ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಪ್ರತಿಭಾ ತರಂಗಿಣಿ ಕಾರ್ಯಕ್ರಮ

Ambika Vidyalaya CBSE School: ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಈಚೆಗೆ 'ಪ್ರತಿಭಾ ತರಂಗಿಣಿ' ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Oct 10, 2026 - 15:27
ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಪ್ರತಿಭಾ ತರಂಗಿಣಿ ಕಾರ್ಯಕ್ರಮ

ಪುತ್ತೂರು: ನಾವಿಂದು ಕೃತಕ ಬುದ್ಧಿಮತ್ತೆಯ ಕಾಲದಲ್ಲಿದ್ದೇವೆ. ಎಐ ಎಂಬುದು ನಾವು ಮಾಹಿತಿಯನ್ನು ತುಂಬಿದ ವ್ಯವಸ್ಥೆಯೇ ಹೊರತು ಅದಾಗಿಯೇ ಹುಟ್ಟಿದಂತಹದ್ದಲ್ಲ. ಆದರೆ ನಾವಿಂದು ತುಂಬಿದ ಮಾಹಿತಿಯನ್ನು ನೋಡಿ, ಬೆರಗಾಗುತ್ತಿದ್ದೇವೆಯೇ ವಿನಃ ನಮ್ಮೊಳಗಿನ ಶಕ್ತಿಯನ್ನು ಗುರುತಿಸುತ್ತಿಲ್ಲ. ಹಾಗಾಗಿ ಭಗವಂತ ನಮಗೆ ಕೊಟ್ಟಿರುವ ಸಾಮರ್ಥ್ಯವನ್ನು ವಿಮರ್ಶಿಸಬೇಕಲ್ಲದೆ, ನಮ್ಮ ಮುಂಡದ ಶಕ್ತಿಯ ಅಗಾಧತೆಯನ್ನು ಅರಿಯಬೇಕು ಎಂದು ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಎಂ.ನರಸಿಂಹ ಮೂರ್ತಿ ಹೇಳಿದರು.

ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವಿರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಿದ್ದ 'ಪ್ರತಿಭಾ ತರಂಗಿಣಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.

ಭಾರತೀಯ ಶಿಕ್ಷಣದಲ್ಲಿ ಪ್ರಶ್ನೋತ್ತರ ರೂಪದಲ್ಲಿ ಗುರು ಶಿಷ್ಯರಿಬ್ಬರೂ ಕಲಿಯುವಂತಹ ಸಂದರ್ಭವಿತ್ತು. ಆದರೆ, ಆಧುನಿಕ ಶಿಕ್ಷಣ ಅಂತಹ ಅತ್ಯಪೂರ್ವ ವ್ಯವಸ್ಥೆಯನ್ನು ತೊಡೆದು ಹಾಕಿದೆ. ಹಾಗಾಗಿ ನಾವಿಂದು ಯಾವುದನ್ನು ವಿಶ್ಲೇಷಿಸದೆ ಸ್ವೀಕರಿಸುತ್ತಿದ್ದೇವೆ ಎಂದರು.

ಇಂದು ಪಾಶ್ಚಿಮಾತ್ಯ ವಿಚಾರಧಾರೆಗಳೆಡೆಗೆ ನಾವು ಕುರುಡಾಗಿ ಶರಣಾಗುತ್ತಿದ್ದೇವೆ. ಪಾಶ್ಚಿಮಾತ್ಯರು ನಮ್ಮನ್ನು ಮೂರ್ಖರನ್ನಾಗಿಸುತ್ತಲೇ ಇದ್ದಾರೆ. ಎಲ್ಲಿಯವರೆಗೆ ನಾವು ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ವಿಕಾಸ ಮಾಡಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ನಾವು ದಾಸ್ಯದಲ್ಲೇ ಇರುತ್ತೇವೆ. ಈ ಹಿನ್ನೆಲೆ, ಜ್ಞಾನವನ್ನು ವಿಜ್ಞಾನ ಸಮೇತವಾಗಿ ವಿಮರ್ಶಿಸುವ ಗುಣವನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಎಸ್.ಸಿ ಮಾತನಾಡಿ, ರಾಷ್ಟ್ರಭಕ್ತಿ ಮತ್ತು ಸಂಸ್ಕಾರ ಮೂಡಿಸುವಲ್ಲಿ ಅಂಬಿಕಾ ಸಂಸ್ಥೆಯ ಪಾತ್ರ ದೊಡ್ಡದು. ದೇಶ ಹಾಗೂ ಸಮಾಜಕ್ಕಾಗಿ ಬದುಕಬೇಕೆನ್ನುವ ಭಾವನೆಯನ್ನು ಬೆಳೆಸಿಕೊಳ್ಳುವಲ್ಲಿ ಸಂಸ್ಥೆಯು ಅತ್ಯುತ್ತಮ ಅಡಿಪಾಯವನ್ನು ಹಾಕಿಕೊಡುತ್ತದೆ ಎಂದು ಹೇಳಿದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸ್ವಾತಿ ಜೆ ರೈ ಮಾತನಾಡಿ, ಸಮಾಜಕ್ಕೆ ಅತ್ಯುತ್ತಮ ನಾಗರಿಕರನ್ನು ಒದಗಿಸಿಕೊಡುವ ಜವಾಬ್ದಾರಿ ಹೆತ್ತವರಿಗಿದೆ. ಹಾಗಾಗಿ, ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎಂಬುದು ಮುಖ್ಯ. ಮಕ್ಕಳು ನಮ್ಮನ್ನು ನೋಡುತ್ತಾ ಕಲಿಯುತ್ತಾರೆಂಬುದನ್ನು ನಾವು ತಿಳಿದಿರಬೇಕು ಎಂದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಭಾರತೀಯ ಸಂಸ್ಕೃತಿಯ ಆಧಾರದಲ್ಲಿಯೇ 'ಅಂಬಿಕಾ ಸಂಸ್ಥೆ' ಸಕಲ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ದೇಶ ಮೊದಲು ಎಂಬ ಕಲ್ಪನೆಯಡಿ, ಇಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ. ಹಾಗಾಗಿಯೇ, ಅಂಬಿಕಾದ ವೇದಿಕೆಯಲ್ಲಿ ಪಾಶ್ಚಿಮಾತ್ಯ ನೃತ್ಯಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಭಾರತೀಯ ಕಲೆ, ನಾಟ್ಯಗಳಿಗೇ ಈ ವೇದಿಕೆ ಮೀಸಲಾಗಿದೆ ಎಂದು ತಿಳಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಪ್ರಾಂಶುಪಾಲೆ ಮಾಲತಿ ಡಿ ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. 

ಜಿಲ್ಲಾ ಮಟ್ಟದಿಂದ ತೊಡಗಿ ರಾಷ್ಟ್ರಮಟ್ಟದವರೆಗೆ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಕ್ರೀಡಾ ಸಾಧಕರು, ಶೈಕ್ಷಣಿಕ ಸಾಧಕರು, ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗದಲ್ಲಿ ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರು ಮತ್ತು ಶೈಕ್ಷಣಿಕ ಸಾಧಕರನ್ನು ಅಭಿನಂದಿಸಲಾಯಿತು.

ವಿದ್ಯಾರ್ಥಿ ಕೆ.ಹಿಮನೀಶ ಗೌಡ ಶಂಖನಾದಗೈದರು. ವಿದ್ಯಾರ್ಥಿ ಸನ್ಮಯ್ ಹಾಗೂ ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕ ಸಾತ್ವಿಕ್ ಜಿ. ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ವಂಶಿಕಾ ಬಿ ವಂದಿಸಿದರು. ಶಿಕ್ಷಕಿ ಸ್ವಾತಿ ಮತ್ತು ಸುಷ್ಮಾ ಮಿಥುನ್ ಕಾರ್ಯಕ್ರಮ ನಿರ್ವಹಿಸಿದರು. 

ಪ್ರಾಂಶುಪಾಲೆ ಮಾಲತಿ ಡಿ ವೀಡಿಯೋ ಪ್ರಾತ್ಯಕ್ಷಿಕೆ ಸಹಿತ, ವರದಿ ಮಂಡಿಸಿದರು. ಜೊತೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.