ಸ್ಟಾರ್ ಹೋಟೆಲ್‌ಗಳ ಕರಾಳ ಸತ್ಯ ಅನಾವರಣ: ಕೊಳೆತ ತರಕಾರಿ.. ಅವಧಿ ಮೀರಿದ ಮಾಂಸ ಪತ್ತೆ!
Bengaluru: ನಗರದ 26 ಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು: ನಗರ ಕೆಲ ಸ್ಟಾರ್ ಹೋಟೆಲ್‌ಗಳ ಬಣ್ಣ ಬಯಲಾಗಿದೆ. ಹೊರಗಡೆ ಥಳಕು ಬಳಕಿನ ಸೇವೆ.. ಒಳಗೆ ಕೊಳೆತ ತರಕಾರಿ & ಹಳಸಿದ ಮಾಂಸ ಬಳಸುತ್ತಿರುವುದು ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ಅಧಿಕಾರಿಗಳ ದಾಳಿಯಲ್ಲಿ ಬಯಲಾಗಿದೆ. 3-ಸ್ಟಾರ್ ಹಾಗೂ 5-ಸ್ಟಾರ್ ಸೇರಿ, ಒಟ್ಟು 26 ಹೈಫೈ ಹೋಟೆಲ್‌ಗಳ ಮೇಲೆ ರೇಡ್ ಮಾಡಲಾಗಿದೆ.
ಕೆಲ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆಯಾಗಿದೆ. ಮಾಂಸಾಹಾರಿ ಮತ್ತು ಸಸ್ಯಾಹಾರಿ ಆಹಾರವನ್ನು ಪ್ರತ್ಯೇಕಿಸದೆ, ಒಟ್ಟಿಗೆ ಸಂಗ್ರಹಿಸಿ ಇಡಲಾಗಿದೆ. ಅವಧಿ ಮೀರಿದ ಆಹಾರ ಪದಾರ್ಥಗಳ ಉಪಯೋಗ, ಅಸ್ವಚ್ಛ ವಾತಾವರಣ, ಶಿಲೀಂಧ್ರ ಬಾಧಿತ ತರಕಾರಿಗಳು ಹಾಗೂ ಲೇಬಲ್ ಇಲ್ಲದ ಬ್ರಾಂಡೆಡ್ ಉತ್ಪನ್ನಗಳ ಬಳಕೆಯಂತಹ ಲೋಪದೋಷಗಳು ಪತ್ತೆಯಾಗಿವೆ.
ಈ ಹಿನ್ನೆಲೆ ಸಂಬಂಧಪಟ್ಟ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಕಾನೂನು ಕ್ರಮಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 35 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. ಇದರಲ್ಲಿ ಟೀ ಪುಡಿ, ಕೋಳಿ ಮಾಂಸ, ಮಟನ್, ಮೀನು, ಹಾಲು, ಅಡುಗೆ ಎಣ್ಣೆ, ಮೆಣಸಿನ ಪುಡಿ, ಅರಿಶಿನ ಪುಡಿ, ಟೊಮೆಟೊ ಸಾಸ್, ನಿಂಬೆ ರಸ, ಚೀಸ್, ಹಪ್ಪಳ, ಗೋಡಂಬಿ, ಶುಂಠಿ, ಮೆಣಸಿನ ಪುಡಿ, ಮಸಾಲೆ ಪುಡಿಗಳು ಸೇರಿವೆ.
ಎಲ್ಲಿ ಎಷ್ಟು ಜಪ್ತಿ:
* ಲಲಿತ್ ಅಶೋಕ್ (ಅನೆಕ್ಸ್ ಸೌತ್): 76 ಕೆಜಿ ಮಾಂಸ, 200 ಕೆಜಿ ತರಕಾರಿಗಳು ಹಾಗೂ 32 ಲೀಟರ್ ಅವಧಿ ಮೀರಿದ ಹಾಲನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ.
* ಶಾಂಗ್ರಿ-ಲಾ: 15 ಕೆಜಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
* ಫೋರ್ ಸೀಸನ್ಸ್ ಹೋಟೆಲ್: 19 ಕೆಜಿ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.
* ವಿವಾಂತ ಬೆಂಗಳೂರು (ವೈಟ್‌ಫೀಲ್ಡ್): 3 ಕೆಜಿ ಅವಧಿ ಮೀರಿದ ಬೇಕರಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
* ತಾಜ್ ಯಶವಂತಪುರ: 72 ಕೆಜಿ ಮಾಂಸ/ ಮೀನನ್ನು ವಶಕ್ಕೆ ಪಡೆಯಲಾಗಿದೆ.
* ರಾಡಿಸನ್ ಬ್ಲೂ (ದಿ ಆಟ್ರಿಯಾ): 50 ಕೆಜಿ ಕೋಳಿ, 25 ಕೆಜಿ ಮಾಂಸ, 23 ಕೆಜಿ ಮೀನು ಹಾಗೂ 7 ಕೆಜಿ ತರಕಾರಿ ಒಳಗೊಂಡಂತೆ, 105 ಕೆಜಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.