ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಿಎಂ ಡಿಕೆಶಿ ಸಂವಾದ

Bengaluru: ಇಂದು (ಬುಧವಾರ) ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ & ನಿರ್ವಹಣೆ) ಮಸೂದೆ-2026ರ ಕುರಿತು ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

Jul 15, 2026 - 14:20
ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಿಎಂ ಡಿಕೆಶಿ ಸಂವಾದ

ಬೆಂಗಳೂರು: ಆಸ್ತಿ ಮಾಲೀಕರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು
ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಇಂದು (ಬುಧವಾರ) ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ & ನಿರ್ವಹಣೆ) ಮಸೂದೆ-2026ರ ಕುರಿತು ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

ಆಸ್ತಿ ಕೊಳ್ಳುವಾಗ, ಅದರ ಸಾಧಕ ಬಾಧಕಗಳನ್ನು ಮಾಲೀಕರೇ ನೋಡಿಕೊಳ್ಳುವಂತಾಗಬೇಕು. ಮಾಲೀಕರಾದ ಮೇಲೆ ಒಪ್ಪಂದ, ನೋಂದಣಿ ಹಾಗೂ ಬೇರೆ ಬೇರೆ ರೀತಿಯಲ್ಲಿ ತಲೆದೋರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ ಎಂದರು. 

ಜನರಿಗೆ ಸಹಾಯ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದೆ. ಅವರು ಕಷ್ಟಪಟ್ಟು ತಲೆಯ ಮೇಲೆ ಸೂರು ಕಟ್ಟಿಕೊಂಡಿದ್ದಾರೆ. ಅದು ಸುಲಭದ ಮಾತಲ್ಲ ಎಂದು ಹೇಳಿದರು. 

ರಾಜ್ಯದಲ್ಲಿ ಇ ಖಾತಾ ಕ್ರಾಂತಿ:

ಕಷ್ಟಪಟ್ಟು ಗಳಿಸಿರುವ ಆಸ್ತಿಯನ್ನು ಮಾಲೀಕರು  ಸರಿಯಾಗಿ ಅನುಭವಿಸಬೇಕೆನ್ನುವುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ ಇ ಖಾತಾವನ್ನು ಮನೆ ಬಾಗಿಲಿಗೆ ಕೊಡುವ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಕ್ರಾಂತಿಯನ್ನೇ ಉಂಟುಮಾಡಿದೆ. ಬೆಂಗಳೂರಿನ   40 ಲಕ್ಷ ಆಸ್ತಿಗಳಲ್ಲಿ 26 ಲಕ್ಷ ಆಸ್ತಿಗಳಿಗೆ ಇ-ಖಾತಾ ಮಾಡಿಕೊಡಲಾಗಿದೆ. ಇಡೀ ದೇಶದಲ್ಲಿ ಇಂಥ ಮತ್ತೊಂದು ವ್ಯವಸ್ಥೆ ಇಲ್ಲ ಎಂದು ತಿಳಿಸಿದರು. 

ದಾಖಲಾತಿಗಳ ಸರಾಗ ವರ್ಗಾವಣೆಗೆ ಕ್ರಮ: 

ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿವಿ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸರ್ಕಾರ ಸುಧಾರಣೆಗಳನ್ನು ತಂದಿದೆ. ಅಂತರ್ಜಲ ವೃದ್ಧಿ, ಕಾವೇರಿ 5ನೇ ಹಂತಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೆಲವು ಡೆವಲಪರ್‌ಗಳು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಅವರೊಂದಿಗೂ ಮಾತನಾಡಿ, ದಾಖಲಾತಿಗಳ ವರ್ಗಾವಣೆ ಸರಾಗವಾಗಿ ಆಗಬೇಕೆಂದು ಸೂಚಿಸಲಾಗುವುದು. ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು. 

ಕಾನೂನಿನ ಚೌಕಟ್ಟಿನಲ್ಲಿರುವ ಸಲಹೆಗಳಿಗೆ ಸ್ವಾಗತ:

ಆಗಸ್ಟ್ 6 ರವರೆಗೆ ಸಮಯಾವಕಾಶವಿದ್ದು, ಅಭಿಪ್ರಾಯಗಳು ಮತ್ತು ಸಲಹೆಗಳನ್ನು  ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಬರೆಯಬಹುದು. ಆಸ್ತಿ ಕೊಂಡವರಿಗೆ ಅನುಕೂಲವಾಗುವಂತೆ ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ ಎಂದರು. 

ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಉದ್ದೇಶ:
 
'ಈಸ್ ಆಫ್ ಬಿಸಿನೆಸ್'ಗಾಗಿ ನಗರದಲ್ಲಿ 5 ಕಾರ್ಪೊರೇಷನ್‌ಗಳನ್ನು ರಚಿಸಲಾಗಿದೆ. ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ ಬಳಿ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳ  ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ಬದ್ಧವಾಗಿದೆ. ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಉದ್ದೇಶ.  ವ್ಯಾಜ್ಯಗಳಿಗೆ ಹೋಗದೆ ಪರಿಹರಿಸಲು ಒತ್ತು ನೀಡಲಾಗುವುದು. ಜನರ ಧ್ವನಿಯೇ ಸರ್ಕಾರದ ಧ್ವನಿಯಾಗಬೇಕು. ಟೀಂ ಕರ್ನಾಟಕವಾಗಿ ನಾವೆಲ್ಲ ಕೆಲಸ ಮಾಡಬೇಕೆಂದು ಕರೆ ನೀಡಿದರು. 

ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧ:

ಬೆಂಗಳೂರಿನಲ್ಲಿ ಬಹಳ ವರ್ಷಗಳಿಂದ ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ನಗರದಲ್ಲಿ 1.35 ಕೋಟಿ ವಾಹನಗಳಿದ್ದು, ಗುಂಡಿಗಳನ್ನು ಮುಚ್ಚಲೆಂದೇ 4000 ಕೋಟಿ ವೆಚ್ಚ ಮಾಡಲಾಗಿದೆ ಎಂದರು. 

ಬಡವರೂ ಕೂಡ ಮನೆ ಕಟ್ಟಲು ಅಗತ್ಯ ನೆರವು:

ಬಡವರು ಮನೆ ಕಟ್ಟಲು ಅಗತ್ಯ ನೆರವು ಒದಗಿಸಲಾಗುವುದು. ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ದಾಖಲಾತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. 

ಹೈ ರೈಸ್ ಕಟ್ಟಡಗಳ ನಿರ್ಮಾಣಕ್ಕೆ ಒತ್ತು:

ನಗರದಲ್ಲಿ ಹೈ ರೈಸ್ ಕಟ್ಟಡಗಳ ಬಗ್ಗೆ ಗಮನಹರಿಸಿ, ರಸ್ತೆಗಳನ್ನು ವಿಸ್ತರಿಸಲು ಒತ್ತು ನೀಡಲಾಗುತ್ತಿದೆ. 132 ಕಿ.ಮೀ ಪೆರಿಫೆರಲ್ ವರ್ತುಲ ರಸ್ತೆ (ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ನಿರ್ಮಾಣವಾಗುತ್ತಿದೆ. ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ, ಭೂಸ್ವಾಧೀನಕ್ಕೆ ರಾಜ್ಯದಲ್ಲಿ ರೈತರಿಗೆ ಗರಿಷ್ಠ ಮೊತ್ತದ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದರು. 

ವಿಶ್ವ ನಾಯಕರು ಬೆಂಗಳೂರಿನತ್ತ ನೋಡುತ್ತಿರುವರು:

ಯಾವುದೇ ಕಟ್ಟಡ ಕಾನೂನುಬದ್ಧವಾಗಿ ನಿರ್ಮಾಣವಾಗಬೇಕು. ಭೂಮಿಯ ಬೆಲೆ ಕಡಿಮೆಯಾಗಬೇಕೆನ್ನುವುದು ನಮ್ಮ ಆಶಯ. ಮುಂಬೈನಲ್ಲಿ ಕಟ್ಟಡಗಳ ದರ ಹೆಚ್ಚಿದ್ದು, ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಕಟ್ಟಡಗಳನ್ನು ಕೊಳ್ಳಬಹುದಾಗಿದೆ. ಅದಕ್ಕಾಗಿಯೇ ವಿಶ್ವದ ನಾಯಕರು ಬೆಂಗಳೂರಿನತ್ತ ನೋಡುತ್ತಿದ್ದಾರೆ ಎಂದರು 

ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವ ಬಗ್ಗೆ ಕಾರ್ಯಪ್ರವೃತ್ತ:

ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವ ಕುರಿತು ಸರ್ಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಮುಖ್ಯಮಂತ್ರಿಗಳು ಸಂವಾದದಲ್ಲಿ ಭಾಗಿಯಾಗಿದ್ದ ಅಪಾರ್ಟ್‌ಮೆಂಟ್‌ ಮಾಲೀಕರ ಪ್ರಶ್ನೆಗೆ ಉತ್ತರಿಸಿದರು.

ಬೆಂಗಳೂರಿನತ್ತ ವಿದೇಶಿ ಹೂಡಿಕೆದಾರರು: 

'ದಾವೋಸ್'ಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲಾ ಹೂಡಿಕೆದಾರರು, ಬೆಂಗಳೂರು ನಗರದಲ್ಲಿ ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಮುಂಬೈ ಹಾಗೂ ಇತರೆ ನಗರಗಳಲ್ಲಿ ಹೂಡಿಕೆ ಮಾಡುವುದು ದುಬಾರಿಯಾಗಿದ್ದು, ವಿದೇಶಿ ಹೂಡಿಕೆದಾರರು ಬೆಂಗಳೂರಿನತ್ತ ಆಕರ್ಷಿತರಾಗಿದ್ದಾರೆ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣವು ಬರಲಿರಲಿದ್ದು, ನಗರವು ಹೂಡಿಕೆದಾರರಿಗೆ ಕೇಂದ್ರವಾಗಿದೆ ಎಂದು ಹೇಳಿದರು. 

ಸಚಿವ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಕೆ.ಜೆ.ಜಾರ್ಜ್ , ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಅಪಾರ್ಟ್‌ಮೆಂಟ್ ಸಂಘಗಳ ಅಧ್ಯಕ್ಷ ರಾಜೀವ್ ಗೌಡ ಇದ್ದರು.