10 ಸಚಿವರಿಗೆ ಸ್ಟಿಂಗ್ ಆಪರೇಷನ್ ಬಲೆ? ವಾರದೊಳಗೆ ಪೆನ್‌ಡ್ರೈವ್ ಬಿಡುಗಡೆ ಮಾಡುವುದಾಗಿ ಶಾಸಕ ಗಣಿಗ ರವಿಕುಮಾರ್ ಸವಾಲು!
Sting Operation Row: ರಾಜ್ಯದ ಸುಮಾರು 10 ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿದೆ. ಈ ಕುರಿತು ಪೆನ್‌ಡ್ರೈವ್ ಹಾಗೂ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಎಲ್ಲಾ ದಾಖಲೆಗಳನ್ನು 1 ವಾರದೊಳಗೆ ಮಾಧ್ಯಮಗಳ ಮುಂದೆ ಬಿಡುಗಡೆಗೊಳಿಸುವುದಾಗಿ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತಿಳಿಸಿದ್ದಾರೆ.
ಮಂಡ್ಯ: ರಾಜ್ಯದ ಸುಮಾರು 10 ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Ganiga Ravi Kumar) ಆರೋಪಿಸಿದ್ದಾರೆ.
ಈ ಸ್ಟಿಂಗ್ ಆಪರೇಷನ್ ಹಿಂದೆ ಕೇಂದ್ರದ ಓರ್ವ ಸಚಿವರು ಮತ್ತು ರಾಜ್ಯದ ಇಬ್ಬರು ಬಿಜೆಪಿ ನಾಯಕರು ಇದ್ದಾರೆ. ಈ ಕುರಿತು ಪೆನ್‌ಡ್ರೈವ್ ಹಾಗೂ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಎಲ್ಲಾ ದಾಖಲೆಗಳನ್ನು 1 ವಾರದೊಳಗೆ ಮಾಧ್ಯಮಗಳ ಮುಂದೆ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ.
ಸಚಿವರನ್ನು ಹಿಂಬಾಲಿಸಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ, ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಸ್ಟಿಂಗ್ ಆಪರೇಷನ್ ನಡೆಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಹಣ ಕೊಟ್ಟು ಸುಪಾರಿ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಚಿವರನ್ನು ಸಿಲುಕಿಸಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡುವುದು ಈ ಸಂಚಿನ ಉದ್ದೇಶ ಎಂದು ರವಿಕುಮಾರ್ ದೂರಿದ್ದಾರೆ.
ತಮ್ಮ ಬಳಿ ಈ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳಿವೆ. ಕಾರ್ಯಾಚರಣೆಯ ಹಿಂದೆ ಯಾರಿದ್ದಾರೆ ಮತ್ತು ಹಣ ಎಲ್ಲಿಂದ ಬಂದಿದೆ ಎಂಬುದನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಯುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಶಾಸಕ ಗಣಿಗ ರವಿಕುಮಾರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.