ಕಲ್ಯಾಣ ಕರ್ನಾಟಕದ 80 ಗ್ರೆಡ್-1 ಕಾರ್ಯದರ್ಶಿಗಳಿಗೆ ಪಿಡಿಒ ಹುದ್ದೆಗಳಿಗೆ ಬಡ್ತಿ

Kalyana Karnataka: ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಸ್ಥಳೀಯ ವೃಂದದ ಗ್ರೇಡ್-1 ಕಾರ್ಯದರ್ಶಿಗಳಿಗೆ ಪಿಡಿಒ ಆಗಿ ಮುಂಬಡ್ತಿ ನೀಡಲಾಗಿದೆ.

Jul 16, 2026 - 16:05
ಕಲ್ಯಾಣ ಕರ್ನಾಟಕದ 80 ಗ್ರೆಡ್-1 ಕಾರ್ಯದರ್ಶಿಗಳಿಗೆ ಪಿಡಿಒ ಹುದ್ದೆಗಳಿಗೆ ಬಡ್ತಿ
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಸ್ಥಳೀಯ ವೃಂದದ ಗ್ರೇಡ್-1 ಕಾರ್ಯದರ್ಶಿಗಳಿಗೆ ಪಿಡಿಒ ಆಗಿ ಮುಂಬಡ್ತಿ ನೀಡಲಾಗಿದೆ. ಇಂದು (ಗುರುವಾರ) ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
 
ಇಲಾಖೆಯ ಆಯುಕ್ತಾಲಯದಲ್ಲಿ ನಡೆದ ಈ ಕೌನ್ಸೆಲಿಂಗ್‌ನಲ್ಲಿ ಪಿಡಿಒ ಹುದ್ದೆಗೆ ಬಡ್ತಿ ಪಡೆದ 80 ಗ್ರೇಡ್-1 ಕಾರ್ಯದರ್ಶಿಗಳು ಭಾಗಿಯಾಗಿದ್ದರು.
 
ಸಚಿವ ಈಶ್ವರ ಖಂಡ್ರೆ ಮಾತನಾಡಿ, ಗ್ರಾಮಗಳಲ್ಲಿ ಶಾಶ್ವತ ಹಾಗೂ ಗುಣಮಟ್ಟದ ಆಸ್ತಿ ಸೃಜಿಸುವಲ್ಲಿ ಪಿಡಿಒ, ಕಾರ್ಯದರ್ಶಿಗಳು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
 
ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಭಾರತದ ಜೀವನಾಡಿ. ಆದರೆ ಇಂದು ಗ್ರಾಮೀಣ ಯುವಕರು ನಗರಗಳಿಗೆ ಹೋಗಿ ನೆಲೆಸುತ್ತಿದ್ದು, ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತನೆ ಆಗುತ್ತಿವೆ. ತಮ್ಮ ಗ್ರಾಮದಲ್ಲೇ ಯುವಜನರಿಗೆ ಉದ್ಯೋಗ ಹಾಗೂ  ಮೂಲಭೂತ ಸೌಕರ್ಯ ಕಲ್ಪಿಸಿದರೆ, ಗ್ರಾಮಾಭಿವೃದ್ದಿಯೂ ಆಗುತ್ತದೆ. ವಲಸೆಯೂ ನಿಲ್ಲುತ್ತದೆ ಎಂದು ತಿಳಿಸಿದರು.
 
ಕಾರ್ಯದರ್ಶಿ ಮತ್ತು ಪಿಡಿಒಗಳು ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ, ಗಾಂಧೀಜಿ ಕಂಡ ಗ್ರಾಮ ರಾಜ್ಯದ ಕನಸು ನನಸಾಗುತ್ತದೆ. ಎಂದು ಹೇಳಿದರು. ಬಡ್ತಿ ಪಡೆದು ಸ್ಥಳ ನಿಯುಕ್ತಿ ಪಡೆದ ಪಿಡಿಒಗಳಿಗೆ ಶುಭ ಕೋರಿದರು.