ಬರ ಪರಿಸ್ಥಿತಿ ಸಮರ್ಥ ನಿರ್ವಹಣೆ, ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ

Dr.G.Parameshwara: ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡಲಾಗುವುದು. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಹೇಳಿದರು.

Jul 16, 2026 - 15:40
ಬರ ಪರಿಸ್ಥಿತಿ ಸಮರ್ಥ ನಿರ್ವಹಣೆ, ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ
ಬೆಂಗಳೂರು: ಸೂಪರ್ ಎಲ್ ನಿನೋ  ಹವಾಮಾನ ವೈಪರೀತ್ಯ ಭಾರತದ ಮೇಲೆ ಗಂಭೀರ ಪರಿಣಾಮ ಬೀರಿದೆ. ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಶೇ.42% ಮತ್ತು ಜುಲೈ ತಿಂಗಳಲ್ಲಿ ಶೇ.34% ಮಳೆ ಕೊರತೆಯಾಗಿದೆ. ಅಲ್ಪ-ಸ್ವಲ್ಪ ಮಳೆಯಿಂದ ರೈತರು ಬೀಜ ಬಿತ್ತನೆ ಮಾಡಿದ್ದು, ಈಗ ನಷ್ಟಕ್ಕೆ ಒಳಗಾಗಿದ್ದಾರೆ. 245 ತಾಲ್ಲೂಕುಗಳ ಪೈಕಿ 15 ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. 157 ತಾಲೂಕುಗಳಲ್ಲಿ ಕೊರತೆ, 14 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ (Dr.G.Parameshwara) ಹೇಳಿದರು.
 
ಪ್ರಸ್ತುತ ರಾಜ್ಯದ ಬರ ಪರಿಸ್ಥಿತಿ ಕುರಿತು ಮಾಧ್ಯಮಗಳಿಗೆ ವಿವರಿಸಿದರು. ಹಲವು ಜಿಲ್ಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಬೆಳಗಾವಿ ವಿಭಾಗದಲ್ಲಿ ಎರಡು ಸಭೆಗಳು, ಕಲಬುರಗಿ ವಿಭಾಗದಲ್ಲಿ ಒಂದು ಸಭೆ, ಚಿತ್ರದುರ್ಗದಲ್ಲಿ ಒಂದು ಸಭೆ ಮಾಡಿದ್ದೇನೆ. ಮತ್ತೊಮ್ಮೆ ಮುಖ್ಯಮಂತ್ರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಾಗುವುದು. ನಮ್ಮ ಉಳಿದ ಸಚಿವರು ಸಹ ನಿರಂತರವಾಗಿ ಮಳೆ, ಬೆಳೆ, ಜನ ಜಾನುವಾರುಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದರು. 
 
ಬರಪರಿಸ್ಥಿತಿಯ ನಿರ್ವಹಣೆಗೆ ನಮ್ಮ ಸರ್ಕಾರ ಎಂದಿಗೂ ಹಿಂದು-ಮುಂದು ನೋಡಿಲ್ಲ. ಈಗಾಗಲೇ ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ ರೂ.5 ಕೋಟಿ ಒದಗಿಸಲಾಗಿದೆ. ಈ ಹಣವನ್ನು ಕುಡಿಯುವ ನೀರಿಗೆ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ರೂ.329.61 ಕೋಟಿಗಳಷ್ಟು ಹಣವಿದೆ. ನಿರಂತರವಾಗಿ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್/ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.
 
ರಾಜ್ಯದಲ್ಲಿ ಜೂನ್ 1 ರಿಂದ ಜುಲೈ 15 ರವರೆಗೆ ಶೇ.37% ಪ್ರಮಾಣದಲ್ಲಿ ಮಳೆಯು ವಾಡಿಕೆಗಿಂತ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ಮತ್ತಷ್ಟು ಕಡಿಮೆಯಾಗಿದೆ. ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆಯೇ ಆಗಿಲ್ಲ. ಜುಲೈ ತಿಂಗಳಲ್ಲಿ 10 ಜಿಲ್ಲೆಗಳಲ್ಲಿ ಶೇ.30 ರಿಂದ ಶೇ.60% ಮಳೆ ಕೊರತೆಯಾಗಿದೆ. 13 ಜಿಲ್ಲೆಗಳಲ್ಲಿ ಶೇ.60 ರಿಂದ ಶೇ.97% ಮಳೆ ಕೊರತೆಯಾಗಿದೆ. ಕೇವಲ 8 ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಹೇಳಿದರು. 
 
ಬರೋಬ್ಬರಿ 84.10 ಲಕ್ಷ ಹೆಕ್ಟೇರುಗಳಷ್ಟು ಪ್ರದೇಶ ಬಿತ್ತನೆಗೆ ಯೋಗ್ಯವಾಗಿದೆ. ಒಟ್ಟು 40.68 ಲಕ್ಷ ಹೆಕ್ಟೇರುಗಳಷ್ಟು ಬಿತ್ತನೆಯಾಗಿದೆ. ಆದರೆ ಬಿತ್ತನೆಯಾದ ಬೆಳೆಗಳು ಕೂಡ ಒಣಗುತ್ತಿವೆ. ಕೆಲವು ಬಿತ್ತನೆ ಮಾಡಿದ ಬೀಜಗಳು ಕೂಡ ಹುಟ್ಟಿಲ್ಲ ಎಂದು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಿದರು.  
 
ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿ, ಜನರು ಗುಳೆ ಹೋಗುವುದನ್ನು ತಪ್ಪಿಸಿ, ಅವರಿಗೆ ಉದ್ಯೋಗ ನೀಡಬೇಕು. ರಾಜ್ಯದ ಕಂದಾಯ ಸಚಿವನಾಗಿ ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವರು ಮತ್ತು ಕೃಷಿ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು. 
 
ರಾಜ್ಯದಲ್ಲಿ ನೀರಿನ‌ ಸಂಪನ್ಮೂಲಗಳು ಬತ್ತಿ ಹೋಗಿವೆ‌. ಬರ ಇರುವುದರಿಂದ ತಕ್ಷಣಕ್ಕೆ ಘೋಷಣೆ ಮಾಡಲು ಕೇಂದ್ರ ಸರ್ಕಾರದ ನಿಯಮಗಳಲ್ಲಿ ಕೆಲವು ಅಡ್ಡಿಗಳಿವೆ. ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ. ಇಂದು ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಹಾಗೂ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಪತ್ರ ಬರೆದು ಎನ್‌ಡಿಆರ್‌ಎಫ್ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಹೇಳಿದರು.