450ಕ್ಕೂ ಹೆಚ್ಚು ಕಾರುಗಳ ಸರದಾರ! 'ಝೀರೋ ಟು ಹೀರೋ' ಪಯಣದ ರಮೇಶ್ ಬಾಬು

Ramesh Babu: 'ಝೀರೋ ಟು ಹೀರೋ' ಆದ ರಮೇಶ್ ಬಾಬು ಅವರ ಪ್ರೇರಣಾದಾಯಕ ಸಾಧನೆಯ ಕಥೆ ಇಲ್ಲಿದೆ.

Sep 29, 2026 - 19:25
Sep 29, 2026 - 19:26
450ಕ್ಕೂ ಹೆಚ್ಚು ಕಾರುಗಳ ಸರದಾರ! 'ಝೀರೋ ಟು ಹೀರೋ' ಪಯಣದ ರಮೇಶ್ ಬಾಬು

ಬೆಂಗಳೂರು: ಬದುಕಿನಲ್ಲಿ ಎದುರಾದ ಸವಾಲುಗಳನ್ನೇ ಮೆಟ್ಟಿಲಾಗಿಸಿಕೊಂಡು, ಬರಿಗೈಯಿಂದ ಆರಂಭಿಸಿ ಇಂದು ಬೆಂಗಳೂರಿನ ಪ್ರತಿಷ್ಠಿತ 
ಆರ್‌ಟಿಟಿ ಪ್ರೈ.ಲಿ ಸಂಸ್ಥೆಯ ಮೂಲಕ ಲಗ್ಜುರಿ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ರಮೇಶ್ ಬಾಬು ಅವರದ್ದು ನಿಜಕ್ಕೂ ಪ್ರೇರಣಾದಾಯಕ ಸಾಧನೆಯ ಕಥೆ.

ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ರಮೇಶ್ ಬಾಬು, ಪೂರ್ವಜರಿಂದ ಬಂದ ಕ್ಷೌರಿಕ ವೃತ್ತಿಯ ಮೂಲಕ ಜೀವನ ಆರಂಭಿಸಿದರು. 1996ರಲ್ಲಿ ತಮ್ಮದೇ ಒಂದು ಕಾರನ್ನು ಖರೀದಿಸಿ, ಅದನ್ನು ಬಾಡಿಗೆಗೆ ಓಡಿಸುವ ಮೂಲಕ ಟ್ರಾವೆಲ್ಸ್ ಕ್ಷೇತ್ರಕ್ಕೆ ಕಾಲಿಟ್ಟರು. ಒಂದು ಕಾರಿನಿಂದ ಆರಂಭವಾದ ಈ ಪಯಣವಿಂದು 450ಕ್ಕೂ ಹೆಚ್ಚು ಕಾರುಗಳ ಬೃಹತ್ ಸಾರಥ್ಯದವರೆಗೆ ಬೆಳೆದಿದೆ.

ಟೊಯೋಟಾ, ಮಾರುತಿ ಸುಜುಕಿ ಸೇರಿದಂತೆ ಸಾಮಾನ್ಯ ಕಾರುಗಳಿಂದ ಹಿಡಿದು ಬಿಎಂಡಬ್ಲ್ಯು, ಮರ್ಸಿಡೀಸ್, ಆಡಿ, ರೇಂಜ್ ರೋವರ್ ಹಾಗೂ ರೋಲ್ಸ್ ರಾಯ್ಸ್ ವರೆಗೆ ಹತ್ತಾರು ಕಂಪನಿಯ ಕಾರುಗಳಿಗೆ ಮಾಲೀಕರಾಗಿದ್ದಾರೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ದೇಶ-ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುವ ಗಣ್ಯರು ಹಾಗೂ ಪ್ರತಿಷ್ಠಿತ ಸಭೆ-ಸಮಾರಂಭಗಳಿಗೆ ಅವರ ಸಂಸ್ಥೆ ಸಾರಿಗೆ ಸೇವೆ ನೀಡುತ್ತಿದೆ.

ಸುಮಾರು 370ಕ್ಕೂ ಹೆಚ್ಚು ಶಿಸ್ತುಬದ್ಧ ಚಾಲಕರ ತಂಡವನ್ನು ಹೊಂದಿರುವ ರಮೇಶ್ ಬಾಬು ಅವರ ಸಂಸ್ಥೆ, ಲಗ್ಜುರಿ ಟೂರಿಸಂ ಮತ್ತು ಟ್ರಾವೆಲ್ ಕ್ಷೇತ್ರದಲ್ಲಿ ತನ್ನದೇ ಆದ ವಿಶ್ವಾಸಾರ್ಹತೆಯನ್ನು ಗಳಿಸಿದೆ.

ಇತ್ತೀಚೆಗೆ ನಡೆದ ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ ಸಮಾರಂಭದಲ್ಲಿ ಲಗ್ಜುರಿ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ವಿಭಾಗದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವುದು ಅವರ ಈ ಸುದೀರ್ಘ ಪಯಣಕ್ಕೆ ಮತ್ತೊಂದು ಮಹತ್ವದ ಗೌರವವಾಗಿದೆ.

ಆದರೆ ಉದ್ಯಮದಲ್ಲಿ ಎತ್ತರಕ್ಕೇರಿದರೂ ರಮೇಶ್ ಬಾಬು ಅವರು ತಮ್ಮ ಮೂಲ ವೃತ್ತಿಯನ್ನು ಮರೆತಿಲ್ಲ. ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ತಮ್ಮದೇ ಸೆಲೂನ್ ಹೊಂದಿರುವ ಅವರು, ಇಂದಿಗೂ ಪ್ರತಿನಿತ್ಯ ಕನಿಷ್ಠ ಮೂವರು ಗ್ರಾಹಕರಿಗೆ ಕ್ಷೌರಿಕ ಸೇವೆ ನೀಡುತ್ತಾರೆ. ಪೂರ್ವಜರಿಂದ ಬಂದ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಅಲ್ಲ, ತಮ್ಮ ಹೆಮ್ಮೆಯಾಗಿ ಅವರು ಮುಂದುವರಿಸಿಕೊಂಡು ಬಂದಿದ್ದಾರೆ.

ತಮ್ಮ ಯಶಸ್ಸಿನ ಹಿಂದೆ ಬಾಲ್ಯದಲ್ಲಿ ನಂದಿನಿ ಅಶೋಕ್, ನೀಡಿದ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ರಮೇಶ್ ಬಾಬು ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ. 56ರ ಹರೆಯದಲ್ಲಿಯೂ ಸದಾ ನಗುಮುಖದ ಸರಳತೆ ಹಾಗೂ ಸಜ್ಜನಿಕೆಯಿಂದ ಕಾಣಿಸಿಕೊಳ್ಳುವ ರಮೇಶ್ ಬಾಬು, ತಮ್ಮ ಮಕ್ಕಳನ್ನು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿಸಿ ಯಶಸ್ವಿಗೊಳಿಸಿದ್ದಾರೆ. ಇದೀಗ ತಮ್ಮ ಪುತ್ರನನ್ನೂ ಉದ್ಯಮದತ್ತ ಸಜ್ಜುಗೊಳಿಸುತ್ತಿದ್ದಾರೆ.

ರಾಜ್ಯಮಟ್ಟದ ಪ್ರವಾಸೋದ್ಯಮ ಪ್ರಶಸ್ತಿಗೆ ಭಾಜನರಾದ ರಮೇಶ್ ಬಾಬು ಅವರಿಗೆ 'ಡೇಟುಡೇ ನ್ಯೂಸ್' ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ರವಿಶಂಕರ್‌ ಬೆಟ್ಟಂಪಾಡಿ ಮಾಧ್ಯಮ ಕ್ಷೇತ್ರದಲ್ಲಿ 20 ವರ್ಷಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿದ್ದು, ಕನ್ನಡದ ಹಲವು ಪ್ರಮುಖ ಪತ್ರಿಕೆಗಳು ಹಾಗೂ ನ್ಯೂಸ್‌ ಚಾನೆಲ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಡೇ2ಡೇ ನ್ಯೂಸ್‌ನ COO ಹಾಗೂ ಬಿಸಿನೆಸ್‌ ಹೆಡ್‌ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ.