India Sweet House: 'ಸಂಭ್ರಮದ ರುಚಿ ಒಂದೇ' ಸಂಗೀತ ರೂಪಕ ಲೋಕಾರ್ಪಣೆ
India Sweet House: ಇಂಡಿಯಾ ಸ್ವೀಟ್ ಹೌಸ್ 'ಸಂಭ್ರಮದ ರುಚಿ ಒಂದೇ' ಎಂಬ ಬಹುಭಾಷಾ ಸಂಗೀತ ರೂಪಕವನ್ನು ಪ್ರಸ್ತುತಪಡಿಸಿದೆ.
ಬೆಂಗಳೂರು: ಭಾಷೆ ಹಲವು, ಸಂಸ್ಕೃತಿ ಹಲವು, ಸಂಭ್ರಮದ ರುಚಿ ಮಾತ್ರ ಒಂದೇ ಎಂಬ ಸಂದೇಶದೊಂದಿಗೆ, ಇಂಡಿಯಾ ಸ್ವೀಟ್ ಹೌಸ್ (India Sweet House) 'ಸಂಭ್ರಮದ ರುಚಿ ಒಂದೇ' ಎಂಬ ಬಹುಭಾಷಾ ಸಂಗೀತ ರೂಪಕವನ್ನು ಪ್ರಸ್ತುತಪಡಿಸಿದೆ. ಖ್ಯಾತ ಕಲಾವಿದ ಸಿಹಿ ಕಹಿ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಂಗೀತ ನಮನವು ಭಾರತದ ವೈವಿಧ್ಯಮಯ ಸಂಸ್ಕೃತಿ, ಹಬ್ಬಗಳ ಸಂಭ್ರಮ ಹಾಗೂ ಸಿಹಿ ಹಂಚಿಕೊಳ್ಳುವ ಸಂತೋಷವನ್ನು ಮನೋಜ್ಞವಾಗಿ ಕಟ್ಟಿಕೊಡುತ್ತದೆ.
ಸಂಗೀತ, ಸಾಹಿತ್ಯ, ಗಾಯನದ ಸಮ್ಮಿಲನ:
ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಅವರ ಸಂಗೀತ ಸಂಯೋಜನೆ, ಜನಪ್ರಿಯ ಗೀತರಚನೆಕಾರ ಕವಿರಾಜ್ ಅವರ ಸಾಹಿತ್ಯ ಮತ್ತು ನಕುಲ್ ಅಭ್ಯಂಕರ್, ಅಂಕಿತಾ ಕುಂಡು, ವಾರಿಜಾಶ್ರೀ, ಫಯಾಜ್ ಖಾನ್ ಮತ್ತು ದೀಪ್ತಿ ಭಟ್ ಅವರ ಗಾಯನ ಈ ಗೀತೆಯ ಪ್ರಮುಖ ಆಕರ್ಷಣೆಗಳಾಗಿವೆ. ಬಹುಭಾಷಾ ಸಾಹಿತ್ಯ, ಸುಮಧುರ ಸಂಗೀತ ಮತ್ತು ವರ್ಣರಂಜಿತ ದೃಶ್ಯಗಳ ಮೂಲಕ ಭಾರತದ ವಿವಿಧ ಭಾಷೆ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಅನಾವರಣಗೊಳಿಸಲಾಗಿದೆ.

ಕನ್ನಡ ಚಿತ್ರರಂಗದ ಹಿರಿಯ ನಟರ ಪ್ರಣಯರಾಜ ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ರವಿಶಂಕರ್ ಮತ್ತು ಹಿರಿಯ ನಟಿ ಸುಧಾರಾಣಿ ಸೇರಿದಂತೆ ಹಲವು ಗಣ್ಯರು ಈ ಸಂಗೀತ ರೂಪಕದಲ್ಲಿ ಕಾಣಿಸಿಕೊಂಡಿದ್ದಾರೆ. ಲೋಕೋಪಕಾರಿ ಹಾಗೂ ಪರಿಸರವಾದಿ ವಿದುಷಿ ರೇವತಿ ಕಾಮತ್ ಅವರ ಉಪಸ್ಥಿತಿಯೂ ವಿಶೇಷ ಮೆರುಗು ನೀಡಿದೆ.
ಸಿಹಿಯ ಮೂಲಕ ಒಂದಾಗುವ ಭಾರತ:
ಭಾಷೆ, ಪ್ರದೇಶ, ಧರ್ಮ ಹಾಗೂ ಸಮುದಾಯಗಳು ವಿಭಿನ್ನವಾಗಿದ್ದರೂ ಸಿಹಿ ಹಂಚಿಕೊಳ್ಳುವ ಸಂತೋಷ ಎಲ್ಲರನ್ನು ಒಂದಾಗಿಸುತ್ತದೆ ಎಂಬ ಸರಳ ಹಾಗೂ ಅರ್ಥಪೂರ್ಣ ಸಂದೇಶವನ್ನು ಈ ಗೀತೆ ಸಾರುತ್ತದೆ. ಹಬ್ಬಗಳು, ಮದುವೆಗಳು ಮತ್ತು ಜೀವನದ ವಿಶೇಷ ಸಂದರ್ಭಗಳಲ್ಲಿ ಭಾರತೀಯ ಸಿಹಿತಿಂಡಿಗಳು ಪ್ರೀತಿ, ಬಾಂಧವ್ಯ ಹಾಗೂ ಸಂಭ್ರಮದ ಸಂಕೇತವಾಗಿ ಹೇಗೆ ಗುರುತಿಸಿಕೊಂಡಿವೆ ಎಂಬುದನ್ನು ಸಂಗೀತದ ಮೂಲಕ ಬಿಂಬಿಸಲಾಗಿದೆ.
'ಒಂದು ಭಾರತ, ಹಲವು ಸಂಸ್ಕೃತಿಗಳು, ಸಂಭ್ರಮದ ಒಂದೇ ರುಚಿ' ಎಂಬ ಆಶಯದೊಂದಿಗೆ ಮೂಡಿಬಂದಿರುವ ಈ ಪ್ರಯತ್ನವು ಭಾರತದ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಅಡಗಿರುವ ಏಕತೆಯನ್ನು ಸಂಭ್ರಮಿಸುತ್ತದೆ. ಈ ಸಂಗೀತ ರೂಪಕವನ್ನು ಇಂಡಿಯಾ ಸ್ವೀಟ್ ಹೌಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.

60 ಮಳಿಗೆಗಳೊಂದಿಗೆ ವಿಸ್ತರಿಸುತ್ತಿರುವ ಸಂಸ್ಥೆ:
2021ರಲ್ಲಿ ಶ್ವೇತಾ ರಾಜಶೇಖರ್, ವಿಶ್ವನಾಥ್ ಮೂರ್ತಿ ಮತ್ತು ರಾಜೇಶ್ ಮೆಹ್ತಾ ಅವರಿಂದ ಸ್ಥಾಪನೆಯಾದ ಇಂಡಿಯಾ ಸ್ವೀಟ್ ಹೌಸ್, ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳು ಮತ್ತು ತಿಂಡಿಗಳ ಮೂಲಕ ದೇಶದ ಪಾಕಪರಂಪರೆಯನ್ನು ಪರಿಚಯಿಸುತ್ತಿದೆ. ಕರ್ನಾಟಕದಾದ್ಯಂತ 60 ಮಳಿಗೆಗಳನ್ನು ಹೊಂದಿರುವ ಸಂಸ್ಥೆಯು ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿಯೂ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ. ಭಾರತೀಯ ಸಿಹಿತಿಂಡಿಗಳನ್ನು ದೈನಂದಿನ ಬದುಕಿನ ಸಂತಸದ ಕ್ಷಣಗಳು ಹಾಗೂ ವಿಶೇಷ ಆಚರಣೆಗಳ ಅವಿಭಾಜ್ಯ ಅಂಗವನ್ನಾಗಿಸುವುದು ಸಂಸ್ಥೆಯ ಆಶಯವಾಗಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಸಿಹಿ ಕಹಿ ಚಂದ್ರು, ಹಿರಿಯ ನಟಿ ಸುಧಾರಾಣಿ, ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್, ಗೀತರಚನೆಕಾರ ಕವಿರಾಜ್, ಛಾಯಾಗ್ರಾಹಕ ಅದ್ವೈತ್ ಹಾಗೂ ಇಂಡಿಯಾ ಸ್ವೀಟ್ ಹೌಸ್ ನಿರ್ದೇಶಕರಾದ ವಿಶ್ವನಾಥ್ ಮೂರ್ತಿ, ಶ್ವೇತಾ ರಾಜಶೇಖರ್ ಮತ್ತು ರಾಜೇಶ್ ಮೆಹ್ತಾ ಉಪಸ್ಥಿತರಿದ್ದರು.