Alvas Medical College: ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ
Alvas Medical College: ಆಳ್ವಾಸ್ ಮೆಡಿಕಲ್ ಕಾಲೇಜು ಸೋಮವಾರ ಮಿಜಾರಿನ ಶೋಭಾ ಮೋಹನ ಆಳ್ವ ಆವರಣದಲ್ಲಿ ಲೋಕಾರ್ಪಣೆಗೊಂಡಿತು.
ಮೂಡುಬಿದಿರೆ: ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಮಹತ್ವಾಕಾಂಕ್ಷಿ ಹೆಜ್ಜೆಯಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಸೋಮವಾರ ಮಿಜಾರಿನ ಶೋಭಾ ಮೋಹನ ಆಳ್ವ ಆವರಣದಲ್ಲಿ ಲೋಕಾರ್ಪಣೆಗೊಂಡಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರು, ಕಾಲೇಜಿನ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 'ಆಳ್ವಾಸ್ ಪರಿಗಣಿತ ವಿಶ್ವವಿದ್ಯಾಲಯದ ಮಾನ್ಯತೆ ಇನ್ನೊಂದು ತಿಂಗಳಲ್ಲಿ ಸಿಗಲಿದೆ' ಎಂದು ಭರವಸೆ ನೀಡಿದರು.

'ನಮ್ಮ ಮುಂಬೈ ಕರ್ನಾಟಕದ ಜನ ದೇವರ ದರ್ಶನಕ್ಕೆ ಧರ್ಮಸ್ಥಳಕ್ಕೆ ಹೋಗುತ್ತಾರೆ. ಹಾಗೆಯೇ ಶಿಕ್ಷಣಕ್ಕಾಗಿ ಮೂಡುಬಿದಿರೆಯ ಆಳ್ವಾಸ್‌ಗೆ ಬರುತ್ತಾರೆ. ಮೋಹನ ಆಳ್ವರೇ ನಿಮಗೆ ದೇವರ ಆಶೀರ್ವಾದವಿದೆ' ಎಂದು ಸಂತಸ ವ್ಯಕ್ತಪಡಿಸಿದರು.
'ನೂರು ಕೈಯಿಂದ ಗಳಿಸಿ, ಸಾವಿರ ಕೈಗಳಿಂದ ಕೊಡುಬೇಕು' ಎಂಬುದನ್ನು ನಮ್ಮ ಸಂಸ್ಕೃತಿ ಹೇಳುತ್ತದೆ. ಅದಕ್ಕೆ ನಿದರ್ಶನ ಆಳ್ವರು. ಅಶಕ್ತರಿಗೆ ಕೊಡುವ ಸಂಸ್ಥೆ ಆಳ್ವಾಸ್ ಎಂದು ಬಣ್ಣಿಸಿದರು.
‘ಜಗತ್ತು ವೃದ್ಧ ಆಗುತ್ತಿದೆ. ಆದರೆ, ಭಾರತ ಯುವಜನರ ದೇಶವಾಗಿದ್ದು, ವೈದ್ಯ ಹಾಗೂ ಶುಶ್ರೂಷಕರ ಮೇಲೆ ವಿಶ್ವಾಸ ಹೆಚ್ಚುತ್ತಿದೆ. ದಕ್ಷಿಣ ಕನ್ನಡವು ಜಗತ್ತಿನ ವೈದ್ಯಕೀಯ ಕೇಂದ್ರ ಆಗಲಿ' ಎಂದು ಹೇಳಿದರು

ವೈದ್ಯಕೀಯ ಸಂಶೋಧನೆಯಲ್ಲಿ ಮಾನವೀಯತೆ ಅವಶ್ಯಕವಾಗದ್ದು, ಕೌಶಲ ಹಾಗೂ ಧೈರ್ಯ ವಿದ್ಯಾರ್ಥಿಗಳಿಗೆ ಬೇಕು. ಅಂತಹ ಸೇವಾ ಸಂಕಲ್ಪ ಭಾರತದಲ್ಲಿದೆ ಎಂದು ವಿವರಿಸಿದರು.
ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿರುವುದು ಇದಕ್ಕೊಂದು ನಿದರ್ಶನ ಎಂದರು.
ಭಾರತವು ಇಂದು 863 ಬಿಲಿಯನ್ ಡಾಲರ್ ರಫ್ತು ಮಾಡುತ್ತಿದೆ. 300 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುತ್ತಿದೆ. ದೇಶದ ಆರ್ಥಿಕ ಸಾಧನೆ ಕಂಡು ಹಲವು ರಾಷ್ಟ್ರಗಳು, ನಮ್ಮ ಜೊತೆ ಮುಕ್ತ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದು ಹೇಳಿದರು.

ಶೇ.98 ರಷ್ಟು ಮೊಬೈಲ್ ಉತ್ಪಾದನೆಯನ್ನು ಭಾರತವೇ ಮಾಡುತ್ತಿದೆ. ಮುಂದಿನ 6ಜಿ ತಂತ್ರಜ್ಞಾನವನ್ನು ಭಾರತ ನೀಡಲಿದೆ ಎಂದು ಭವಿಷ್ಯ ನುಡಿದರು.
ಭಾರತದಲ್ಲಿ ಪ್ರಸ್ತುತ 1.4ಲಕ್ಷ ವೈದ್ಯಕೀಯ ಸೀಟುಗಳಿವೆ. 1.03 ಲಕ್ಷ ಪೇಟೆಂಟ್, 2.3 ಲಕ್ಷ ಸ್ಟಾರ್ಟ್ಅಪ್‌ಗಳು ಸೇರಿದಂತೆ ಭಾರತದ ಶೈಕ್ಷಣಿಕ ಸಾಧನೆ ಜಾಗತಿಕ ಗಮನ ಸೆಳೆಯುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಟಾರ್ಟ್ಅಪ್‌ಗಳು ರಾಜ್ಯ ಹಾಗೂ ದಕ್ಷಿಣ ಕನ್ನಡದಿಂದ ಬರಲಿ ಎಂದು ಆಶಿಸಿದರು.

ಆರೋಗ್ಯ- ಅಧ್ಯಾತ್ಮಿಕ ಗುಣಮುಖ ರಾಜಧಾನಿ ದಕ್ಷಿಣ ಕನ್ನಡ: ಚೌಟ
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಆಳ್ವಾಸ್ ಮೆಡಿಕಲ್ ಕಾಲೇಜು ಮೂಲಕ ಶಿಕ್ಷಣ ಪ್ರೇಮಿಗಳ ಬೇಡಿಕೆ, ಆಳ್ವರ ಕನಸು, ಜನರ ಅಪೇಕ್ಷೆ ಈಡೇರಿದೆ. ಆಳ್ವರ ಸಾಧನೆಗೆ ಅವರೇ ಸಾಟಿ ಎಂದರು.
ಆರ್ಥಿಕವಾಗಿ ಕೈಗೆಟಕುವ, ಗುಣಮಟ್ಟದ, ಸುಲಭವಾಗಿ ದೊರೆಯುವ ಆರೋಗ್ಯ ಸೇವೆ ನಮ್ಮದಾಗಬೇಕು ಎಂಬುದು ಕೇಂದ್ರ ಸರ್ಕಾರದ ಕನಸು. ಕೇಂದ್ರದ ಈ ನೀತಿಯ ಕಾರಣ ಇಂದು ವೇಗವಾಗಿ ಆರೋಗ್ಯ ಕ್ಷೇತ್ರ ಅಭಿವೃದ್ಧಿ ಕಾಣುತ್ತಿದೆ ಎಂದ ಅವರು, ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸಿ ಎಂದು ವಿನಂತಿಸಿದರು.
ಆರೋಗ್ಯ ಮತ್ತು ಅಧ್ಯಾತ್ಮಿಕ ಗುಣಮುಖ ರಾಜಧಾನಿ ದಕ್ಷಿಣ ಕನ್ನಡ ಆಗಲಿ. ಆರೋಗ್ಯ ದೇವಾಲಯ ಹೆಚ್ಚಾಗಲಿ. ವೈದ್ಯಕೀಯ ಪ್ರವಾಸಿತಾಣವಾಗಲಿ ಎಂದ ಅವರು, ಆಳ್ವಾಸ್ ಪರಿಗಣಿತ ವಿಶ್ವವಿದ್ಯಾನಿಲಯ ಬೇಗನೇ ನನಸಾಗಲಿ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್.ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಣದ ಜೊತೆ ಸಂಸ್ಕಾರ ಅವಶ್ಯವಾಗಿದೆ. ಇದಕ್ಕೆ ಅತ್ಯುತ್ತಮ ಸಂಸ್ಥೆ ಆಳ್ವಾಸ್ ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ ಮಾತನಾಡಿ, 'ಆಳ್ವಾಸ್ ನಮ್ಮ ವಿವಿಯ ಭಾಗವಾಗಿರುವುದು ನಮ್ಮೆಲ್ಲರ ಹೆಮ್ಮೆ. ಶಿಕ್ಷಣ ಮೆದುಳಿನೊಂದಿಗೆ, ಹೃದಯಕ್ಕೂ ಸಿಗಬೇಕು ಎಂಬ ಸಾಕ್ರೆಟಿಸ್ ಮಾತಿಗೆ ಡಾ.ಎಂ ಮೋಹನ ಆಳ್ವರ ಮಾದರಿ ಅತ್ಯುತ್ತಮ ನಿದರ್ಶನ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಆಳ್ವಾಸ್ ಮೆಡಿಕಲ್ ಕಾಲೇಜು ನಿರ್ಮಾಣದ ಹಿಂದೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ವೈದ್ಯರನ್ನು ಗೌರವಿಸುವ ಉದ್ದೇಶದಿಂದ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಟಿಎಂಎ ಪೈ, ಡಾ.ಎಸ್.ಕಾಂತ, ಡಾ.ಶಂಕರ್ ನಾಯಕ್, ಡಾ.ವಿ.ಎಸ್.ಆಚಾರ್ಯ, ಡಾ.ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ.ಚಂದ್ರಶೇಖರ್ ಶೆಟ್ಟಿ, ಡಾ.ಸುಧಾಕರ್ ಶೆಟ್ಟಿ, ಡಾ.ವಿ.ಎಸ್.ಕಾಮತ್, ಡಾ.ಮನೋರಮಾ, ಡಾ.ಕೃಷ್ಣಮೂರ್ತಿ ಹಾಗೂ ಡಾ.ಅಮರನಾಥ ಹೆಗ್ಡೆ ಅವರುಗಳ ಹೆಸರನ್ನು ಇಡಲಾಗಿದೆ ಎಂದು ಮೋಹನ ಆಳ್ವ ಹೇಳಿದರು.

ಮೂಡುಬಿದಿರೆ ಶಾಸಕ ಉಮಾನಾಥ ಎ ಕೋಟ್ಯಾನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಮೊದಲ ಕುಲಪತಿ ಡಾ.ಎಸ್.ಕಾಂತಾ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ರಾಂತ ಕುಲಪತಿ ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಮಾಹೆ ಕುಲಾಧಿಪತಿ ಡಾ.ಹೆಚ್.ಎಸ್.ಬಲ್ಲಾಳ್, ವಿಶ್ರಾಂತ ಕುಲಪತಿ ಡಾ. ರಮಾನಂದ ಶೆಟ್ಟಿ, ವಿಶ್ರಾಂತ ಕುಲಪತಿ ಡಾ.ಎಸ್.ಸಚ್ಚಿದಾನಂದ, ವಿಶ್ರಾಂತ ಕುಲಪತಿ ಡಾ.ಜಯಕರ್ ಶೆಟ್ಟಿ, ಮಂಗಳೂರು ವಿ.ವಿ ಕುಲಪತಿ ಡಾ.ಪಿ.ಎಲ್.ಧರ್ಮ, ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಕುಲಾಧಿಪತಿ, ವಿಶಾಲ್ ಹೆಗ್ಡೆ, ಕರ್ನಾಟಕ ಅದಾನಿ ಸಮೂಹ ಕಾರ್ಯನಿರ್ವಾಹಕ ನಿರ್ದೇಶಕ & ಅಧ್ಯಕ್ಷ ಕಿಶೋರ್ ಆಳ್ವ, ಮಂಗಳೂರು ಧರ್ಮಪ್ರಾಂತ್ಯ ಧರ್ಮಗುರು ರೆ.ಫಾ.ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, , ಡಾ. ಎಂ.ಎಸ್. ಆಳ್ವ, ರಾಮಚಂದ್ರ ಶೆಟ್ಟಿ, ಕೊಡ್ಡಣ್‌ಗುತ್ತು, ಶ್ರೀನಿವಾಸ ಆಳ್ವ, ಶ್ರೀಪತಿ ಭಟ್, ಕುಲದೀಪ ಎಂ, ಭಾರತ್ ಸೌಟ್ಸ್ ಮತ್ತು ಗೈಡ್ಸ್ ಆಯುಕ್ತ ಡಾ.ಪಿಜಿಆರ್ ಸಿಂಧ್ಯಾ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಡಾ. ಶಾಂತಾರಾಮ್ ಶೆಟ್ಟಿ,ಡಾ. ಕಿರಣ್ ಕೆ.ವಿ. ಆಚಾರ್ಯ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಡಾ.ವಿನಯ್ ಆಳ್ವ, ಗ್ರೀಷ್ಮಾ ವಿವೇಕ್ ಆಳ್ವ, ಹನ್ನಾ ವಿನಯ್ ಆಳ್ವ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.