ಪಟ್ಟೆ ಬಡಗನ್ನೂರು: ಮನುಷ್ಯ ತಾನು ಅಭಿವೃದ್ಧಿ ಆಗಬೇಕಾದರೆ, ಹೊಸ ರೀತಿಯಲ್ಲಿ ಯೋಚಿಸಬೇಕು. ಹಿರಿಯರು ಹಾಕಿದ ಪಂಕ್ತಿಯನ್ನು ಅನುಸರಿಸಬೇಕು. ಸಾಹಿತ್ಯ ರಚನೆಯಿಂದ ಒಬ್ಬ ವ್ಯಕ್ತಿ ಹೆಸರು ಮಾಡಿದಾಗ ಆ ಊರಿಗೆ, ಆತನಿರುವ ಸಂಸ್ಥೆಗೆ ಹೆಸರು ಬರುತ್ತದೆ ಎಂದು ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟರು ಹೇಳಿದರು.
ಇಲ್ಲಿ ಭಾನುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪುತ್ತೂರು ತಾಲೂಕು ಸಮಿತಿ ಮತ್ತು ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಥೆ-ಕವಿತೆ ರಚನೆಯ ಕಮ್ಮಟ'ವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕ ಗಣರಾಜ ಕುಂಬ್ಳೆ ಮಾತನಾಡಿ, ಮಕ್ಕಳಲ್ಲಿ ಸದಾ ಹೊಸತು ಬಯಸುವ ಜಾಯಮಾನವಿದು. ಹೊಸ ಹೊಸ ರೀತಿಯಲ್ಲಿ ಯೋಚನೆ, ಮಾತು ಹಾಗೂ ವಿನ್ಯಾಸಗಳಲ್ಲಿ ಬೆಳೆಯಬೇಕೆಂಬ ಉದ್ದೇಶದಿಂದ ಇಂತಹ ಕಮ್ಮಟವನ್ನು ಏರ್ಪಡಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು..
ವಿವಿಧ ಶಾಲೆಗಳಿಂದ ಸುಮಾರು 50 ವಿದ್ಯಾರ್ಥಿಗಳು ಈ ಕಮ್ಮಟದಲ್ಲಿ ಭಾಗವಹಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಿಘ್ನೇಶ್ ಹಿರಣ್ಯ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಗಣರಾಜ ಕುಂಬ್ಳೆ, ರಾಜಗೋಪಾಲ್ ಭಟ್ ಪಟ್ಟೆ, ನವೀನಕೃಷ್ಣ ಎಸ್. ಉಪ್ಪಿನಂಗಡಿ, ಶ್ರೀಶ ವಾಸವಿ ತುಳುನಾಡು ಅವರು ವಿದ್ಯಾರ್ಥಿಗಳಿಗೆ ಕಥೆ- ಕವಿತೆ ರಚನೆಯ ಬಗ್ಗೆ ತರಬೇತಿಯನ್ನು ನೀಡಿದರು.
ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಮನಾ ಬಿ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಚಿತ್ರಾ ಮಾತಾಜಿ ಧನ್ಯವಾದಗಳನ್ನು ಅರ್ಪಿಸಿದರು. ಆಂಗ್ಲ ಮಾಧ್ಯಮ ವಿಭಾಗದ ನವ್ಯಶ್ರೀ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.