುಬು. ಬೆಳೆವಿಮಾ ಯೋಜನೆಯಡಿ 12.35 ಲಕ್ಷ ರೈತರಿಗೆ ರೂ.1,300 ಕೋಟಿ ಪರಿಹಾರ ನೀಡಿದ್ದೇವೆ. ಈ ಮುಂಗಾರು ಹಂಗಾಮಿನಲ್ಲೇ ದಾಖಲೆಯ 24.49 ಲಕ್ಷ ರೈತರು ಬೆಳೆ ವಿಮಾ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. 1.85 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ವಿಸ್ತರಿಸಿದ್ದೇವೆ. 184 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಿದ್ದೇವೆ ಎಂದರು.

ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಯೋಜನೆಯಡಿ ಕಳೆದ ಒಂದು ವರ್ಷದಲ್ಲಿ ರಾಜ್ಯದ 9 ಲಕ್ಷ ರೈತರ ಖಾತೆಗಳಿಗೆ ರೂ.2,600 ಕೋಟಿ ನೇರವಾಗಿ ವರ್ಗಾಯಿಸಿದ್ದೇವೆ. ನಮ್ಮ ನಂದಿನಿ ಉತ್ಪನ್ನಗಳು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಮನ್ನಣೆ ಪಡೆದಿವೆ. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದೇವೆ ಎಂದು ತಿಳಿಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.