IND - ENG: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

ODI 2nd Match: ವೇಲ್ಸ್‌ನ ಸೋಫಿಯಾ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ಪರಾಭವಗೊಂಡಿದೆ.

Jul 17, 2026 - 11:51
IND - ENG: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

ಕಾರ್ಡಿಫ್‌: ಇಲ್ಲಿನ ವೇಲ್ಸ್‌ನ ಸೋಫಿಯಾ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ 2ನೇ ಏಕದಿನ (ODI) ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ಪರಾಭವಗೊಂಡಿದೆ. ಈ ಗೆಲುವಿನೊಂದಿಗೆ ಆತಿಥೇಯ ಇಂಗ್ಲೆಂಡ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.

ಟಾಸ್ ಸೋತು, ಮೊದಲು ಬ್ಯಾಟಿಂಗ್ ಮಾಡಿದ ಭಾರತ, 44 ಓವರ್‌ಗಳಲ್ಲಿ 233 ರನ್‌ ಬಾರಿಸಿ ಆಲೌಟ್ ಆಯಿತು. ವಿರಾಟ್ ಕೊಹ್ಲಿ (65 ರನ್) ಹಾಗೂ ಶ್ರೇಯಸ್ ಅಯ್ಯರ್ (66 ರನ್) ಉತ್ತಮವಾಗಿ ಬ್ಯಾಟ್ ಬೀಸಿ, ತಂಡಕ್ಕೆ ನೆರವಾದರು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಮತ್ತು ಗಸ್ ಅಟ್ಕಿನ್ಸನ್ ತಲಾ 3 ವಿಕೆಟ್ ಕಬಳಿಸಿದರು.

234 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜಸ್‌ಪ್ರೀತ್ ಬುಮ್ರಾ ಹಾಗೂ ಗುರ್ನೂರ್ ಬ್ರಾರ್ ಬೌಲಿಂಗ್‌ ದಾಳಿಗೆ ತತ್ತರಿಸಿತು. 125 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್, ಭಾರತದ ಬೌಲಿಂಗ್‌ನ್ನು ದಿಟ್ಟವಾಗಿ ಎದುರಿಸಿದರು. ಅಜೇಯ 99 ರನ್ ಸಿಡಿಸಿದರು. ಇದರೊಂದಿಗೆ ಇಂಗ್ಲೆಂಡ್ 44.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿ, ಜಯ ಸಾಧಿಸಿತು.

ಜುಲೈ 19 (ಭಾನುವಾರ) ಲಾರ್ಡ್ಸ್ ಕ್ರೀಡಾಂಗಣದಲ್ಲಿ 3ನೇ ಏಕದಿನ ಪಂದ್ಯ ನಡೆಯಲಿದೆ. ಸರಣಿ ಗೆಲ್ಲಲು ಈ ಪಂದ್ಯವು ನಿರ್ಣಾಯಕವಾಗಿದೆ.