ಕೆಪಿಸಿಸಿ ಅಧ್ಯಕ್ಷರ, ಸಿಎಂ ಹುದ್ದೆ ಖಾಲಿ ಇಲ್ಲ- ಚರ್ಚೆಯೇ ಅಪ್ರಸ್ತುತ: ಈಶ್ವರ ಖಂಡ್ರೆ

ಜಾತಿ, ಧರ್ಮದ ಆಧಾರದ ಮೇಲೆ ನಾಯಕತ್ವ ನಿರ್ಧಾರ ಆಗುವುದಿಲ್ಲ- ಈಶ್ವರ ಖಂಡ್ರೆ

Oct 23, 2025 - 16:57
Oct 23, 2025 - 16:58
ಕೆಪಿಸಿಸಿ ಅಧ್ಯಕ್ಷರ, ಸಿಎಂ ಹುದ್ದೆ ಖಾಲಿ ಇಲ್ಲ- ಚರ್ಚೆಯೇ ಅಪ್ರಸ್ತುತ: ಈಶ್ವರ ಖಂಡ್ರೆ


ಬೆಂಗಳೂರು, ಅ.23: ರಾಜ್ಯದಲ್ಲಿ ಮುಖ್ಯಮಂತ್ರಿಗಳ ಕುರ್ಚಿಯೂ ಖಾಲಿ ಇಲ್ಲ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ. ಈ ಬಗ್ಗೆ ಚರ್ಚೆಯೇ ಅಪ್ರಸ್ತುತ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ವಿಧಾನಪರಿಷತ್ ಸದಸ್ಯರಾದ ಯತೀಂದ್ರ ಅವರ ಮಾತುಗಳನ್ನು ಮುಖ್ಯಮಂತ್ರಿಗಳ ಧ್ವನಿ ಎಂಬಂತೆ ಬಿಂಬಿಸುವುದು ಸರಿಯಲ್ಲ. ಈಗಾಗಲೇ ಯತೀಂದ್ರ ಅವರೇ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, ತಾವು ಏನೂ ಹೇಳುವ ಅಗತ್ಯವಿಲ್ಲ ಎಂದರು.
ಯಾವುದೇ ಜಾತಿ, ಮತ, ಧರ್ಮದ ಆಧಾರದ ಮೇಲೆ ನಾಯಕತ್ವ ನಿರ್ಧಾರ ಆಗುವುದಿಲ್ಲ ಎಂದ ಈಶ್ವರ ಖಂಡ್ರೆ, ಪಕ್ಷ 2028ರಲ್ಲೂ ಮರಳಿ ಅಧಿಕಾರಕ್ಕೆ ಬರಲಿದ್ದು, ಆಗ ಪಕ್ಷದ ವರಿಷ್ಠರು, ಸೂಕ್ತ ಸಂದರ್ಭದಲ್ಲಿ, ಎಲ್ಲ ಜಾತಿ, ಸಮುದಾಯದವರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುತ್ತಾರೆ ಎಂದರು. 
ನವೆಂಬರ್ ಕ್ರಾಂತಿ ಎಂಬುದು ಸಂಪೂರ್ಣ ಭ್ರಾಂತಿ, ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಭಯಭೀತರಾಗಿರುವ ವಿಪಕ್ಷಗಳು 
ದೆಹಲಿಗೆ ಅರಣ್ಯ ಸಚಿವರು:
ಇಂದು ಸಂಜೆ ತಾವು ದೆಹಲಿಗೆ ಹೋಗುತ್ತಿದ್ದು, ನಾಳೆ ಪಕ್ಷದ ಕೆಲವು ವರಿಷ್ಠರೊಂದಿಗೆ ಸೌಹಾರ್ದ ಭೇಟಿ ನಡೆಯಲಿದೆ. ಜೊತೆಗೆ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿ, ಅರಣ್ಯ ಅಭಿವೃದ್ಧಿ ಶುಲ್ಕಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದ್ದು, ಈ ಕುರಿತಂತೆ ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.
ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರು ಪ್ರವಾಸದಲ್ಲಿರುವ ಕಾರಣ ಸರ್ಕಾರದ ಕಾರ್ಯದರ್ಶಿಯವರನ್ನು ಭೇಟಿ ಮಾಡಿ, ಕಾಂಪಾ ನಿಧಿ, ಎತ್ತಿನಹೊಳೆ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ಸಕ್ಕರೆ ಬೈಲು ಆನೆ ಶಿಬಿರದ ಆನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ನಾಲ್ಕು ಆನೆಗಳು ಗಾಯದಿಂದ ಬಳಲುತ್ತಿರುವ ವಿಷಯ ತಮಗೆ ತಿಳಿದ ಕೂಡಲೇ ತನಿಖೆಗೆ ಆದೇಶ ನೀಡಿದ್ದು, ತಜ್ಞ ವೈದ್ಯರಿಂದ ಆನೆಗಳ ಚಿಕಿತ್ಸೆಗೂ ಕ್ರಮ ವಹಿಸಲಾಗಿದೆ. ರಾಜ್ಯದಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಇದ್ದು, ನೇಮಕಾತಿಯವರೆಗೆ ಪಶುವೈದ್ಯಕೀಯ ಇಲಾಖೆಯಿಂದ ಎರವಲು ಸೇವೆ ಪಡೆಯುವಂತೆ ಸೂಚಿಸಲಾಗಿದೆ ಎಂದರು.
ಅರಣ್ಯ, ಪರಿಸರ ಸಚಿವನಾಗಿ ತೃಪ್ತಿ ಇದೆ:
ತಮಗೆ ಮುಖ್ಯಮಂತ್ರಿಯವರು ಮತ್ತು ಪಕ್ಷದ ವರಿಷ್ಠರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಜವಾಬ್ದಾರಿ ನೀಡಿದ್ದು, ಮುಂದಿನ ಪೀಳಿಗೆಯ ಹಿತ ಕಾಯುವ ಕೆಲಸ ಮಾಡುತ್ತಿದ್ದೇನೆ ಎಂಬ ತೃಪ್ತಿ ತಮಗಿದೆ ಎಂದು ಪ್ರಶ್ನೆಯೊಂದಕ್ಕೆ ಈಶ್ವರ ಖಂಡ್ರೆ ಉತ್ತರಿಸಿದರು.
ಮಹಾಪುರುಷರು ಯಾವುದೇ ಜಾತಿಯ ಸ್ವತ್ತಲ್ಲ:
ಮಹಾಪುರುಷರು ವಿಶ್ವದ ಬೆಳಕಾಗಿದ್ದು, ಯಾವುದೇ ಒಂದು ಜಾತಿಯ ಸ್ವತ್ತಲ್ಲ. ಆದರೆ, ಕೆಲವರು ಮಹಾಪುರುಷರನ್ನು ತಮ್ಮ ಜಾತಿ, ಜನಾಂಗ ಅಥವಾ ಸಂಸ್ಥೆಯ ಸ್ವತ್ತು ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದ ಅವರು, ಒಗ್ಗಟ್ಟಿನಲ್ಲಿ ಶಕ್ತಿ ಇದೆ. ರಾಜ್ಯಕ್ಕೆ ರಾಷ್ಟ್ರಕ್ಕೆ ಒಳಿತಾಗುವಂತೆ ಎಲ್ಲ ಜಾತಿ, ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಆಗಬೇಕು. ವೀರಶೈವ-ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಲು ಯಾರೇ ಪ್ರಯತ್ನ ಮಾಡಿದರೂ ಅದನ್ನು ಸ್ವಾಗತಿಸುವುದಾಗಿ ತಿಳಿಸಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.