Vande Bharat Express: ಆ.18 ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾಯೋಗಿಕ ಸಂಚಾರ

Vande Bharat Express: ಆ.18 ರಿಂದ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾಯೋಗಿಕ ಸಂಚಾರ ನಡೆಸಲಿದೆ.

Aug 8, 2026 - 17:19
Vande Bharat Express: ಆ.18 ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾಯೋಗಿಕ ಸಂಚಾರ

ಮಂಗಳೂರು: ಕರಾವಳಿ ಭಾಗದ ಜನರ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಅತಿ ಶೀಘ್ರದಲ್ಲಿ ಬೆಂಗಳೂರು - ಮಂಗಳೂರು ಮಾರ್ಗದಲ್ಲಿ 20 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಕಾರ್ಯಾಚರಣೆ ನಡೆಸಲಿದೆ.

ಇತ್ತೀಚೆಗೆ ಈ ರೈಲನ್ನು ಮೈಸೂರು ವಿಭಾಗಕ್ಕೆ ಹಸ್ತಾಂತರಿಸಲಾಗಿದ್ದು, ಆಗಸ್ಟ್ 18 ರಿಂದ 22 ರವರೆಗೆ ಪ್ರಾಯೋಗಿಕ ಸಂಚಾರ ನಡೆಸಲಿದೆ. 

ನೂತನ ರೈಲು ಘಾಟ್ ಪ್ರದೇಶದಲ್ಲಿ ಓಡಾಟ ನಡೆಸಲಿದೆ. ಸುರಕ್ಷತೆಗಾಗಿ ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ) ಸಿಸ್ಟಮ್ ಅಳವಡಿಕೆ ಮಾಡಲಾಗಿದ್ದು, ಇದು ಕರ್ನಾಟಕದಲ್ಲೇ ಮೊದಲ ಬಾರಿಯಾಗಿದೆ.

ಪ್ರಾಯೋಗಿಕ ಕಾರ್ಯಾಚರಣೆಯ ಆಧಾರದ ಮೇಲೆ, ಉಭಯ ನಗರಗಳ ಮಧ್ಯೆ 'ವಂದೇ ಭಾರತ್' ರೈಲನ್ನು ಯಾವಾಗ ಪರಿಚಯಿಸಬೇಕೆಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸಕಲೇಶಪುರ - ಸುಬ್ರಹ್ಮಣ್ಯ ಮಾರ್ಗವು ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ, ಈ ಹಳಿಗಳಲ್ಲಿ  57 ಸುರಂಗಗಳು, 226 ಸೇತುವೆಗಳು ಹಾಗೂ 108 ತಿರುವುಗಳಿವೆ. ಈ ಪ್ರದೇಶವು ಭೂಕುಸಿತಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆಯಿದೆ. ಈಚೆಗೆ ಅದು ಜರುಗಿತ್ತು.

ಸದ್ಯ, ಮಂಗಳೂರು - ಮಡಗಾಂವ್ ನಡುವೆ ಕಾರ್ಯಾಚರಿಸುವ 'ವಂದೇ ಭಾರತ್'ನ್ನೇ ಬೆಂಗಳೂರಿನವರೆಗೂ ವಿಸ್ತರಿಸಲು ರೈಲ್ವೆ ಇಲಾಖೆಯು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆ ಅನುಷ್ಠಾನಗೊಂಡರೆ, ಹೊಸ ರೈಲು ಬೆಳಗ್ಗೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ ಮಂಗಳೂರು ಹಾಗೂ ಸಂಜೆ ಮಡಗಾಂವ್‌ನ್ನು ತಲುಪಲಿದೆ. ಮಡಗಾಂವ್‌ನಿಂದ ಬೆಳಗ್ಗೆ ಸಂಚಾರ ಆರಂಭಿಸಿ, ಮಧ್ಯಾಹ್ನ ಮಂಗಳೂರು ಮತ್ತು ಸಂಜೆ ಬೆಂಗಳೂರಿಗೆ ಬರಲಿದೆ. ಇದಕ್ಕಾಗಿ ಎರಡು ಪ್ರತ್ಯೇಕ ರೇಕ್‌ಗಳನ್ನು ಉಪಯೋಗಿಸಲು ಆಲೋಚನೆ ನಡೆಸಲಾಗಿದೆ. 

'ವಂದೇ ಭಾರತ್' ಸಂಚಾರದಿಂದ ಬೆಂಗಳೂರು - ಮಂಗಳೂರು ನಡುವಿನ ಪ್ರಯಾಣದ ಸಮಯ 7 ಗಂಟೆಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಪ್ರಸ್ತುತವಿರುವ ಅತಿ ವೇಗದ ಎಕ್ಸ್‌ಪ್ರೆಸ್ ರೈಲಿಗಿಂತ 1 ಗಂಟೆ ಕಡಿಮೆಯಾಗಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷತೆಗಳೇನು:

ದೇಶದಲ್ಲಿ ಇದು ವೇಗದ ರೈಲು ಎಂದು ಖ್ಯಾತಿಗಳಿಸಿದೆ. ಈ ರೈಲುಗಳು ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ. ಆರಾಮದಾಯಕ ಸೀಟುಗಳು, ಸಂಪೂರ್ಣ ಹವಾ ನಿಯಂತ್ರಣ (ಎಸಿ) ಬೋಗಿಗಳು, ವೈಫೈ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ, ಜೈವಿಕ ಶೌಚಾಲಯವನ್ನು ಹೊಂದಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.