ಪುತ್ತೂರಿನಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜು ಮಂಜೂರಾತಿ: ಆರೋಗ್ಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ
Puttur Medical College: ಪುತ್ತೂರಿನಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಮಂಜೂರಾತಿ ನೀಡಿ ಅಗತ್ಯ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲ ಒದಗಿಸಿಕೊಡುವಂತೆ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಪುತ್ತೂರು: ಇಲ್ಲಿನ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಮಂಜೂರಾತಿ ನೀಡಿ ಅಗತ್ಯ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲ ಒದಗಿಸಿಕೊಡುವಂತೆ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕರು, ಪುತ್ತೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾಪವನ್ನು ಸಲ್ಲಿಸಲಾಗಿದೆ. ಗ್ರಾಮದ ಕುಂಟ್ಯಾನ ಎಂಬಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ 5 ಎಕರೆ ಜಮೀನನ್ನು ಆಯುಷ್ ಆಸ್ಪತ್ರೆ ನಿರ್ಮಾಣ ಮಾಡುವ ಉದ್ದೇಶದಿಂದ ದ.ಕ ಜಿಲ್ಲಾ ಆಯುಷ್ ಇಲಾಖೆ ಹೆಸರಲ್ಲಿ ಕಾಯ್ದಿರಿಸಲು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರರು ಪುತ್ತೂರು ತಾಲ್ಲೂಕು ಇವರು ಬನ್ನೂರು ಗ್ರಾಮದ ಸರ್ವೆ ನಂ.84/ರಲ್ಲಿ 5 ಎಕರೆ ಜಮೀನನ್ನು ಆಯುಷ್ ಆಸ್ಪತ್ರೆ ನಿರ್ಮಾಣದ ಉದ್ದೇಶದಿಂದ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಹೆಸರಿಗೆ ಕಾಯ್ದಿರಿಸಿದ್ದು ,ಇದರ ಆರ್.ಟಿ.ಸಿ,ಯನ್ನು ಆಯುಷ್ ಇಲಾಖೆಗೆ ಹಸ್ತಾಂತರಿಸಲಾಗಿದೆ.ನಿಗಧಿತ ಜಾಗದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕಾಗಿ ಮಂಜೂರಾತಿ ನೀಡಿ ಅಗತ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಒದಗಿಸಿಕೊಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಬಗ್ಗೆ ಶಾಸಕ ಅಶೋಕ್ ರೈ ಪ್ರತಿಕ್ರಿಯಿಸಿದ್ದು, ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಜೊತೆಗೆ ಆಯುರ್ವೆದ ಮೆಡಿಕಲ್ ಕಾಲೇಜು ನಿರ್ಮಾಣದ ಗುರಿಯಿದ್ದು ಇದಕ್ಕಾಗಿ ಬನ್ನೂರಿನ ಕುಂಟ್ಯಾನದಲ್ಲಿ 5 ಎಕ್ರೆ ಜಾಗವನ್ನು ಆಯುಷ್ ಇಲಾಖೆಗೆ ಕಾಯ್ದಿರಿಸಲಾಗಿದೆ. ಸರಕಾರಿ ಮೆಡಿಕಲ್ ಕಾಲೇಜು ಬಳಿಯಲ್ಲೇ ಆಯುರ್ವೆದ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುತ್ತದೆ. 100 ಬೆಡ್‌ಗಳ ಆಯುರ್ ಆಸ್ಪತ್ರೆ ನಿರ್ಮಾಣವಾಗಲು ಸರಕಾರದಿಂದ ಮಂಜೂರಾತಿ ದೊರೆಯಬೇಕಿದ್ದು ಈ ಬಗ್ಗೆ ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಸಚಿವಾಲಯದ ಪ್ರಮುಖಳ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಸರಕಾರದಿಂದ ಶೀಘ್ರ ಮಂಜೂರಾತಿ ಸಿಗುವ ಭರವಸೆ ಇದ್ದು ಈ ಮೂಲಕ ಜನರ ಬಹುಕಾಲದ ಆಯುರ್ವೆದ ಮೆಡಿಕಲ್ ಕಾಲೇಜು ಬೇಡಿಕೆಯೂ ಈಡೇರಲಿದೆ ಎಂದು ಹೇಳಿದರು.