ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ!
ಈಗ ಚಳಿಗಾಲವಾದ್ದರಿಂದ, ಈ ಸಮಯದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಿರುತ್ತದೆ. ಅದರಲ್ಲಿಯೂ ಹೃದಯಾಘಾತ ಮತ್ತು ಹೃದಯ ವೈಫಲ್ಯದ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಈ ರೀತಿಯ ಸಮಸ್ಯೆಯನ್ನು ತಡೆಯಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಸಕಾಲಿಕವಾಗಿ ಪತ್ತೆಹಚ್ಚಲು ಕೆಲವು ಪರೀಕ್ಷೆಗಳನ್ನೂ ಮಾಡಿಸುವುದು ಬಹಳ ಮುಖ್ಯ. ಇದಕ್ಕಾಗಿ, ಡಾ. ವರುಣ್ ಬನ್ಸಾಲ್ ಮೂರು ಸಾಮಾನ್ಯ ಪರೀಕ್ಷೆಗಳ ಬಗ್ಗೆ ತಿಳಿಸಿದ್ದು ನೀವು ಕೂಡ ಈ ಪರೀಕ್ಷೆ ಮಾಡಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಚಳಿಗಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಿರುತ್ತದೆ. ಬೇಸಾಮಾನ್ಯವಾಗಿ ಚಳಿಯಲ್ಲಿ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತವೆ, ಹಾಗಾಗಿ ಈ ರೀತಿಯ ಸಮಸ್ಯೆಗಳು ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ, ಆರಂಭಿಕ ಹಂತದಲ್ಲಿಯೇ ಹೃದಯ ಸಂಬಂಧಿ ಸಮಸ್ಯೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ವೈದ್ಯರು ಶಿಫಾರಸು ಮಾಡುತ್ತಾರೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಕೆಲವು ಅಗತ್ಯ ಹೃದಯ ಪರೀಕ್ಷೆಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಬಹುದು. ಹಾಗಾದರೆ ಚಳಿಗಾಲದಲ್ಲಿ ಅಗತ್ಯವಾಗಿ ಮಾಡಬೇಕಾದ ಟೆಸ್ಟ್ ಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಲಿಪಿಡ್ ಪ್ರೊಫೈಲ್ ಪರೀಕ್ಷೆ
ಈ ಪರೀಕ್ಷೆಯು ದೇಹದಲ್ಲಿನ ಲಿಪಿಡ್‌ಗಳ ಮಟ್ಟವನ್ನು ತಿಳಿಸುತ್ತದೆ. ಆ ಮೂಲಕ, LDL (ಕೆಟ್ಟ ಕೊಲೆಸ್ಟ್ರಾಲ್), HDL (ಉತ್ತಮ ಕೊಲೆಸ್ಟ್ರಾಲ್) ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಂಡುಹಿಡಿಯಬಹುದು. ಈ ಮಟ್ಟಗಳು ದೇಹದಲ್ಲಿನ ಪ್ರಮಾಣಿತ ಶ್ರೇಣಿಗಿಂತ ಹೆಚ್ಚಿದ್ದರೆ, ಅದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದರ್ಥ.
ಬಿಪಿ ಟೆಸ್ಟ್ (ರಕ್ತದೊತ್ತಡದ ಮೇಲ್ವಿಚಾರಣೆ)
ರಕ್ತವನ್ನು ಪಂಪ್ ಮಾಡಲು ಹೃದಯವು ಎಷ್ಟು ಒತ್ತಡವನ್ನು ಬಳಸುತ್ತಿದೆ ಎಂಬುದನ್ನು ಈ ಪರೀಕ್ಷೆಯು ತೋರಿಸುತ್ತದೆ. ಚಳಿಗಾಲದಲ್ಲಿ ಹೃದಯದ ನಾಳಗಳು ಸಂಕುಚಿತಗೊಳ್ಳುವುದರಿಂದ ಈ ಸಮಯದಲ್ಲಿ ಈ ಪರೀಕ್ಷೆ ಮಾಡಿಸುವುದು ಬಹಳ ಒಳ್ಳೆಯದು. ಅಧಿಕ ರಕ್ತದೊತ್ತಡ ಹೊಂದಿರುವವರು ಖಂಡಿತವಾಗಿಯೂ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
ಇಸಿಜಿ
ಈ ಪರೀಕ್ಷೆಯು ಹೃದಯ ಬಡಿತ, ಹೃದಯ ಸ್ನಾಯುಗಳ ಬಲ ಮತ್ತು ಹೃದಯ ಸಂಬಂಧಿ ತೊಂದರೆಗಳನ್ನು ಬಹಿರಂಗಪಡಿಸುತ್ತದೆ. ವ್ಯಕ್ತಿಗೆ ಪದೇ ಪದೇ ಎದೆ ನೋವು ಬರುತ್ತಿದ್ದರೆ ಅವರು ಈ ಪರೀಕ್ಷೆಯನ್ನು ಖಂಡಿತವಾಗಿಯೂ ಮಾಡಬೇಕು.


