ಗೋಕರ್ಣ: 'ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು' ಎಂಬ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿದರೆ ಆರೋಗ್ಯಕರ ಜೀವನ ನಡೆಸುವುದು ಸುಲಭವಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶುಕ್ರವಾರ ಆಶೀರ್ವಚನ ನೀಡಿ, ಮಾತನಾಡಿದರು.

ಆಯುರ್ವೇದದ ಮಹರ್ಷಿ ವಾಗ್ಭಟರು ಪ್ರತಿಪಾದಿಸಿರುವ 'ಹಿತವಾದ ಆಹಾರವನ್ನು ಸೇವಿಸಿ, ಮಿತ ಪ್ರಮಾಣದಲ್ಲಿ ತಿನ್ನಿ ಹಾಗೂ ಸಕಾಲದಲ್ಲಿ ಊಟ ಮಾಡಿ' ಎಂಬ ಸರಳ ಸೂತ್ರವೇ ಆರೋಗ್ಯಕರ ಬದುಕಿನ ಆಧಾರ. ನಮ್ಮ ಶರೀರ ಬೆಲೆಬಾಳುವಂತಹದ್ದು, ದೇಹ ಕೆಡುವಂತಹ ಆಹಾರವನ್ನು ಸೇವಿಸಬಾರದು. ಮಿತಿ ಮೀರಿದ ಸೇವನೆ ಅಪಾಯಕ್ಕೆ ದಾರಿ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಊಟ ಮಾಡುವ ಮುನ್ನ 'ಇದು ನನಗೆ ಹಿತವೇ? ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? ಈಗ ಇದನ್ನು ತಿನ್ನಲು ಸರಿಯಾದ ಸಮಯವೇ?' ಎಂಬ ಪ್ರಶ್ನೆಗಳನ್ನು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಆಹಾರದ ಆಯ್ಕೆಗೆ ಹೆಚ್ಚಿನ ಮಹತ್ವ ನೀಡುತ್ತಾ, ಸಿಕ್ಕಿದ್ದನ್ನೆಲ್ಲ ತಿನ್ನುವ ಬದಲು ಆಯ್ಕೆ ಮಾಡಿ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಮ್ಮ ಮುಂದೆ ಎಷ್ಟೇ ರುಚಿಕರ ಆಹಾರ ಇದ್ದರೂ, ದೇಹಕ್ಕೆ ಹಿತವಾದದ್ದು ಯಾವುದು ಮತ್ತು ಬಿಡಬೇಕಾದದ್ದು ಯಾವುದು ಎಂಬ ವಿವೇಕ ಇರಬೇಕು. ಆಹಾರದ ಆಯ್ಕೆಯೇ ಉತ್ತಮ ಆರೋಗ್ಯದ ಮೊದಲ ಹೆಜ್ಜೆ ಎಂದರು.

ಆಹಾರದ ಪ್ರಮಾಣವೂ ಅಷ್ಟೇ ಮುಖ್ಯವಾಗಿದೆ. ರುಚಿಯಾಗಿದೆ ಎಂಬ ಕಾರಣಕ್ಕೆ ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಮಿತಿ ಮೀರಿ ಸೇವಿಸಿದ ಆಹಾರ ಅಜೀರ್ಣ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಯಾವಾಗಲೂ ಪ್ರಮಾಣಬದ್ಧವಾಗಿ ಊಟ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಎಷ್ಟೇ ಉತ್ತಮ ಆಹಾರವಾಗಿದ್ದರೂ ಅಕಾಲದಲ್ಲಿ ಸೇವಿಸಿದರೆ, ಅದು ದೇಹಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಸರಿಯಾದ ಸಮಯದಲ್ಲಿ ಸೇವಿಸಿದ ಆಹಾರ ದೇಹಕ್ಕೆ ಪೋಷಣೆ ನೀಡುತ್ತದೆ. ಆದರೆ ಸಮಯ ಮೀರಿ ಅಥವಾ ಅಸಮಯದಲ್ಲಿ ಸೇವಿಸಿದರೆ ಅದೇ ಆಹಾರ ದುಷ್ಪರಿಣಾಮ ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.
ಮಾನವ ದೇಹ ಅತ್ಯಂತ ಅಮೂಲ್ಯವಾದ ಸಂಪತ್ತು. ಹಣ ಕೊಟ್ಟರೂ ದೇಹದ ಯಾವುದೇ ಅಂಗವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ದೇಹವನ್ನು ದೇವರ ಕೊಡುಗೆಯೆಂದು ಭಾವಿಸಿ, ಅದಕ್ಕೆ ಹಾನಿಯಾಗುವ ಆಹಾರ ಹಾಗೂ ಅಭ್ಯಾಸಗಳಿಂದ ದೂರವಿರಬೇಕು. 'ಹಿತವಾಗಿ ತಿನ್ನಿ, ಮಿತವಾಗಿ ತಿನ್ನಿ ಮತ್ತು ಸಕಾಲದಲ್ಲಿ ತಿನ್ನಿ' ಎಂಬ ಒಂದೇ ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಲು ಸಾಧ್ಯ ಎಂದು ವಿವರಿಸಿದರು.
ವೇ.ಮೂ. ರವೀಂದ್ರ ಕೊಡ್ಲಕೆರೆ ದಂಪತಿಗಳು ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದ ಪರವಾಗಿ ಗುರುಭಿಕ್ಷಾಸೇವೆಯನ್ನು ನೆರವೇರಿಸಿದರು. ಉಪಾಧಿವಂತ ಮಂಡಲದ ವೇ.ಮೂ. ಪರಮೇಶ್ವರ ಭಟ್ ಮಾರ್ಕಂಡೇ, ವೇ.ಮೂ.ರಮೇಶ ಪ್ರಸಾದ, ವೇ.ಮೂ. ಜಂಬೆ ಬಾಳ ಭಟ್ರು ಹಾಗೂ ವೇ.ಮೂ. ಪ್ರಶಾಂತ ಹಿರೇಗಂಗೆ ಉಪಸ್ಥಿತರಿದ್ದರು. ಚಾತುರ್ಮಾಸ್ಯದ ಸಂಯೋಜಕರಾದ ಅಜಿತ ಗುಡ್ಗೆ, ಶ್ರೀಕೃಷ್ಣ ಎಂ ಶಾಸ್ತ್ರಿ, ಸೌಮ್ಯಾ ಮಧ್ಯಸ್ಥ, ಶ್ರೀವತ್ಸ ಭೀಮನಕೋಣೆ, ದಿನ ಪ್ರಧಾನರಾಗಿ ಈಶ್ವರ ಗಾಂವ್ಕರ್ ದಂಪತಿಗಳು ಭಾಗವಹಿಸಿದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.