ಬೆಂಗಳೂರು: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ 'ನವರಾತ್ರ ನಮಸ್ಯಾ' ಮಹೋತ್ಸವ
Navaratra Namasya: ಬೆಂಗಳೂರಿನಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ 'ನವರಾತ್ರ ನಮಸ್ಯಾ' ಮಹೋತ್ಸವ ನಡೆಯಲಿದೆ.
ಬೆಂಗಳೂರು: ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ನವರಾತ್ರಿ ವ್ರತವು 'ನವರಾತ್ರ ನಮಸ್ಯಾ' ಎಂಬ ಹೆಸರಿನೊಂದಿಗೆ ಅ.11 ರಿಂದ ಅ.21 ರವರೆಗೆ ಗಿರಿನಗರದಲ್ಲಿರುವ ಶ್ರೀ ಮಠದ ಶಾಖೆಯಲ್ಲಿ ನಡೆಯಲಿದೆ. ವ್ರತ - ಜಪ - ಪಾರಾಯಣ - ಯಜ್ಞ - ದಾನ - ಮತ್ತು ಜ್ಞಾನ ಪ್ರಸಾರದ ಮೂಲಕ ಜಗನ್ಮಾತೆಯ ಆರಾಧನೆ ವೈಭವದಿಂದ ಸಂಪನ್ನವಾಗಲಿದೆ.
'ಮಹಾನಗರದಲ್ಲಿ ಮಹಾದೇವಿಯ ಮಹಾರಾಧನೆ' ಎಂಬ ಶೀರ್ಷಿಕೆಯೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ರಾಜರಾಜೇಶ್ವರಿಯ ಉಪಾಸನೆ ನಡೆಯಲಿದೆ. 9 ದಿನಗಳ ಕಾಲ ಉಪವಾಸ ವ್ರತದೊಂದಿಗೆ, ಶ್ರೀಗಳು ರಾಜರಾಜೇಶ್ವರಿಗೆ ವಿಶೇಷ ಪೂಜೆಯನ್ನು ಸಮರ್ಪಿಸಲಿದ್ದಾರೆ. ಶ್ರೀಗಳಿಂದ ಪ್ರತಿದಿನ ವಿಶಿಷ್ಟವಾದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ. ವಿಶೇಷವಾಗಿ, ಶ್ರೀದುರ್ಗಾ ಮಂಟಪದಲ್ಲಿ ಮೃಣ್ಮಯ ಶ್ರೀ ರಾಜರಾಜೇಶ್ವರಿಯ ಮಹಾಪೂಜೆ ನಡೆಯಲಿದೆ. ವಿಶೇಷ ಉಪಾಸನೆಯಾಗಿ ಪ್ರತಿದಿನ ನೂರರಂತೆ 1000 ಸಪ್ತಶತೀ ಪಾರಾಯಣ ನಡೆಯಲಿದೆ.

ಒಂಭತ್ತು ದಿನ 9 ವಿಶೇಷ ಹವನಗಳು ಜರುಗಲಿವೆ. ವಿಜಯದಶಮಿಯ ದಿನ ಶತಚಂಡಿಕಾ ಮಹಾಯಾಗ ಮುಕ್ತಾಯಗೊಳ್ಳಲಿದೆ. ಪ್ರತಿದಿನ ಅನ್ನಪೂರ್ಣೇಶ್ವರೀ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಸಂಜೆ ದುರ್ಗಾದೀಪ ನಮಸ್ಕಾರ, ಮಾತೆಯರಿಂದ ಕುಂಕುಮಾರ್ಚನೆ, ಉಡಿಸೇವೆಯನ್ನು ನೆರೆವೇರಿಸಲಾಗುತ್ತದೆ. ಭಜನಾ ತಂಡಗಳಿಂದ ಭಜನೆಗಳು ನಡೆಯಲಿದ್ದು, ಕಲೋಪಾಸನೆಯ ಮೂಲಕ ದೇವಿಯ ಆರಾಧನೆ ಇರಲಿದೆ.
ಶ್ರೀಗಳು ಚಾತುರ್ಮಾಸ್ಯದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ಸೂಚಿಸಿದಂತೆ, ಭೋಜನವು ಭಗವಂತನ ಪೂಜೆಯಾಗಿದೆ. ಭೋಜನ ಕಾಲದಲ್ಲಿ ಭಗವಂತನ ಸ್ಮರಣೆಗೆ ಅನುಕೂಲವಾಗುವಂತೆ 'ಅನ್ನಬ್ರಹ್ಮ ಸಂಕೀರ್ತನಮ್' ಎಂಬ ವಿಭಿನ್ನ ಕಾರ್ಯಕ್ರಮ ಇರಲಿದ್ದು, ಭೋಜನದ ಜೊತೆಗೆ ಭಕ್ತಿ ರಸದ ಸಿಹಿಯೂ ಜೊತೆಯಾಗಲಿದೆ.

ಅ.21 ಬುಧವಾರದಂದು ವಿದ್ಯಾದಶಮಿಯಂದು 'ನವರಾತ್ರ ನಮಸ್ಯಾ' ದ ಮಹಾಸಮಾರೋಪ ನಡೆಯಲಿದ್ದು, ಶ್ರೀಗಳಿಂದ ಆಶೀರ್ವಚನ, ಸಾರ್ವಜನಿಕ ಮಂತ್ರಾಕ್ಷತೆ ಇರಲಿದೆ. ನವರಾತ್ರಿಯ ಪರ್ವಕಾಲದಲ್ಲಿ ವಿವಿಧ ಆಯಾಮಗಳಲ್ಲಿ ರಾಜರಾಜೇಶ್ವರಿಯ ಉಪಾಸನೆ ಜರುಗಲಿದೆ. ಆಸ್ತಿಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ದೇವಿಯ ಕೃಪೆಗೆ ಭಾಜನರಾಗುವಂತೆ ನವರಾತ್ರ ನಮಸ್ಯಾ ಸಮಿತಿಯು ಕರೆ ನೀಡಿದೆ.
ನವರಾತ್ರ ನಮಸ್ಯಾ ಕಾರ್ಯಾಲಯ ಉದ್ಘಾಟನೆ: ಕಾರ್ಯಕ್ರಮದ ಕಾರ್ಯಾಲಯವನ್ನು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಉದ್ಘಾಟಿಸಿದರು. ನವರಾತ್ರ ಪರ್ವದ ದೇವಿಯ ಆರಾಧನೆಯು ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರವಿದ್ದು, ಬೆಂಗಳೂರಿನ ಮಹಾಜನತೆ ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.