UGNEET-26: ಕೆಇಎಯಿಂದ ಸ್ಟ್ರೇ ವೇಕೆನ್ಸಿ ಸುತ್ತಿನ ವೇಳಾಪಟ್ಟಿ ಪ್ರಕಟ

UGNEET-26: ಯುಜಿನೀಟ್-2026ರ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕೆಇಎ ಪ್ರಕಟಿಸಿದೆ.

Oct 10, 2026 - 17:52
UGNEET-26: ಕೆಇಎಯಿಂದ  ಸ್ಟ್ರೇ ವೇಕೆನ್ಸಿ ಸುತ್ತಿನ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಯುಜಿನೀಟ್-2026ರ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.

ಯುಜಿನೀಟ್-2026ರಲ್ಲಿ ಅರ್ಹತೆ‌ ಪಡೆದು, ಇದುವರೆಗೂ ಕೆಇಎನಲ್ಲಿ ನೋಂದಣಿ ಮಾಡದವರು ಅ.13 ರಿಂದ 16 ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು.

ಶುಲ್ಕ ಪಾವತಿ ನಂತರ, ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ಕಾಷನ್ ಡೆಪಾಸಿಟ್ ಕಟ್ಟಿ, ಆಪ್ಷನ್ಸ್ ದಾಖಲಿಸಬೇಕು.

ಅ.16 ರಿಂದ‌‌ 19 ರವರೆಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ.

ಕಾಷನ್ ಡೆಪಾಸಿಟ್ ವಿವರಗಳು:

ರೂ.1,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ನ ಸರ್ಕಾರಿ ಸೀಟುಗಳು ಮತ್ತು ದಂತ ವೈದ್ಯಕೀಯ ಕೋರ್ಸ್‌ನ ಎಲ್ಲಾ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ.

ರೂ.12,00,117 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ಜಿ (ಸರ್ಕಾರಿ) ಮತ್ತು ಪಿ (ಪ್ರೆವೈಟ್) ಸೀಟುಗಳಿಗೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ.

ರೂ.25,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ಎಲ್ಲಾ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಬಹುದು.

ಯಾರೆಲ್ಲ ಅರ್ಹರು?

ಇದುವರೆಗೂ ಕೆಇಎ‌ ಮೂಲಕ ಯಾವುದೇ ಸೀಟು ಹಂಚಿಕೆ ಮಾಡಿಕೊಳ್ಳದವರು ಹಾಗೂ ದಂತ ವೈದ್ಯಕೀಯ ಸೀಟು ಸಿಕ್ಕಿ, ವೈದ್ಯಕೀಯ ಸೀಟುಗಳಿಗೆ ಸೇರ ಬಯಸುವವರು ಈ ಸುತ್ತಿನಲ್ಲಿ ಭಾಗವಹಿಸಬಹುದು.

ಯಾರೆಲ್ಲ ಭಾಗವಹಿಸುವಂತಿಲ್ಲ?

ಅಖಿಲ ಭಾರತ, ಡೀಮ್ಡ್ ವಿವಿ ಸೇರಿ ಬೇರೆ ಯಾವುದೇ ರಾಜ್ಯಗಳ ಮೂಲಕ ಮೊದಲ ಮೂರು ಸುತ್ತುಗಳಲ್ಲಿ ಸೀಟು ಹಂಚಿಕೆಯಾದವರು ಈ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

ಶುಲ್ಕ ನೋಡಿಯೇ ಆಪ್ಷನ್ಸ್ ದಾಖಲಿಸಿ:

ಉಳಿಕೆ ಸೀಟು ಮತ್ತು ಅದರ ಶುಲ್ಕದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅದನ್ನು ಸರಿಯಾಗಿ‌ ನೋಡಿಯೇ ಆಪ್ಷನ್ಸ್ ದಾಖಲಿಸಲು ಮುಂದಾಗಿ. ಈಗಾಗಲೇ ಇತರ ಕೋರ್ಸ್‌ಗಳಿಗೆ ಪ್ರವೇಶ ಪಡೆದು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಪೋಷಕರ ಜೊತೆಗೆ ಚರ್ಚಿಸಿಯೇ ಆಪ್ಷನ್ಸ್ ದಾಖಲಿಸಬೇಕು ಎಂದು ಕೆಇಎ ತಿಳಿಸಿದೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.