Karnataka Weather: ಕರ್ನಾಟಕ ಹವಾಮಾನ ವರದಿ
Karnataka Weather: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ವಿಭಾಗದಲ್ಲಿ ಮಳೆಯಾಗುತ್ತದೆ.
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಉತ್ತಮವಾಗಿ ಮಳೆಯಾಗುತ್ತಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ತೀರದ ತಾಲ್ಲೂಕುಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆಯಿದೆ. ಸೆ.26 ರಿಂದ ಮಳೆಯ ಪ್ರಮಾಣ ಕಡಿಮೆಯಾಗಬಹುದು.
ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ. ಘಟ್ಟ ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗಬಹುದು. ಕೊಡಗು ಜಿಲ್ಲೆಯ ಅಲ್ಲಲ್ಲಿ ಸಣ್ಣ ಮಳೆಯಾಗಲಿದ್ದು, ಕೊಡಗು - ಹಾಸನ ಜಿಲ್ಲೆಯ ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ ಕೊನೆಗೆ ಪೂರ್ವದ ಗುಡುಗು ಮಳೆ ಆರಂಭ ಆಗಬಹುದು.
ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಭಾಗಶಃ ಮೋಡದ ವಾತಾವರಣ ಇರಲಿದ್ದು ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ತುಂತುರು, ಕೆಲವೆಡೆ ಸಾಮಾನ್ಯ ಮಳೆಯಾಗಬಹುದು. ನಾಳೆಯ ನಂತರ ಮಳೆ ಕಡಿಮೆ ಆದರೂ, ಸೆಪ್ಟೆಂಬರ್ 29 ರಿಂದ ಮತ್ತೆ ಗುಡುಗು ಮಳೆ ಆರಂಭವಾಗುವ ಮುನ್ಸೂಚನೆಯಿದೆ.
ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಇಂದು ಮೋಡದ ವಾತಾವರಣವಿರಲಿದೆ. ಬೀದರ್, ಕಲಬುರಗಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ತುಂತುರು - ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು. ಸೆ.26 ರಿಂದ ಮಳೆ ಕಡಿಮೆಯಾಗಲಿದ್ದು, ಬಿಸಿಲಿನ ವಾತಾವರಣ ಆರಂಭವಾಗಬಹುದು.
ಬಂಗಾಳಕೊಲ್ಲಿಯ ಲೋ ಪ್ರೆಷರ್ ಈಗಾಗಲೇ ಒರಿಸ್ಸಾ ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಭೂ ಪ್ರವೇಶಿಸಿದ್ದು, ಇದು ಉತ್ತರ ದಿಕ್ಕಿನಲ್ಲಿ ಹಿಮಾಲಯದತ್ತ ಚಲಿಸಬಹುದು. ಪೂರ್ವ ಭಾರತ ಹಾಗೂ ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಭಾರತದ ಪಶ್ಚಿಮ ಕರಾವಳಿ ಜಿಲ್ಲೆಗಳಲ್ಲಿ 2-3 ದಿನ ಉತ್ತಮ ಮಳೆಯಾಗಲಿದ್ದು, ಇದು ದುರ್ಬಲ ಆಗುತ್ತಿದ್ದಂತೆ ಸೆ.26 ರಿಂದ ರಾಜ್ಯದಲ್ಲಿ ಮಳೆ ಪೂರ್ತಿ ಕಡಿಮೆ ಆಗಬಹುದು. ಸೆಪ್ಟೆಂಬರ್ 29 ರಿಂದ ದಕ್ಷಿಣ ಕರ್ನಾಟಕದಲ್ಲಿ ಪೂರ್ವದ ಗುಡುಗು ಮಳೆ ಆರಂಭವಾಗುವ ನೀರಿಕ್ಷೆಯಿದೆ.