Astra Group Lanchu Lal: ಮಂಗಳೂರಿನಲ್ಲಿ ಲಂಚುಲಾಲ್‌ನ ʼವಂಚನಾಸ್ತ್ರʼಕ್ಕೆ ಹೂಡಿಕೆದಾರರು ಪಂಚರ್‌!

Astra Group Owner Lanchu Lal: ಮೈ ತುಂಬ ಬಂಗಾರ ಹಾಕಿಕೊಂಡು ಬರೀ ಶೋಕಿ ತೋರಿಸುತ್ತ ಸಾವಿರಾರು ಅಮಾಯಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಅಸ್ತ್ರ ಗ್ರೂಪ್‌ ಮಾಲೀಕ ಲಂಚುಲಾಲ್‌, ಇದೀಗ ನಾಪತ್ತೆಯಾಗಿರುವ ಅತ್ಯಂತ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಅಸ್ತ್ರ ಗ್ರೂಪ್‌ನ ಮಂಗಳೂರು ಕಚೇರಿಗೆ ಇಂದು ಹೂಡಿಕೆದಾರರು ಮುತ್ತಿಗೆ ಹಾಕಿದ್ದಾರೆ.

Jul 24, 2026 - 21:01
Jul 24, 2026 - 21:20
Astra Group Lanchu Lal: ಮಂಗಳೂರಿನಲ್ಲಿ ಲಂಚುಲಾಲ್‌ನ ʼವಂಚನಾಸ್ತ್ರʼಕ್ಕೆ ಹೂಡಿಕೆದಾರರು ಪಂಚರ್‌!

ಮಂಗಳೂರು: ಮೈತುಂಬ ಬಂಗಾರ ಹಾಕಿಕೊಂಡು ಬರೀ ಶೋಕಿ ತೋರಿಸುತ್ತ ಸಾವಿರಾರು ಅಮಾಯಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಅಸ್ತ್ರ ಗ್ರೂಪ್‌ ಮಾಲೀಕ ಲಂಚುಲಾಲ್‌ (Lanchu Lal), ಇದೀಗ ನಾಪತ್ತೆಯಾಗಿರುವ ಅತ್ಯಂತ ಗಂಭೀರ ಆರೋಪ ಕೇಳಿಬಂದಿದೆ. 

ಕಳೆದ ಕೆಲವು ವರ್ಷಗಳಿಂದ ಮಂಗಳೂರಿನ ನವಭಾರತ್‌ ಸರ್ಕಲ್‌ ಸಮೀಪ ಅಸ್ತ್ರ ಗ್ರೂಪ್‌ನ ಕಚೇರಿ ಇದ್ದು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಹಲವು ಕಡೆಗಳಲ್ಲಿ ಏಜೆಂಟರ್‌ಗಳನ್ನು ಇಟ್ಟುಕೊಂಡು ಜನರಿಂದ 1000ರೂ., 2000ರೂ. ಹೀಗೆ ವಿವಿಧ ಕಂತುಗಳಲ್ಲಿ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ.

3-4 ವರ್ಷಗಳಲ್ಲಿ ಸುಮಾರು ಮೂರು ಸ್ಕೀಮ್‌ಗಳಲ್ಲಿ ಜನರನ್ನು ಸೇರಿಸಿಕೊಂಡು, ಅವರಿಂದ ಹಣ ಕಟ್ಟಿಸಿಕೊಂಡು ಕೊನೆಗೆ ಸ್ಕೀಮ್‌ ಮುಗಿದಾಗ ಹೆಚ್ಚಿನ ಲಾಭದ ಜತೆಗೆ ಕಟ್ಟಿದ ಹಣವನ್ನು ವಾಪಾಸ್‌ ಕೊಡುವುದಾಗಿ ಹೇಳಿ ಅಮಾಯಕರನ್ನು ಆಕರ್ಷಿಸುವುದು ಲಂಚುಲಾಲ್‌ನ ಅಸ್ತ್ರ ಗ್ರೂಪ್‌ನ ಕೆಲಸವಾಗಿದೆ. ಕೆಲವು ಸ್ಕೀಮ್‌ಗಳು ಕಂಪೆನಿ ಹೇಳಿರುವ ಅವಧಿ ಮುಗಿದಿದ್ದು, ಇನ್ನು ಕೂಡ ಹಣ ವಾಪಾಸ್‌ ಬಂದಿಲ್ಲ ಎನ್ನುವುದು ಹಲವು ಹೂಡಿಕೆದಾರರ ಆರೋಪವಾಗಿದೆ.

ಈ ಮೂರ್ನಾಲ್ಕು ತಿಂಗಳಿನಿಂದ ಲಂಚುಲಾಲ್‌ನ ಬಗ್ಗೆ ಹೂಡಿಕೆದಾರರಿಗೆ ಅನುಮಾನ ಮೂಡಿದ್ದು, ಹಲವರು ಇದೊಂದು ಮೋಸದ ಸ್ಕೀಮ್‌ ಎನ್ನುವ ಆರೋಪವನ್ನು ಕೂಡ ಮಾಡಿದ್ದಾರೆ. ಇದನ್ನು ಅಲ್ಲಗಳೆದಿರುವ ಲಂಚುಲಾಲ್‌ ಖುದ್ದು ಸೋಷಿಯಲ್‌ ಮೀಡಿಯಾದ ಮೂಲಕ, ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ಅಸ್ತ್ರ ಗ್ರೂಪ್‌ನಲ್ಲಿ ಎಲ್ಲರ ಹಣ ಸುರಕ್ಷಿತವಾಗಿದ್ದು, ಎಲ್ಲರ ಹಣವನ್ನು ಕೂಡ ಹಂತ-ಹಂತವಾಗಿ ವಾಪಾಸ್‌ ನೀಡುವುದಾಗಿ ಭರವಸೆ ನೀಡಿದ್ದಾರೆ. 

ಕಚೇರಿಗೆ ಮುತ್ತಿಗೆ ಹಾಕಿದ ಹೂಡಿಕೆದಾರರು: ಹೀಗಿರುವಾಗ, ಇಂದು ಬೆಳಗ್ಗೆ ಹಲವು ಹೂಡಿಕೆದಾರರು ಮಂಗಳೂರಿನ ಅಸ್ತ್ರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ನಮ್ಮ ಹಣವನ್ನು ವಾಪಾಸ್‌ ಕೊಡಿ, ಈ ಕೂಡಲೇ ಲಂಚುಲಾಲ್‌ನನ್ನು ಸ್ಥಳಕ್ಕೆ ಕರೆಯಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿಯಲ್ಲಿನ ಪರಿಸ್ಥಿತಿ ನೋಡಿದರೆ, ಹೂಡಿಕೆದಾರರು ಇಷ್ಟು ದಿನ ಕಂಪೆನಿ ನೀಡಿದ್ದ ಎಲ್ಲ ಆಶ್ವಾಸನೆಗಳನ್ನು ನಂಬಿ ಸುಮ್ಮನೆ ಕುಳಿತಿದ್ದರು. ಇದೀಗ, ಹೂಡಿಕೆದಾರರು ತಮ್ಮ ತಾಳ್ಮೆ ಕಳೆದುಕೊಂಡು ತಾವು ಕಟ್ಟಿದ ಹಣ ವಾಪಾಸ್‌ ಸಿಗುವ ಬಗ್ಗೆ ಅನುಮಾನ ಮೂಡಿದ್ದು, ಈ ಹಿನ್ನಲೆಯಲ್ಲಿ ಕಚೇರಿಗೆ ಬಂದು ಅಲ್ಲಿದ್ದ ಸಿಬ್ಬಂದಿ ಮುಂದೆ ಸಿಟ್ಟು ತೋರಿಸಿಕೊಂಡಿದ್ದಾರೆ.

ಶೋಕಿವಾಲ ಲಂಚುಲಾಲ್‌: ಲಂಚುಲಾಲ್‌ ಮೂಲತಃ ಕೇರಳ ಮೂಲದವರು. ಮಂಗಳೂರು ಭಾಗದಲ್ಲಿ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಈ ವ್ಯಕ್ತಿ ನಂತರದಲ್ಲಿ ಈ ಭಾಗದ ಸೆಲೆಬ್ರಟಿಗಳ ಮೂಲಕ ಸಾಕಷ್ಟು ಪ್ರಮೋಷನ್‌ ಮಾಡಿಸಿಕೊಂಡು ತಮ್ಮ ಅಸ್ತ್ರ ಗ್ರೂಪ್‌ನ ಬಗ್ಗೆ ಜನರ ವಿಶ್ವಾಸ ಗಿಟ್ಟಿಸುವ ಗಿಮಿಕ್‌ ಮಾಡಿದ್ದಾರೆ. ಹೀಗೆ ಅಬ್ಬರ ಪ್ರಚಾರ, ಶೋಕಿ ಗೆಟಪ್‌ನಲ್ಲಿ ಸದ್ದು ಮಾಡಿರುವ ಲಂಚುಲಾಲ್‌ ಹಾಗೂ ಈತನ ಅಸ್ತ್ರ ಗ್ರೂಪ್‌ ಬಗ್ಗೆ ಹೂಡಿಕೆದಾರರು ವಿಶ್ವಾಸ ಕಳೆದುಕೊಳ್ಳುತ್ತಿದ್ದು, ತಾವು ಹೂಡಿಕೆ ಮಾಡಿರುವ ಹಣದ ಬಗ್ಗೆ ಆತಂಕ, ಅನುಮಾನ ಮೂಡಿರುವುದು ಮಾತ್ರ ವಾಸ್ತವ.

ಸದ್ಯಕ್ಕೆ ಲಂಚುಲಾಲ್‌ ತಮ್ಮ ವಿರುದ್ದ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಯಾವುದೇ ರೀತಿಯ ಅಥವಾ ಸ್ಪಷ್ಟನೆ ಕೊಟ್ಟಿಲ್ಲ. ಸದಾ ಕಾಲ ಸೋಷಿಯಲ್‌ ಮೀಡಿಯಾದಲ್ಲಿ ಅಬ್ಬರಿಸುತ್ತಿದ್ದ ಲಂಚುಲಾಲ್‌ ಇಷ್ಟೊಂದು ಗುರುತರ ಆರೋಪ ಬಂದಿದ್ದರೂ ಯಾಕೆ ಮೌನವಾಗಿದ್ದಾರೆ ಅಥವಾ ಹೂಡಿಕೆದಾರರ ಕೈಗೆ ಸಿಗುತ್ತಿಲ್ಲ ಯಾಕೆ ಎನ್ನುವ ಬಹುದೊಡ್ಡ ಪ್ರಶ್ನೆಯೂ ಕಾಡುತ್ತಿದೆ. ಇಲ್ಲಿವರೆಗೆ ಕಾನೂನಿನಡಿ ಯಾವುದೇ ದೂರು ಕೂಡ ದಾಖಲಾಗಿಲ್ಲ ಎನ್ನುವುದು ಗಮನಾರ್ಹ.