ಜು.25, 26ರಂದು ಎಸ್‍ಐಆರ್ ಮಹಾಸಂಪರ್ಕ ಅಭಿಯಾನ, 1 ಕೋಟಿ ಮನೆ ತಲುಪುವ ಗುರಿ: ವಿಜಯೇಂದ್ರ

B.Y.Vijayendra: ಬಿಜೆಪಿಯಿಂದ ಜುಲೈ 25, 26 ರಂದು ಎಸ್‍ಐಆರ್ ಮಹಾಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Jul 21, 2026 - 14:38
ಜು.25, 26ರಂದು ಎಸ್‍ಐಆರ್ ಮಹಾಸಂಪರ್ಕ ಅಭಿಯಾನ, 1 ಕೋಟಿ ಮನೆ ತಲುಪುವ ಗುರಿ: ವಿಜಯೇಂದ್ರ
ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ಬಿಜೆಪಿಯಿಂದ ಜುಲೈ 25, 26 ರಂದು ಎಸ್‍ಐಆರ್ ಮಹಾಸಂಪರ್ಕ ಅಭಿಯಾನ (SIR Maha Sampark Abhiyan) ಹಮ್ಮಿಕೊಳ್ಳಲಾಗಿದ್ದು, ಒಂದು ಕೋಟಿ ಮನೆಗಳನ್ನು ತಲುಪುವ ಉದ್ದೇಶವಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಹೇಳಿದರು.

ನಗರದಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಎಸ್‍ಐಆರ್ ನಡೆಯುತ್ತಿದ್ದು, ಈ ಹಿನ್ನೆಲೆ ಮಹಾಸಂಪರ್ಕ ಅಭಿಯಾನ ಕೈಗೊಳ್ಳಲಾಗುವುದು. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಮುಖಂಡರ ನೇತೃತ್ವದಲ್ಲಿ ಈ ಅಭಿಯಾನ ಜರುಗಲಿದೆ. ಪಕ್ಷದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಿಂದಿನ ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಇದರಲ್ಲಿ  ಪಾಲ್ಗೊಳ್ಳುವರು ಎಂದು ತಿಳಿಸಿದರು.

ಮನೆಮನೆಗೆ ಹೋಗಿ ಎನ್ಯೂಮರೇಷನ್ ಫಾರಂ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮತದಾರರಲ್ಲಿನ ತೊಂದರೆ ಹಾಗೂ ಗೊಂದಲಗಳನ್ನು ಪರಿಹರಿಸಲಾಗುವುದು. ಎಸ್‍ಐಆರ್ ಯಶಸ್ವಿಯಾಗಿ ನಡೆಯಲು ಬೆಂಬಲ ನೀಡಲಾಗುವುದು. ಪ್ರತಿ ಕಾರ್ಯಕರ್ತರು ಕನಿಷ್ಠ 20 ಮನೆಗಳನ್ನು ತಲುಪಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಭೀಕರ ಬರಗಾಲ:

ಮಳೆ ಕೊರತೆಯಿಂದ ಭೀಕರ ಬರಗಾಲ ಬಂದಿದೆ. ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರ ಬೆಂಗಳೂರಿನಲ್ಲೇ ಉಳಿದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದೆ. ಆದರೆ, ಯಾವುದೇ ಸಚಿವರು ರಾಜ್ಯ ಪ್ರವಾಸ ಮಾಡುತ್ತಿಲ್ಲ. ರೈತರ ಸಮಸ್ಯೆ ಆಲಿಸುತ್ತಿಲ್ಲ ಎಂದರು.

ಸಿಎಂ ಡಿ.ಕೆ.ಶಿವಕುಮಾರ್ ಅವರು ರೈತರ ಬಗ್ಗೆ ಕಾಳಜಿ ವಹಿಸಲಿ. ಬಿತ್ತನೆ ಮಾಡಿದ ರೈತರು ಬೀದಿಗೆ ಬಂದಿದ್ದಾರೆ. ಬರವನ್ನು ಅರಿತುಕೊಂಡು ರಾಜ್ಯ ಸರ್ಕಾರ ಸ್ಪಂದಿಸಬೇಕು. ಸಚಿವರು ಜಿಲ್ಲಾ ಪ್ರವಾಸ ಮಾಡಬೇಕು. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಚಿವ ಸಂಪುಟ ವಿಸ್ತರಣೆಯಾಗಿರಲಿಲ್ಲ. ಆಗ ಅವರು ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡಿ, ರೈತರ ಸಂಕಷ್ಟ ಆಲಿಸಿದ್ದರು. ನೆರೆ ಪೀಡಿತರಿಗೆ ಪರಿಹಾರ ನೀಡಿದ್ದರು ಎಂದು ತಿಳಿಸಿದರು.

ಪ್ರತಿಭಟನೆ ಹಿಂದೆ ಷಡ್ಯಂತ್ರ:

ದೆಹಲಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ. ಇದರ ನೆಪದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ನಡೆದಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ವಿರೋಧವಿಲ್ಲ. ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆದಿದೆ. ದೇಶವಿರೋಧಿ ಹೇಳಿಕೆ ನೀಡಿದ್ದಾರೆ. ಯುವಕರನ್ನು ಪ್ರತಿಭಟನೆಗೆ ಮುಂದೆ ಬಿಟ್ಟು ವಿ.ಪಕ್ಷಗಳು ಷಡ್ಯಂತ್ರ ಮಾಡಿವೆ ಎಂದು ಆರೋಪಿಸಿದರು.
 
ಈ ಸಂಬಂಧ ಸಿದ್ದರಾಮಯ್ಯ ಹೇಳಿಕೆ ನೋಡಿದ್ದೇನೆ. ನರೇಂದ್ರ ಮೋದಿ ದುರ್ಬಲ, ದುಷ್ಟ ರಕ್ಷಕ ಪ್ರಧಾನಿ ಎಂದು ಹೇಳಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿಯಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ, ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆಗ ಅವರ ಕಾಳಜಿ ಎಲ್ಲಿ ಹೋಗಿತ್ತು. ಎಷ್ಟು ಹುದ್ದೆ ಭರ್ತಿ ಮಾಡಿ ಅವರ ಜೀವನ ಕಟ್ಟಿಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
 
ಯುವಕರಲ್ಲಿ ವಿಷಬೀಜ ಬಿತ್ತಬೇಡಿ:

ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಮರು ಪರೀಕ್ಷೆ ಮಾಡಿದೆ. ಇಂತಹ ವಿಚಾರಗಳನ್ನು ಇಟ್ಟುಕೊಂಡು ಯುವಕರಲ್ಲಿ ವಿಷಬೀಜ ಬಿತ್ತಲು ಸಿದ್ದರಾಮಯ್ಯ ಹೋಗಬಾರದು. ಇದರಿಂದ ಯಾವ ಪ್ರಯೋಜವಿಲ್ಲ. ತಾವು ಸಿಎಂ ಆಗಿದ್ದಾಗ ಏನು ಕೊಡುಗೆ ನೀಡಿದ್ದೀರಿ ಎಂಬುದನ್ನು ತಿಳಿಸಿ ಎಂದು ಒತ್ತಾಯಿಸಿದರು. 

ಕನಕಪುರ ಸಮೀಪವೇ ವಿಮಾನ ನಿಲ್ದಾಣ ಬೇಡ:

ಎರಡನೇ ವಿಮಾನ ನಿಲ್ದಾಣವನ್ನು ಕನಕಪುರದ ಸಮೀಪವೇ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಇದಕ್ಕೆ ವಿರೋಧಿಸಿ ಪತ್ರ ಬರೆದಿದ್ದೇನೆ. ಡಿಕೆಶಿ ಕನಕಪುರದ ಸಿಎಂ ಅಲ್ಲ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯೋಜನೆಯನ್ನು ತೀರ್ಮಾನ ಮಾಡುವಾಗ ರಿಯಲ್ ಎಸ್ಟೇಟ್ ಹಿತಾಸಕ್ತಿ ಬದಲು ರಾಜ್ಯದ ಹಿತಾಸಕ್ತಿ ಇರಲಿ ಎಂದು ಆಗ್ರಹಿಸಿದ್ದೇನೆ. 2ನೇ ವಿಮಾನ ನಿಲ್ದಾಣ ತುಮಕೂರು ಅಕ್ಕ-ಪಕ್ಕ ಬಂದರೆ 7-8 ಜಲ್ಲೆಗಳಿಗೆ ಲಾಭವಾಗಲಿದೆ. ಬೆಂಗಳೂರು ನಗರದ ಮೇಲೆ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು. 
 
ಗೃಹ ಲಕ್ಷ್ಮಿ ಗೊಂದಲ:

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆಯ ಗೊಂದಲವನ್ನು ರಾಜ್ಯ ಸರ್ಕಾರವೇ ಸೃಷ್ಟಿಸಿದೆ. ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂಬ ನೆಪದಲ್ಲಿ ಒಂದಷ್ಟು ಷರತ್ತು ಹಾಕಿ, 5=6 ತಿಂಗಳು ಮುಂದೂಡಿದರೆ. ಆರ್ಥಿಕ ಸಂಕಷ್ಟ ತಪ್ಪಲಿದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.