ಫ್ಲಿಪ್​ಕಾರ್ಟ್ ಗ್ರೂಪ್ CFO ಸ್ಥಾನ ಬಿಟ್ಟ ಶ್ರೀರಾಮ್ ವೆಂಕಟರಾಮ್

ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಫ್ಲಿಪ್​ಕಾರ್ಟ್ ಕಂಪನಿಯ ಗ್ರೂಪ್ ಸಿಎಫ್​ಒ ಶ್ರೀರಾಮ್ ವೆಂಕಟರಾಮ್ ಆ ಸ್ಥಾನ ತ್ಯಜಿಸಲಿದ್ದಾರೆ. 2015ರಿಂದಲೂ ಫ್ಲಿಪ್​ಕಾರ್ಟ್​ನಲ್ಲಿರುವ ಅವರು 2018ರಲ್ಲಿ ಗ್ರೂಪ್ ಸಿಎಫ್​ಒ ಆಗಿದ್ದರು. 2014ರಿಂದ ಫ್ಲಿಪ್​ಕಾರ್ಟ್​ನಲ್ಲಿರುವ ರವಿ ಅಯ್ಯರ್ ಅವರು ಗ್ರೂಪ್ ಸಿಎಫ್​ಒ ಆಗಲಿದ್ದಾರೆ.

Mar 20, 2026 - 18:39
ಫ್ಲಿಪ್​ಕಾರ್ಟ್ ಗ್ರೂಪ್ CFO ಸ್ಥಾನ ಬಿಟ್ಟ ಶ್ರೀರಾಮ್ ವೆಂಕಟರಾಮ್
Flipkart

ಅಮೆರಿಕದ ಎಂಎನ್​ಸಿ ಕಂಪನಿಯಾದ ವಾಲ್ಮಾರ್ಟ್​ನ ಒಡೆತನದ ಫ್ಲಿಪ್​ಕಾರ್ಟ್ ಸಂಸ್ಥೆಯ ಎಕ್ಸಿಕ್ಯೂಟಿವ್ ಸ್ಥಾನಪಲ್ಲಟವಾಗುತ್ತಿದೆ. ಫ್ಲಿಪ್​ಕಾರ್ಟ್ ಗ್ರೂಪ್ ಚೀಫ್ ಫೈನಾನ್ಷಿಯಲ್ ಆಫೀಸರ್ ಸ್ಥಾನದಿಂದ ಶ್ರೀರಾಮ್ ವೆಂಕಟರಾಮ್ ಕೆಳಗಿಳಿಯಲಿದ್ದಾರೆ. ಭಾರತದ ಅತಿದೊಡ್ಡ ಇಕಾಮರ್ಸ್ ಕಂಪನಿಗಳಲ್ಲಿ ಒಂದೆನಿಸಿರುವ ಫ್ಲಿಪ್​ಕಾರ್ಟ್ ಈ ಸಂಗತಿಯನ್ನು ಶುಕ್ರವಾರ ಪ್ರಕಟಿಸಿದೆ.

ಶ್ರೀರಾಮ್ ವೆಂಕಟರಾಮ್ ಅವರು 2015ರಲ್ಲಿ ಫ್ಲಿಪ್​ಕಾರ್ಟ್ ಸೇರಿದ್ದರು. ಹಲವು ಮುಂಚೂಣಿ ಹುದ್ದೆಗಳನ್ನು ನಿಭಾಯಿಸುತ್ತಾ ಹೋಗಿದ್ದ ಅವರು 2018ರಲ್ಲಿ ಗ್ರೂಪ್​ನ ಸಿಎಫ್​ಒ ಆಗಿ ಕಂಪನಿಯ ಹಣಕಾಸು ವಿಭಾಗದ ಚುಕ್ಕಾಣಿ ಹಿಡಿದು ಜವಾಬ್ದಾರಿ ನಿಭಾಯಿಸಿದ್ದರು.

ಫ್ಲಿಪ್​ಕಾರ್ಟ್​ನ ಮಾರ್ಕೆಟ್​ಪ್ಲೇಸ್ ವಿಭಾಗದ ಸಿಎಫ್​ಒ ಆಗಿರುವ ರವಿ ಅಯ್ಯರ್ ಅವರು ಗ್ರೂಪ್ ಸಿಎಫ್​ಒ ಆಗಿ ಶ್ರೀರಾಮ್ ವೆಂಕಟರಾಮ್ ಸ್ಥಾನವನ್ನು ತುಂಬಲಿದ್ದಾರೆ. ಅಯ್ಯರ್ ಅವರು 2014ರಿಂದಲೂ ಫ್ಲಿಪ್​ಕಾರ್ಟ್​ನಲ್ಲಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಇವರನ್ನು ಉನ್ನತ ಹುದ್ದೆಗೆ ಅಣಿಗೊಳಿಸುವ ಕೆಲಸ ಕಂಪನಿಯಲ್ಲಿ ನಡೆದಿದೆ. ಆ ನಿಟ್ಟಿನಲ್ಲಿ ಮಾರ್ಕೆಟ್​ಪ್ಲೇಸ್ ಬ್ಯುಸಿನೆಸ್​ನ ಸಿಎಫ್​ಒ ಆಗಿ ಅವರಿಗೆ ಬಡ್ತಿ ಕೊಡಲಾಗಿತ್ತು. ಗ್ರೂಪ್ ಸಿಎಫ್​ಒ ಆಗಲು ಬೇಕಾದ ಪ್ರತ್ಯಕ್ಷ ಅನುಭವ ಗಳಿಸಲು ಅವರಿಗೆ ಆ ಸ್ಥಾನ ಕೊಡಲಾಗಿದ್ದಿರಬಹುದು.

ಅದೇ ವೇಳೆ, ಶ್ರೀರಾಮ್ ವೆಂಕಟರಾಮ್ ಅವರೂ ಕೂಡ ಆರು ತಿಂಗಳಿಂದ ಕಂಪನಿಯ ಕಾರ್ಯಗಳಲ್ಲಿ ಮತ್ತು ನಿರ್ಧಾರಗಳಲ್ಲಿ ತೀರಾ ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಕಡಿಮೆಗೊಳಿಸಿದ್ದರು. ರವಿ ಅಯ್ಯರ್ ಅವರನ್ನು ಆ ಸ್ಥಾನಕ್ಕೆ ಅಣಿಗೊಳಿಸುವ ಪ್ರಯತ್ನ ಅದಾಗಿದ್ದಿರಬಹುದು.

ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಫ್ಲಿಪ್​ಕಾರ್ಟ್ ಭಾರತದ ಮುಖ್ಯ ಇಕಾಮರ್ಸ್ ಕಂಪನಿ. ಬನ್ಸಾಲ್ ಸಹೋದರರು ಸ್ಥಾಪಿಸಿದ ಕಂಪನಿ ಇದು. ಅಮೆರಿಕದ ರೀಟೇಲ್ ಮಾರಾಟ ಕಂಪನಿಯಾದ ವಾಲ್ಮಾರ್ಟ್ ಫ್ಲಿಪ್​ಕಾರ್ಟ್ ಅನ್ನು ಖರೀದಿಸಿತ್ತು. ಸದ್ಯ ಕಲ್ಯಾಣ್ ಕೃಷ್ಣಮೂರ್ತಿ ಅವರು ಗ್ರೂಪ್ ಸಿಇಒ ಆಗಿದ್ದಾರೆ. ಫ್ಲಿಪ್​ಕಾರ್ಟ್ ಈ ವರ್ಷ ಐಪಿಒ ಆಫರ್ ಮಾಡುತ್ತಿದ್ದು ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.