ಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಆಂಥ್ರೋಪಿಕ್ ನಿಯೋಗ

Anthropic Delegation Meets CM D.K.Shivakumar: ಆಡಳಿತ, ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ, ಸಂಶೋಧನೆ & ರಾಜ್ಯದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ, ಕೃತಕ ಬುದ್ಧಿಮತ್ತೆ (AI) ಬಳಕೆ ಹೆಚ್ಚಿಸಲು ಸುದೀರ್ಘ ಸಹಭಾಗಿತ್ವ ಸಾಧಿಸುವ ಕುರಿತು ಸಿಎಂ ಡಿ.ಕೆ.ಶಿವಕುಮಾರ್ ಅವರು 'ಆಂಥ್ರೋಪಿಕ್' ಸಂಸ್ಥೆಯ ನಿಯೋಗದೊಂದಿಗೆ ಚರ್ಚೆ ನಡೆಸಿದರು.

Aug 6, 2026 - 16:49
Aug 6, 2026 - 17:34
ಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಆಂಥ್ರೋಪಿಕ್ ನಿಯೋಗ

ಬೆಂಗಳೂರು: ಆಡಳಿತ, ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ, ಸಂಶೋಧನೆ & ರಾಜ್ಯದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ, ಕೃತಕ ಬುದ್ಧಿಮತ್ತೆ (AI) ಬಳಕೆ ಹೆಚ್ಚಿಸಲು ಸುದೀರ್ಘ ಸಹಭಾಗಿತ್ವ ಸಾಧಿಸುವ ಕುರಿತು ಸಿಎಂ ಡಿ.ಕೆ.ಶಿವಕುಮಾರ್ ಅವರು 'ಆಂಥ್ರೋಪಿಕ್' ಸಂಸ್ಥೆಯ ನಿಯೋಗದೊಂದಿಗೆ ಮಾತುಕತೆ ನಡೆಸಿದರು.
 
ಐಟಿ-ಬಿಟಿ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆಂಥ್ರೋಪಿಕ್ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಇಂದು (ಗುರುವಾರ) ಭೇಟಿ ಮಾಡಿದ್ದರು.
 
ಡೇಟಾ ಗೌಪ್ಯತೆ - ಡೇಟಾ ಸಾರ್ವಭೌಮತ್ವ ಖಚಿತಪಡಿಸಿಕೊಳ್ಳುವ ಮೂಲಕ, ಸರ್ಕಾರ ಹಾಗೂ ಉದ್ಯಮಗಳಿಗಾಗಿ ಅನ್ವಯಿಕ ಎಐ (Applied AI) ಪರಿಹಾರಗಳ 'ಪ್ರಯೋಜನಕಾರಿ ಅಳವಡಿಕೆ'ಯ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. 
 
ಪ್ರಸ್ತಾವಿತ ಎಐ ವಿಶ್ವವಿದ್ಯಾಲಯ, ಬೃಹತ್ ಮಟ್ಟದ ಕೌಶಲ್ಯಾಭಿವೃದ್ಧಿ ಯೋಜನೆಗಳು & ಡೀಪ್-ಟೆಕ್ ಅನ್ವೇಷಣೆಗಳಿಗೆ ನೀಡುವ ಬೆಂಬಲವನ್ನು ಒಳಗೊಂಡಂತೆ, ಸಮಗ್ರ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ರಾಜ್ಯದ ದೃಷ್ಟಿಕೋನವನ್ನು ಮುಖ್ಯಮಂತ್ರಿಗಳು ವಿವರಿಸಿದರು. 
 
ದೇಶದಲ್ಲೇ ಅತಿದೊಡ್ಡ ಎಐ ಪ್ರಮಾಣೀಕೃತ ಪ್ರತಿಭಾವಂತರನ್ನು ರೂಪಿಸಲು, 'ನಿಪುಣ' ಕಾರ್ಯಕ್ರಮದಡಿ 'ಕ್ಲಾಡ್' ಸರ್ಟಿಫಿಕೇಶನ್ ಸೇರಿದಂತೆ ಎಐ-ಸಂಬಂಧಿತ ಸರ್ಟಿಫಿಕೇಶನ್ ಕೋರ್ಸ್‌ಗಳನ್ನು ಪರಿಚಯಿಸುವ ಬಗ್ಗೆಯೂ ಚರ್ಚೆ ಮಾಡಲಾಯಿತು.
 
ಸರ್ಕಾರಿ ವ್ಯವಸ್ಥೆಗಳಲ್ಲಿ ನಡೆಯುವ ವಂಚನೆ ತಡೆಯಲು ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳು - ಶಿಕ್ಷಣ ಸಂಸ್ಥೆಗಳು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ದಕ್ಷತೆ, ಭದ್ರತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸಲು, ಕೃತಕ ಬುದ್ಧಿಮತ್ತೆ ಹೇಗೆ ನೆರವಾಗುತ್ತದೆ ಎಂಬುದರ ಕುರಿತು ಮುಖ್ಯಮಂತ್ರಿಗಳು ಆಂಥ್ರೋಪಿಕ್‌ನ ತಾಂತ್ರಿಕ ಸಲಹೆ ಕೋರಿದರು.
 
ಎಐ ಶಿಕ್ಷಣ - ಸಂಶೋಧನೆಯನ್ನು ಬಲಪಡಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಂಥ್ರೋಪಿಕ್‌ನ 'ಕ್ಲಾಡ್ ಎಐ' ವೇದಿಕೆಯ ಲಭ್ಯತೆಗೆ ರಿಯಾಯಿತಿ/ ಸಬ್ಸಿಡಿ ನೀಡುವಂತೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು. 
 
ಹಿರಿಯ ಐಎಎಸ್ ಅಧಿಕಾರಿ ಡಾ.ಮಂಜುಳಾ ಎನ್, ಮುನೀಶ್ ಮೌದ್ಗಿಲ್, ಸಿಎಂ ಹಣಕಾಸು ಸಲಹೆಗಾರ ಎಲ್.ಕೆ.ಅತೀಕ್, ಆಂಥ್ರೋಪಿಕ್ ಸಂಸ್ಥೆಯ ಪರವಾಗಿ ಅಂತರರಾಷ್ಟ್ರೀಯ ನೀತಿ ವಿಭಾಗದ ಮುಖ್ಯಸ್ಥ ಮೈಕೆಲ್ ಸೆಲ್ಲಿಟೋ, ಅಂತಾರಾಷ್ಟ್ರೀಯ ಮಾರುಕಟ್ಟೆಗಳ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ ಸಿಯೌರಿ, ಭಾರತದ ವ್ಯವಸ್ಥಾಪಕ ನಿರ್ದೇಶಕಿ ಐರಿನಾ ಘೋಷ್ ಹಾಗೂ ಭಾರತದ ನೀತಿ ವಿಭಾಗದ ಮುಖ್ಯಸ್ಥ ಆಮ್ಲಾನ್ ಮೊಹಾಂತಿ ಸೇರಿದಂತೆ ಇತರರು ಇದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.