16 ವರ್ಷಗಳ ಬಳಿಕ, ಹಾಲಿ ಚಾಂಪಿಯನ್‌ ಅರ್ಜೆಂಟೈನಾವನ್ನು ಸೋಲಿಸಿ ಫಿಫಾ ವಿಶ್ವಕಪ್‌ ಗೆದ್ದ ಸ್ಪೇನ್‌

FIFA-2026: ಫಿಫಾ ವಿಶ್ವಕಪ್‌ಗೆ ಅದ್ದೂರಿ ತೆರೆ ಬಿದ್ದಿದೆ. ಅರ್ಜೆಂಟಿನಾ ವಿರುದ್ಧ ಸ್ಪೇನ್ ಜಯಿಸಿದೆ.

Jul 20, 2026 - 11:13
Jul 20, 2026 - 11:47
16 ವರ್ಷಗಳ ಬಳಿಕ, ಹಾಲಿ ಚಾಂಪಿಯನ್‌ ಅರ್ಜೆಂಟೈನಾವನ್ನು ಸೋಲಿಸಿ ಫಿಫಾ ವಿಶ್ವಕಪ್‌ ಗೆದ್ದ ಸ್ಪೇನ್‌

ಅಮೆರಿಕ: ಫಿಫಾ ವಿಶ್ವಕಪ್‌ಗೆ ಅದ್ದೂರಿ ತೆರೆ ಬಿದ್ದಿದೆ. ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಅರ್ಜೆಂಟಿನಾ ವಿರುದ್ಧ ಸ್ಪೇನ್ ಜಯಿಸಿದೆ. 1-0 ಗೋಲುಗಳ ಅಂತರದಲ್ಲಿ ಈ ಪಂದ್ಯವನ್ನು ಕೈವಶ ಮಾಡಿದ್ದು, ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಈ ಗೆಲುವಿನೊಂದಿಗೆ ಫುಟ್‌ಬಾಲ್ ಇತಿಹಾಸದಲ್ಲಿ 2010ರ ನಂತರ, ಸ್ಪೇನ್ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದೆ. ಆದಾಗ್ಯೂ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ, ಸತತ 2ನೇ ಬಾರಿ ವಿಶ್ವ ಚಾಂಪಿಯನ್ ಆಗುವಲ್ಲಿ ವಿಫಲವಾಗಿದೆ. 

ಉಭಯ ತಂಡಗಳು ಫಿಫಾ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯಲು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದರೂ ನಿಗದಿತ 90 ನಿಮಿಷಗಳಲ್ಲಿ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೆಚ್ಚುವರಿ ಸಮಯದಲ್ಲಿ (106 ನಿಮಿಷ) ಸ್ಪೇನ್ ಪರ ಬದಲಿ ಆಟಗಾರನಾಗಿ ಬಂದ ಫೆರಾನ್ ಟೊರೆಸ್ ವಿಜಯದ ಗೋಲು ಬಾರಿಸಿದರು. ಅರ್ಜೆಂಟಿನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಒಟ್ಟು 11 ಗೋಲುಗಳನ್ನು ತಡೆದರು. 

ಬಹುಮಾನದ ಮೊತ್ತವೆಷ್ಟು?

ವಿಜೇತ ಸ್ಪೇನ್ ತಂಡಕ್ಕೆ ಜಾಕ್‌ಪಾಟ್ ಹೊಡೆದಿದ್ದು, ಬರೋಬ್ಬರಿ ರೂ.492.86 ಕೋಟಿ ನಗದು ಬಹುಮಾನವನ್ನು ಗೆದ್ದಿದೆ. ರನ್ನರ್-ಅಪ್ ಆಗಿರುವ ಅರ್ಜೆಂಟಿನಾಗೂ ದೊಡ್ಡ ಮಟ್ಟದ ಬಹುಮಾನದ ಲಭಿಸಿದ್ದು, ಸರಿ ಸುಮಾರು ರೂ. 327.37 ಕೋಟಿ ಬಾಚಿದೆ.

ಯಾರಿಗೆಲ್ಲ ಪ್ರಶಸ್ತಿ: 

* ಗೋಲ್ಡನ್ ಬಾಲ್ (ಅತ್ಯುತ್ತಮ ಆಟಗಾರ): ರೋಡ್ರಿ (ಸ್ಪೇನ್)
*  ಗೋಲ್ಡನ್ ಬೂಟ್ (ಅತ್ಯಧಿಕ ಗೋಲು): ಕೈಲಿಯನ್ ಎಂಬಪ್ಪೆ, ಭರ್ತಿ 10 ಗೋಲುಗಳು (ಫ್ರಾನ್ಸ್)
*  ಗೋಲ್ಡನ್ ಗ್ಲೋವ್ (ಅತ್ಯುತ್ತಮ ಗೋಲ್‌ಕೀಪರ್): ಉನೈ ಸಿಮನ್ (ಸ್ಪೇನ್)
* ಅತ್ಯುತ್ತಮ ಯುವ ಆಟಗಾರ: ಪೌ ಕುಬಾರ್ಸಿ (ಸ್ಪೇನ್) 

ವರ್ಣರಂಜಿತ ವಿದಾಯ: 

ಭರ್ತಿ 39 ದಿನಗಳ ಕಾಲ ಜರುಗಿದ 23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ವರ್ಣರಂಜಿತ ವಿದಾಯ ಹೇಳಲಾಗಿದೆ. ಮೊದಲ ಬಾರಿಗೆ 48 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ 104 ಪಂದ್ಯಗಳು ನಡೆದಿವೆ . 

ಆತಿಥೇಯ ಅಮೆರಿಕದಲ್ಲಿ ವರ್ಣರಂಚಿತ ಸಮಾರೋಪ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ, ಲೇಸರ್ ಶೋ ಹಾಗೂ ಪಟಾಕಿ ಸಿಡಿತದಿಂದ  ಕ್ರೀಡಾಂಗಣವು ಕಂಗೊಳಿಸಿತು. ಅಪಾರ ಫುಟ್‌ಬಾಲ್‌ ಅಭಿಮಾನಿಗಳು ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಂಡರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.