Siddaramaiah Announces Retirement: ಚುನಾವಣಾ ರಾಜಕೀಯ ನಿವೃತ್ತಿ ದೃಢಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

Siddaramaiah Retirement announced ತಮ್ಮ ಟ್ವಿಟರ್‌ ಖಾತೆಯಲ್ಲಿ ಭಾನುವಾರ(ಜು.26ರಂದು) ಮಧ್ಯಾಹ್ನ ಈ ಬಗ್ಗೆ ಘೋಷಣೆ ಮಾಡಿರುವ ಅವರು, ಚುನಾವಣೆಯಲ್ಲಿ ಇನ್ನುಮುಂದೆ ಯಾಕೆ ಸ್ಪರ್ಧಿಸುವುದಿಲ್ಲ ಎಂಬುದಕ್ಕೆ ಕಾರಣಗಳನ್ನು ಕೂಡ ಬಿಚ್ಚಿಟ್ಟಿದ್ದಾರೆ.

Jul 26, 2026 - 16:38
Jul 26, 2026 - 18:20
Siddaramaiah Announces Retirement: ಚುನಾವಣಾ ರಾಜಕೀಯ ನಿವೃತ್ತಿ ದೃಢಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಂಡ್ಯದ ಸಾರ್ವಜನಿಕ ಸಭೆಯಲ್ಲಿ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ಇಂದು ಈ ಬಗ್ಗೆ ಟ್ವೀಟ್‌ ಮಾಡುವ ಮೂಲಕ ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ಭಾನುವಾರ (ಜು.26ರಂದು) ಮಧ್ಯಾಹ್ನ ಈ ಬಗ್ಗೆ ಘೋಷಣೆ ಮಾಡಿರುವ ಅವರು, ಚುನಾವಣೆಯಲ್ಲಿ ಇನ್ಮುಂದೆ ಯಾಕೆ ಸ್ಪರ್ಧಿಸುವುದಿಲ್ಲ ಎಂಬುದಕ್ಕೆ ಕಾರಣಗಳನ್ನು ಕೂಡ ಬಿಚ್ಚಿಟ್ಟಿದ್ದಾರೆ.

ರಾಜಕೀಯ ಕ್ಷೇತ್ರ ಇಂದು ಕಲುಷಿತಗೊಂಡಿರುವುದರಿಂದ 2028 ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ. ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವರುಣ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಅಂದುಕೊಂಡಿದ್ದೇನೆ. ಹಿಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಕ್ಷೇತ್ರದ ಜನರೇ ನಮಗೆ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು.

ರಾಜಕೀಯ ಕಲುಷಿತಗೊಂಡಿದೆ; ನಾನು ಆತ್ಮಸಾಕ್ಷಿಗೆ ದ್ರೋಹ ಮಾಡಿಲ್ಲ..

ಆದರೆ, ಇಂದು ಅಂತಹ ಪರಿಸ್ಥಿತಿ ಇಲ್ಲ. ಈಗ ನನಗೆ 79 ವರ್ಷ. ನಮ್ಮ ಸರ್ಕಾರದ ಅವಧಿ ಇನ್ನು ಒಂದೂವರೆ ವರ್ಷ ಇದೆ. ಆಗ ನನಗೆ 81-82 ವರ್ಷವಾಗಿರುತ್ತದೆ. ಈಗಿನಂತೆ ಆರೋಗ್ಯವೂ ಸದೃಢವಾಗಿ ಇರುವುದಿಲ್ಲ. ಹಿಂದಿನಂತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. 2028 ವೇಳೆಗೆ ನನಗೆ 82 ವರ್ಷವಾಗಿರುತ್ತದೆ. ಆಗ ನನ್ನ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳುತ್ತದೆ. 1978ರಲ್ಲಿ ನಾನು ತಾಲೂಕು ಮಂಡಳಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ್ದೆ. ಸೋಲು-ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಆದರೆ ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದಿಲ್ಲ, ಆತ್ಮಸಾಕ್ಷಿಗೆ ದ್ರೋಹ ಬಗೆದಿಲ್ಲ ಎನ್ನುವ ಸಂತೃಪ್ತಿ ನನಗಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾವು ಜನರಿಗೆ ದುಡ್ಡುಕೊಡಬೇಕಾದ ಕಾಲ ಬಂದಿದೆ. ಇಂದು ರಾಜಕಾರಣ ಸಾಕಷ್ಟು ಕಲುಷಿತವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ್ಲವಿಲ್ಲದಂತಾಗಿದೆ. ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಐದು ದಶಕಗಳ ಕಾಲ ರಾಜ್ಯದ ಜನತೆ ನನ್ನನ್ನು ತಮ್ಮಲ್ಲೊಬ್ಬ ಎಂಬಂತೆ ಕಂಡಿದ್ದಾರೆ, ಪ್ರೀತಿಯಿಂದ ಸಲಹಿದ್ದಾರೆ. ಋಣಭಾರ ನನ್ನ ಮೇಲಿದೆ. ಹೀಗಾಗಿ ನನ್ನ ಮುಂದಿನ ಜೀವನ ಸಹ ಜನಸೇವೆಗೆ ಮುಡಿಪಾಗಿರುತ್ತದೆ  ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಈ ಹಿಂದಿನ ಅಂದರೆ, 2013ರ ಚುನಾವಣೆಯಲ್ಲಿಯೂ ಸಿದ್ದರಾಮಯ್ಯನವರು ಇದು ನನ್ನ ಕೊನೆಯ ಚುನಾವಣೆ ಅಂದಿದ್ದರು. ಆದರೆ, ನಂತರದಲ್ಲಿ ಅವರು ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಕೂಡ ಆಗಿದ್ದಾರೆ. ಆದರೆ, ಈಗ ಚುನಾವಣಾ ರಾಜಕೀಯ ನಿವೃತ್ತಿಗೆ ಪ್ರಮುಖವಾಗಿ ತಮ್ಮ ವಯಸ್ಸು ಹಾಗೂ ಆರೋಗ್ಯದ ಕಾರಣವನ್ನು ನೀಡಿರುವುದು ಗಮನಾರ್ಹ.