ಬೆಂಗಳೂರು: ಕರ್ನಾಟಕ ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. 2026-27ನೇ ಶೈಕ್ಷಣಿಕ ಸಾಲಿನ 9 ಮತ್ತು 10ನೇ ತರಗತಿಯಲ್ಲಿ ತೃತೀಯ ಭಾಷೆಯಾಗಿ ಕಲಿಸಲಾಗುತ್ತಿದ್ದ 'ಹಿಂದಿ' ವಿಷಯದ ಬದಲು, ಕೃತಕ ಬುದ್ಧಿಮತ್ತೆ (AI) ಆಧಾರಿತ ಶಿಕ್ಷಣವನ್ನು ಪರಿಚಯಿಸಲು ತೀರ್ಮಾನಿಸಿದೆ. ಈ ಯೋಜನೆಯು ಇದೇ ವರ್ಷದಿಂದ 1642 ಸರ್ಕಾರಿ ಪ್ರೌಢಶಾಲೆಗಳಲ್ಲಿ ಜಾರಿಗೆ ಬರಲಿದೆ.
ರಾಜ್ಯದಲ್ಲಿ ತ್ರಿ ಭಾಷಾ ಸೂತ್ರದಡಿ ಹಿಂದಿ ಭಾಷೆಯನ್ನು ಐಚ್ಛಿಕವಾಗಿ ಕಲಿಸಲಾಗುತ್ತಿತ್ತು. ಅದಕ್ಕೆ ಪರ್ಯಾಯವಾಗಿ ಜಾಗತಿಕ ತಂತ್ರಜ್ಞಾನ ಹಾಗೂ ಉದ್ಯೋಗ ಮಾರುಕಟ್ಟೆಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರದ 'ರಾಷ್ಟ್ರೀಯ ಶಿಕ್ಷಣ ನೀತಿ' ಆಶಯದಂತೆ ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಲಾಗಿದೆ.
ಯಾವ ಶಾಲೆಗಳಲ್ಲಿ ಜಾರಿ?
ಒಟ್ಟು 1642 ಶಾಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಇದರಲ್ಲಿ ಹೊಸದಾಗಿ ಆರಂಭಗೊಂಡಿರುವ 1,180 ಸರ್ಕಾರಿ ಪ್ರೌಢಶಾಲೆಗಳು, ಈಗಾಗಲೇ ಸಮಗ್ರ ಶಿಕ್ಷಣ ಕರ್ನಾಟಕದಡಿ ಕಾರ್ಯನಿರ್ವಹಿಸುತ್ತಿರುವ 381 ಶಾಲೆಗಳು ಹಾಗೂ 81 ಕರ್ನಾಟಕ ಪಬ್ಲಿಕ್ ಶಾಲೆಗಳು ಕೂಡ ಸೇರಿವೆ.
ಶಿಕ್ಷಕರ ನೇಮಕಾತಿ ಹೇಗೆ?
ಎಐ ವಿಷಯವನ್ನು ಬೋಧಿಸಲು ವಿಶೇಷ ಅರ್ಹತೆಯುಳ್ಳ ಶಿಕ್ಷಕರನ್ನು ನೇಮಿಸಲು ಸೂಚನೆ ನೀಡಲಾಗಿದೆ. ಕಂಪ್ಯೂಟರ್ ಸೈನ್ಸ್, ಕಂಪ್ಯೂಟೇಶನಲ್ ಸೈನ್ಸ್, ಇನ್ಫರ್ಮೇಶನ್ ಸೈನ್ಸ್ ನಲ್ಲಿ ಡಿಪ್ಲೊಮಾ, ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಈಗಿರುವ ಶಿಕ್ಷಕರಿಗೆ ಹಂತ-ಹಂತವಾಗಿ ವಿಶೇಷ ತರಬೇತಿ ನೀಡಲು ಸಹ ಇಲಾಖೆಯು ಚಿಂತನೆ ನಡೆಸಿದೆ.
ಈ ಯೋಜನೆ ಕೇವಲ 9 ಮತ್ತು 10ನೇ ತರಗತಿಗೆ ಸೀಮಿತವಾಗದೆ, ಮುಂದಿನ ದಿನಗಳಲ್ಲಿ 6 ರಿಂದ 8ನೇ ತರಗತಿಯಲ್ಲೂ ಎಐ ಶಿಕ್ಷಣವನ್ನು ಪರಿಚಯಿಸಲು ಶಿಕ್ಷಣ ಇಲಾಖೆಯು ಯೋಜನೆ ರೂಪಿಸಿದೆ. ಇದರಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೂ ಅತ್ಯಾಧುನಿಕ ತಂತ್ರಜ್ಞಾನದ ಅರಿವು ಸಿಗಲಿದ್ದು, ಅವರಲ್ಲಿ ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ಹಾಗೂ ಡಿಜಿಟಲ್ ಕೌಶಲ್ಯ ಹೆಚ್ಚಲಿದೆ.
'ಹಿಂದಿ' ಬದಲು ಎಐ ವಿಷಯ ಆಯ್ಕೆ ಮಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿರಲಿದೆ. ರಾಜ್ಯ ಸರ್ಕಾರದ ಈ ದೂರದೃಷ್ಟಿಯ ನಿರ್ಧಾರಕ್ಕೆ ಶಿಕ್ಷಣ ತಜ್ಞರು ಹಾಗೂ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.