ಒಂದು ತಿಂಗಳೊಳಗೆ ಭಾರತ್‌ ಜೋಡೋ ಯುವ ಸಂಘಗಳು ಅಸ್ತಿತ್ವಕ್ಕೆ: ಡಿಸಿಎಂ

Bharat Jodo Yuva Sanghas Formed Within a Month, DCM: ಒಂದು ತಿಂಗಳೊಳಗೆ 'ಭಾರತ್‌ ಜೋಡೋ ಯುವ ಸಂಘಗಳು' ಅಸ್ತಿತ್ವಕ್ಕೆ ಬರಲಿವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

Jul 14, 2026 - 14:57
ಒಂದು ತಿಂಗಳೊಳಗೆ ಭಾರತ್‌ ಜೋಡೋ ಯುವ ಸಂಘಗಳು ಅಸ್ತಿತ್ವಕ್ಕೆ: ಡಿಸಿಎಂ

ಬೆಂಗಳೂರು: ಯವಕರಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ 'ಭಾರತ್‌ ಜೋಡೋ ಯುವ ಸಂಘ'ಗಳನ್ನು ಸ್ಥಾಪಿಸಲು ತೀರ್ಮಾನಿಸಿದ್ದೇವೆ. ಪ್ರತಿ ಸಂಘಕ್ಕೆ ತಲಾ ರೂ.10 ಲಕ್ಷ ಅನುದಾನ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ (Dr.G.Parameshwara) ಹೇಳಿದರು. 

ನಗರದಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದರು. ರಾಹುಲ್‌ ಗಾಂಧಿ ಅವರು ದೇಶದ ಯುವಜನತೆಗೆ ಭಾರತದ ವೈವಿಧ್ಯಮಯ ಸಂಸ್ಕೃತಿ, ಹಾಗೂ ಇತಿಹಾಸದ ಸಂದೇಶವನ್ನು ತಲುಪಿಸಲು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂರ ಭಾರತ್‌ ಜೋಡೋ ಯಾತ್ರೆ ಕೈಗೊಂಡಿದ್ದರು. ಅದರ ನೆನಪಿಗಾಗಿ ವಿಶೇಷ ಕಾರ್ಯಕ್ರಮವನ್ನು ಘೋಷಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಇದೀಗ ಮುಖ್ಯಮಂತ್ರಿಗಳು ಪ್ರಸ್ತಾವನೆಯನ್ನು ಪುನರ್‌ಪರಿಶೀಲಿಸಿ, ಚರ್ಚೆಯ ಬಳಿಕ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.  

ಈ ಯೋಜನೆಯನ್ನು ಯುವ ಸಬಲೀಕರಣ & ಕ್ರೀಡಾ ಇಲಾಖೆಯ ಮುಖಾಂತರ ಅನುಷ್ಠಾನ ಮಾಡಲಾಗುವುದು. ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಸಹಕಾರ ನೀಡಲಿವೆ. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಸ್ಥಳೀಯ ಮಟ್ಟದ ಸಂಘ ರಚನೆಗೆ ಅಗತ್ಯವಾದ ಮಾರ್ಗಸೂಚಿಗಳನ್ನು ನಿನ್ನೆ ಬಿಡುಗಡೆಗೊಳಿಸಿರುವುದಾಗಿ ಹೇಳಿದರು. 

100 ರಿಂದ 250 ಸದಸ್ಯರೊಳಗಿನ ಸಂಘವನ್ನು ರಚಿಸಲಾಗುತ್ತದೆ. ಈ ಸಂಘಗಳು ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಯುವಕರಿಗೆ ತಿಳಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ವಾರ್ಷಿಕ ಪ್ರತಿ ಸಂಘಕ್ಕೆ ತಲಾ ರೂ.10 ಲಕ್ಷ ಅನುದಾನ ನೀಡಲು ನಿರ್ಧರಿಸಿದ್ದೇವೆ. ಯುವಕರ ಸಬಲೀಕರಣಕ್ಕಾಗಿ ಸಾವಿರ ಕೋಟಿಯವರೆಗೆ ಅನುದಾನ ವ್ಯಯಿಸಿದರೂ ಅದರಲ್ಲಿ ತಪ್ಪಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟದಲ್ಲಿ ಸುದೀರ್ಘವಾಗಿ ಚರ್ಚಿಸಿರುವುದಾಗಿ ಮಾಹಿತಿ ನೀಡಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.