ಮಲಯಾಳಂ ಚಿತ್ರರಂಗಕ್ಕೆ ಮತ್ತೆ ಡ್ರಗ್ಸ್ ಸಂಕಷ್ಟ, ತನಿಖೆ ನಡೆಸಲಿರುವ ಪೊಲೀಸರು

ಡ್ರಗ್ಸ್ ಪ್ರಕರಣದಲ್ಲಿ ಕೆಲ ನಟರು ಸಿಲುಕಿಕೊಂಡಿದ್ದು, ಪ್ರಕರಣದ ಆಳ ತನಿಖೆ ನಡೆಸುವುದಾಗಿ ಕೊಚ್ಚಿ ಪೊಲೀಸರು ಹೇಳಿದ್ದಾರೆ.

Oct 9, 2024 - 10:44
ಮಲಯಾಳಂ ಚಿತ್ರರಂಗಕ್ಕೆ ಮತ್ತೆ ಡ್ರಗ್ಸ್ ಸಂಕಷ್ಟ, ತನಿಖೆ ನಡೆಸಲಿರುವ ಪೊಲೀಸರು

ಕೆಲ ತಿಂಗಳ ಹಿಂದಷ್ಟೆ ಹೇಮಾ ಕಮಿಟಿ ವರದಿ ಬಹಿರಂಗವಾಗಿ ಮಲಯಾಳಂ ಚಿತ್ರರಂಗದ ಬಗ್ಗೆ ದೇಶದಾದ್ಯಂತ ಚರ್ಚೆ ಎದ್ದಿತ್ತು. ಮಲಯಾಳಂ ಚಿತ್ರರಂಗದ ಕೆಲವು ಹಿರಿಯ ನಟ, ನಿರ್ದೇಶಕರ ವಿರುದ್ಧ ಎಫ್​ಐಆರ್ ದಾಖಲಾಗಿದ್ದವು. ಕೆಲ ಪರಭಾಷೆ ನಟಿಯರು ಸಹ ಮಲಯಾಳಂ ಚಿತ್ರರಂಗದಲ್ಲಿ ತಮಗೆ ಕೆಟ್ಟ ಅನುಭವ ಆಗಿದೆ ಎಂದು ಹೇಳಿಕೊಂಡಿದ್ದರು. ಇದೀಗ ಸಂಕಷ್ಟ ಮಲಯಾಳಂ ಚಿತ್ರರಂಗಕ್ಕೆ ಎದುರಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಕೆಲ ನಟರು ಸಿಲುಕಿಕೊಂಡಿದ್ದು, ಪ್ರಕರಣದ ಆಳ ತನಿಖೆ ನಡೆಸುವುದಾಗಿ ಕೊಚ್ಚಿ ಪೊಲೀಸರು ಹೇಳಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಭೂಗತ ಪಾತಕಿ, ಮಾದಕ ವಸ್ತುವಿನ ಡೀಲರ್ ಓಂ ಪ್ರಕಾಶ್​ ಅನ್ನು ಮರಡು ಪೊಲೀಸರು ಹೋಟೆಲ್ ಒಂದರಲ್ಲಿ ಬಂಧಿಸಿದ್ದರು. ಆತನ ಬಂಧಿಸಿದಾಗ ಹೋಟೆಲ್​ನಲ್ಲಿ ಡ್ರಗ್ಸ್ ಸಹ ವಶಪಡಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದಾಗ ಹೋಟೆಲ್​ಗೆ ಕೆಲ ನಟ-ನಟಿಯರು ಸಹ ಬಂದು ಹೋಗಿರುವುದು ಪತ್ತೆ ಆಗಿದ್ದು, ಅವರ ವಿಚಾರಣೆ ನಡೆಸುವುದಾಗಿ ಇದೀಗ ಕೊಚ್ಚಿ ಪೊಲೀಸರು ಹೇಳಿದ್ದಾರೆ.ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಶ್ರೀನಾಥ್ ಬಾಸಿ ಹಾಗೂ ನಟಿ ಪ್ರಯಾಗಾ ಮಾರ್ಟಿನ್ ಅವರುಗಳು ಓಂ ಪ್ರಕಾಶ್​ ತಂಗಿದ್ದ ಹೋಟೆಲ್​ಗೆ ಭೇಟಿ ನೀಡಿದ್ದರು ಎನ್ನುವುದು ಪೊಲೀಸರಿಗೆ ತಿಳಿದು ಬಂದಿದ್ದು, ಅವರಿಬ್ಬರನ್ನೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅವರಿಬ್ಬರು ಮಾತ್ರವಲ್ಲದೆ ಸುಮಾರು 30 ಮಂದಿ ಓಂ ಪ್ರಕಾಶ್ ಇದ್ದ ಹೋಟೆಲ್​ ಕೋಣೆಗೆ ಭೇಟಿ ನೀಡಿರುವುದು ಪೊಲೀಸರಿಗೆ ತಿಳಿದು ಬಂದಿದ್ದು ಎಲ್ಲರಿಗೂ ನೋಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತದೆ. ನಟ ಶ್ರೀನಾಥ್ ಬಾಸಿ ಹಾಗೂ ನಟಿ ಪ್ರಯಾಗಾ ಮಾರ್ಟಿನ್ ಅವರಿಗೆ ಇನ್ನಷ್ಟೆ ಅಧಿಕೃತ ನೊಟೀಸ್ ನೀಡಬೇಕಿದೆ.

ಈ ನಡುವೆ ನಟಿ ಪ್ರಯಾಗಾ ಮಾರ್ಟಿನ್ ಅವರ ಕುಟುಂಬದವರು ನಟಿಯು ಡ್ರಗ್ಸ್ ಪ್ರಕರಣದೊಂದಿಗೆ ಸಂಬಂಧ ಹೊಂದಿಲ್ಲ ಎಂದಿದ್ದಾರೆ. ಆದರೆ ಶ್ರೀನಾಥ್ ಬಾಸಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಈ ಹಿಂದೆ ಶ್ರೀನಾಥ್ ಬಾಸಿ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಮಲಯಾಳಂ ಚಿತ್ರರಂಗದವರು ಇದೇ ಕಾರಣಕ್ಕೆ ಶ್ರೀನಾಥ್ ಬಾಸಿಯನ್ನು ಚಿತ್ರರಂಗದಿಂದ ಬ್ಯಾನ್ ಮಾಡಿದ್ದರು. ಬಳಿಕ ಕ್ಷಮೆ ಕೇಳಿ ಶ್ರೀನಾಥ್ ಬಾಸಿ ನಟನೆ ಮುಂದುವರೆಸಿದ್ದರು.ಶ್ರೀನಾಥ್ ಬಾಸಿ, ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಾದ ‘ಉಸ್ತಾದ್ ಹೋಟೆಲ್’, ‘ಕುಂಬಳಂಗಿ ನೈಟ್ಸ್’, ‘ಕಪ್ಪೆಲ’, ‘ಹೋಮ್’, ‘ಭೀಷ್ಮ ಪರ್ವಂ’, ‘ಮಂಜುಮೆಲ್ ಬಾಯ್ಸ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಮೇಲೆ ಈ ಹಿಂದೆಯೂ ಕೆಲ ಕೇಸುಗಳಿವೆ. ಯೂಟ್ಯೂಬ್ ಆಂಕರ್, ರೇಡಿಯೋ ಜಾಕಿಯ ಮೇಲೆ ದೌರ್ಜನ್ಯ ಮಾಡಿದ ಪ್ರಕರಣದಲ್ಲಿ ಇವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಇನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರಯಾಗಾ ಮಾರ್ಟಿನ್, 2019 ರಲ್ಲಿ ಬಿಡುಗಡೆ ಆದ ಕನ್ನಡದ ‘ಗೀತಾ’ ಸೇರಿದಂತೆ ತಮಿಳಿನ ‘ಪಿಸಾಸು’ ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.