ಆಫ್ರಿಕನ್, ಅರಬ್ ದೇಶಗಳ ಕೆಂಗಣಿಗೆ ಕಾರಣವಾದ ಸೋಮಾಲಿಲ್ಯಾಂಡ್ ಯಾವುದು?

1991ರಲ್ಲಿ ಸೊಮಾಲಿಯಾದಿಂದ ಪ್ರತ್ಯೇಕಗೊಂಡಿದ್ದ ಸೊಮಾಲಿಲ್ಯಾಂಡ್ ಅನ್ನು ಪ್ರತ್ಯೇಕ ದೇಶವೆಂದು ಇಸ್ರೇಲ್ ಮಾನ್ಯ ಮಾಡಿದೆ. ಹಾಗೆ ಅಧಿಕೃತವಾಗಿ ಒಪ್ಪಿಕೊಂಡ ವಿಶ್ವದ ಏಕೈಕ ದೇಶ ಇಸ್ರೇಲ್. ಸೊಮಾಲಿಲ್ಯಾಂಡ್ ಯಾಕೆ ಸೊಮಾಲಿಯಾದಿಂದ ಬೇರೆಯಾಯಿತು? ಅದರ ಅಸ್ತಿತ್ವದ ಪ್ರಾಮುಖ್ಯ ಏನು ಇತ್ಯಾದಿ ವಿವರ ಇಲ್ಲಿದೆ.

Dec 27, 2025 - 21:13
ಆಫ್ರಿಕನ್, ಅರಬ್ ದೇಶಗಳ ಕೆಂಗಣಿಗೆ ಕಾರಣವಾದ ಸೋಮಾಲಿಲ್ಯಾಂಡ್ ಯಾವುದು?
Somaliland

ದಶಕಗಳ ಹಿಂದೆ ಸೊಮಾಲಿಯಾ ದೇಶದಿಂದ ಪ್ರತ್ಯೇಕಗೊಂಡಿದ್ದ ಸೊಮಾಲಿಲ್ಯಾಂಡ್ (Somaliland) ಅನ್ನು ಸ್ವತಂತ್ರ ದೇಶ ಎಂದು ಇಸ್ರೇಲ್ ಮಾನ್ಯ ಮಾಡಿದೆ. ಸೋಮಾಲಿಲ್ಯಾಂಡ್​ಗೆ ಅಧಿಕೃತ ದೇಶವೆಂಬ ಮಾನ್ಯತೆ ಕೊಟ್ಟ ಮೊದಲ ದೇಶವೂ ಇಸ್ರೇಲ್ ಆಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರ ಕಚೇರಿಯು ಈ ವಿಚಾರವನ್ನು ಪ್ರಕಟಿಸಿದ್ದು, ಸೋಮಾಲಿಲ್ಯಾಂಡ್ ಜೊತೆ ಇಸ್ರೇಲ್ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುತ್ತದೆ ಎಂದು ಘೋಷಿಸಿದೆ. ಆದರೆ, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯದ ಹಲವು ದೇಶಗಳು ಇದನ್ನು ಬಲವಾಗಿ ವಿರೋಧಿಸಿವೆ.

ಸೋಮಾಲಿಲ್ಯಾಂಡ್ ಅಧ್ಯಕ್ಷ ಅಬ್ದಿರಹಮಾನ್ ಮೊಹಮ್ಮದ್ ಅಬ್ದುಲ್ಲಾಹಿ ಅವರು ಇಸ್ರೇಲ್ ಬೆಂಬಲವನ್ನು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ್ದಾರೆ. ಅಬ್ದಿರಹಮಾನ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಇಸ್ರೇಲ್ ಪ್ರಧಾನಿಯವರು, ಸೊಮಾಲಿಲ್ಯಾಂಡ್ ಜನತೆಗೆ ಶುಭ ಹಾರೈಕೆ ಮಾಡಿದ್ದಾರೆ. ಆದರೆ, ಸೊಮಾಲಿಲ್ಯಾಂಡ್ ಅನ್ನು ಪ್ರತ್ಯೇಕ ದೇಶವೆಂದು ಮಾನ್ಯ ಮಾಡಿದ ಇಸ್ರೇಲ್ ಕ್ರಮವನ್ನು ಸೊಮಾಲಿಯಾ ಹಾಗೂ ಆಫ್ರಿಕನ್ ಯೂನಿಯನ್ ಬಲವಾಗಿ ವಿರೋಧಿಸಿವೆ. ಸೊಮಾಲಿಲ್ಯಾಂಡ್ ಸೊಮಾಲಿಯಾದ ಅವಿಭಾಜ್ಯ ಅಂಗ ಎಂದು ಆಫ್ರಿಕನ್ ಒಕ್ಕೂಟ ಹೇಳಿದೆ.

ಸೊಮಾಲಿಲ್ಯಾಂಡ್ 1991ರಲ್ಲಿ ಸೊಮಾಲಿಯಾ ಬಿಕ್ಕಟ್ಟಿನ ವೇಳೆ ಪ್ರತ್ಯೇಕಗೊಂಡ ಪ್ರದೇಶ. ಇದು ಗಲ್ಫ್ ಪ್ರದೇಶದ ಕೆಳಗೆ ಇದೆ. ಗಲ್ಫ್ ಪ್ರದೇಶಕ್ಕೂ ಸೊಮಾಲಿಲ್ಯಾಂಡ್​ಗೂ ನಡುವೆ ಗಲ್ಫ್ ಆಫ್ ಏಡನ್ ಬರುತ್ತದೆ. ಇದು ಬಹಳ ಕಿರಿದಾದ ಸಮುದ್ರ ಮಾರ್ಗವಾಗಿದೆ. ನಿತ್ಯವೂ ನೂರಾರು ಹಡಗುಗಳು ಇಲ್ಲಿ ಹಾದು ಹೋಗುತ್ತವೆ. ಜಾಗತಿಕ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಲು ಈ ಮಾರ್ಗ ಸುರಕ್ಷಿತವಾಗಿರಬೇಕು. ಹಾಗಾಗಿ, ಈ ಸೋಮಾಲಿಲ್ಯಾಂಡ್ ವಿಚಾರ ಪ್ರಸಕ್ತ ಬಹಳ ಮುಖ್ಯ.

1991ರಲ್ಲಿ ಸೊಮಾಲಿಲ್ಯಾಂಡ್ ಸ್ವಯಂ ಆಗಿ ಪ್ರತ್ಯೇಕ ದೇಶವೆಂದು ಘೋಷಿಸಿಕೊಂಡಿತು. ಮೂರು ದಶಕಗಳ ಕಾಲ ಸ್ವತಂತ್ರವಾಗಿಯೇ ಅಸ್ತಿತ್ವದಲ್ಲಿದೆ. ಅದರದ್ದೇ ಸ್ವಂತ ಸರ್ಕಾರ, ಸಂವಿಧಾನ, ಕರೆನ್ಸಿ, ಪಾಸ್​ಪೋರ್ಟ್, ಭದ್ರತಾ ಪಡೆಗಳು ಹೀಗೆ ಎಲ್ಲಾ ವ್ಯವಸ್ಥೆ ಇದೆ. ಚುನಾವಣೆಗಳು ನಡೆಯುತ್ತವೆ. ಸೊಮಾಲಿಯಾದಲ್ಲಿ ಇರುವಂತೆ ಸೊಮಾಲಿಲ್ಯಾಂಡ್​ನಲ್ಲಿ ಸಿವಿಲ್ ವಾರ್ ಇತ್ಯಾದಿ ಬಿಕ್ಕಟ್ಟು ಇಲ್ಲದೆ ಶಾಂತಿಯುತವಾಗಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.