ಸಂತ ಫಿಲೋಮಿನಾ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ
St Philomena College: ಸಂತ ಫಿಲೋಮಿನಾ ಕಾಲೇಜಿನಲ್ಲಿ ರಜತ ಮಹೋತ್ಸವ ಸಭಾಂಗಣದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.
ಪುತ್ತೂರು: ನಾಯಕತ್ವದ ಮೊದಲ ಕರ್ತವ್ಯವೆಂದರೆ, ತನ್ನನ್ನು ತಾನು ಪ್ರಭಾವಿಸಿಕೊಳ್ಳುವುದಾಗಿದೆ. ಆ ಬಳಿಕ ಇತರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅದೇ ವೇಳೆ ಇತರರಿಂದ ಪ್ರಭಾವಿತರಾಗಲು ಸಹ ನಾಯಕ ಸಿದ್ಧನಿರಬೇಕು. ಒಬ್ಬ ಉತ್ತಮ ನಾಯಕನು ಉತ್ತಮ ಅನುಯಾಯಿಯೂ ಆಗಿರುತ್ತಾನೆ ಎಂದು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಹೆಚ್.ಮಾಧವ ಭಟ್ ಹೇಳಿದರು.
ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಈಚೆಗೆ ನಡೆದ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಯಕನಿಗೆ ಯಾವುದು ಸರಿ ಎಂಬುದರ ಅರಿವಿರಬೇಕು. ನಾಯಕರು ಸಮನ್ವಯತೆ ಹಾಗೂ ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕ್ರಾಂತಿಯನ್ನು ತರಲು ಪ್ರಯತ್ನಿಸುವ ಬದಲು, ವಿಕಾಸ ಮತ್ತು ಸತತ ಬೆಳವಣಿಗೆಯನ್ನು ನಂಬಬೇಕು. ಜೀವನವು ಸಣ್ಣ-ಸಣ್ಣ ಸಂಗತಿಗಳಿಂದ ರೂಪುಗೊಂಡಿದ್ದು, ಸಾವಿರ ಮೈಲುಗಳ ಸುದೀರ್ಘ ಪ್ರಯಾಣವು ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು, ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಅಧ್ಯಕ್ಷೀಯ ನುಡಿಗಳನ್ನಾಡಿದರು.

ಇಂದಿನ ದಿನಗಳಲ್ಲಿ ಸಂಬಂಧಗಳು & ಪರಸ್ಪರ ಸಂವಹನಗಳು ಷರತ್ತುಗಳು, ಆಕರ್ಷಣೆ ಮತ್ತು ಅಗತ್ಯಗಳನ್ನು ಆಧರಿಸುತ್ತಿವೆ. ನಾಯಕರು ತಮ್ಮ ಅನುಯಾಯಿಗಳೊಂದಿಗಿನ ಸಂವಹನ ನಡೆಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ವಾರ್ಥಿಗಳಾಗಿದ್ದರೆ ಎಂದಿಗೂ ಉತ್ತಮ ನಾಯಕರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ರೋಷನ್ ಲಾಸ್ರದೋ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳು, ವಾಣಿಜ್ಯ ಆಡಳಿತ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಡಾ.ರಾಧಾಕೃಷ್ಣ ಗೌಡ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ಪರ್ಲ್ ಫಿಯೋನಾ ಪಿರೇರಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಕಡಬ ಮತ್ತು ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೇಜಸ್ವಿ ಭಟ್ ಉಪಸ್ಥಿತಿಯಲ್ಲಿ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೃತೀಯ ಬಿಕಾಂ ವಿದ್ಯಾರ್ಥಿ ಜಯಕೃಷ್ಣ ಇ ಅವರು ಉದ್ಘಾಟಕರನ್ನು ಪರಿಚಯಿಸಿದರು. ಲಲಿತ ಕಲಾ ಸಂಘದ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ತೃತೀಯ ಬಿಬಿಎ. ವಿದ್ಯಾರ್ಥಿ ಲಿಖಿತ್ ಜೆ.ಡಿ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ನಿಶ್ಮಿತಾ ರೈ ವಂದಿಸಿದರು. ತೃತೀಯ ಬಿಬಿಎ ವಿದ್ಯಾರ್ಥಿನಿ ಪ್ರಿಯಾ ಎಂ.ಕೆ ನಿರೂಪಿಸಿದರು.