ಮಾಜಿ ಸಚಿವ ರಾಮಚಂದ್ರಗೌಡ ನಿಧನ: ಸಿಎಂ ಸಂತಾಪ

Former Minister Ramachandra Gowda Passed Away: CM Condoles: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರ ಗೌಡ (88) ಅವರು ವಿಧಿವಶರಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದರು.

Jul 14, 2026 - 14:32
Jul 14, 2026 - 14:46
ಮಾಜಿ ಸಚಿವ ರಾಮಚಂದ್ರಗೌಡ ನಿಧನ: ಸಿಎಂ ಸಂತಾಪ

ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರ ಗೌಡ (88) ವಿಧಿವಶರಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದರು. ಇಂದು (ಮಂಗಳವಾರ) ಬೆಳಗ್ಗೆ ನಿಧನರಾದ ರಾಮಚಂದ್ರಗೌಡ ಅವರ ನಿವಾಸಕ್ಕೆ ತೆರಳಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಧಾನಪರಿಷತ್ತಿನ ಸದಸ್ಯರಾಗಿ ಹಾಗೂ ಸರ್ಕಾರದ ಸಚಿವರಾಗಿ ಜನಸೇವೆ ಸಲ್ಲಿಸಿದ ರಾಮಚಂದ್ರ ಗೌಡರು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ನಾಯಕರಾಗಿದ್ದರು. ನನಗೆ ಹತ್ತಿರದ ಸಂಬಂಧಿಯಾಗಿದ್ದು, ಕಾರ್ಪೊರೇಟರ್ ಆಗಿ ಜನರ ನಡುವೆ ಬೆರತು ಅವರ ಕಷ್ಟಸುಖಗಳನ್ನು ಅರಿತು ಕೆಲಸ ಮಾಡುತ್ತಿದ್ದರು. ಬೆಂಗಳೂರು ನಗರದ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು ಎಂದು ಹೇಳಿದರು.

1985ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಸಾರಿಗೆ ಬಸ್‌ಗಳಲ್ಲಿ ಆಗಮಿಸಿ, ಪ್ರಚಾರ ಕಾರ್ಯ ಕೈಗೊಂಡಿದ್ದ ಸರಳ ವ್ಯಕ್ತಿತ್ವ ಅವರದ್ದಾಗಿತ್ತು. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ರಾಮಚಂದ್ರ ಗೌಡರು, ಸಮಾಜದ ಹಿತಕ್ಕಾಗಿ ತಮ್ಮ ಅಭಿಪ್ರಾಯವನ್ನು ನೇರ ಹಾಗೂ ನಿಷ್ಠುರವಾಗಿ ತಿಳಿಸುತ್ತಿದ್ದರು. ತಮ್ಮದೇ ಆದ ನೀತಿ ಸಿದ್ಧಾಂತಗಳೊಂದಿಗೆ ರಾಜಕಾರಣ ಮಾಡಿದರಲ್ಲದೇ, ರಾಜಕೀಯ ವಲಯದಲ್ಲಿ ಯಾರೊಬ್ಬರ ಬಗ್ಗೆಯೂ ದ್ವೇಷವಿರಿಸಿಕೊಳ್ಳದ ಅಜಾತಶತ್ರುವೆನಿಸಿದ್ದರು ಎಂದರು.

ಬಿಜೆಪಿಯ ಯಡಿಯೂರಪ್ಪ ಅವರು ತಮ್ಮೆಲ್ಲಾ ಪಕ್ಷದ ತೀರ್ಮಾನಗಳಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ನನ್ನೊಂದಿಗೂ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದರು. ತಮ್ಮ ಆರೋಗ್ಯ ಸಮಸ್ಯೆಯ ಹೊರತಾಗಿಯೂ, ನನ್ನ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಇಚ್ಚಿಸಿದ್ದರು. ಎರಡು ದಿನಗಳ ಹಿಂದೆ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ, ದುರಾದೃಷ್ಟವಶಾತ್ ಅವರು ವಿಧಿವಶರಾಗಿದ್ದು ದುಃಖದ ವಿಷಯ ಎಂದು ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಅವರು ಮಾಡಿದ ಭಾಷಣಗಳು ನಮ್ಮ ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತವೆ. ಸರಳ ಸಜ್ಜನಿಕೆಯ ರಾಜಕಾರಣಿ ಇಂದು ನಮ್ಮೊಂದಿಗಿಲ್ಲ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾವು ಕೂಡ ಭಾಗಿಯಾಗಿದ್ದು, ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.