ಎಲ್‍ಟಿಜಿಸಿ ತೆರಿಗೆ ಕಡಿತ ಸಾಧ್ಯತೆ: ಮತ್ತೆ ವಾಪಾಸಾಗಲಿದ್ದಾರೆಯೇ ವಿದೇಶಿ ಹೂಡಿಕೆದಾರರು?

Possibility Of LTCG Tax Cut: ಎಲ್‍ಟಿಜಿಸಿ ತೆರಿಗೆ ಕಡಿತ ಸಾಧ್ಯತೆಯಿದ್ದು, ಮತ್ತೆ ವಿದೇಶಿ ಹೂಡಿಕೆದಾರರು ವಾಪಸ್ಸಾಗಬಹುದು.

Oct 26, 2026 - 20:16
Oct 26, 2026 - 20:16
ಎಲ್‍ಟಿಜಿಸಿ ತೆರಿಗೆ ಕಡಿತ ಸಾಧ್ಯತೆ: ಮತ್ತೆ ವಾಪಾಸಾಗಲಿದ್ದಾರೆಯೇ ವಿದೇಶಿ  ಹೂಡಿಕೆದಾರರು?

LTCG Tax Cut: ಕೊನೆಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಯ ದುಸ್ಥಿತಿ, ಹೂಡಿಕೆದಾರರ ಸಂಕಷ್ಟ ಅರಿತುಕೊಂಡಂತಿದೆ. ಮನಿಕಂಟ್ರೋಲ್ ಪ್ರಕಾರ, ಬಜೆಟ್‌ಗೆ ಪೂರ್ವವೆ ದೀರ್ಘಾವಧಿ ಬಂಡವಾಳ ಲಾಭದ ತೆರಿಗೆಯನ್ನು ಬದಲಾಸಿಸುವ ಸಾಧ್ಯತೆಯಿದೆ. ಇದು ನಿಜವಾದರೆ, ಷೇರು ಮಾರುಕಟ್ಟೆ ಸುಮಾರು ಶೇಕಡ 3 ರಿಂದ 4% ಮೇಲಕ್ಕೇರಬಹುದು ಅನ್ನುವ ಅಂದಾಜು ತಜ್ಞರದ್ದು.

 ಈ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ತೆರಿಗೆ ಕಡಿತದ ನಿರೀಕ್ಷೆ ಮಾರುಕಟ್ಟೆಯ ಚಲನವಲನದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ಹಣ ಹಿಂಪಡೆಯುತ್ತಿರುವ ಸಂದರ್ಭದಲ್ಲಿ, ತೆರಿಗೆ ನೀತಿಯಲ್ಲಿನ ಬದಲಾವಣೆ ಮಹತ್ವ ಪಡೆದುಕೊಂಡಿದೆ. ತೆರಿಗೆ ಹೊರೆ ಕಡಿಮೆಯಾದರೆ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರ ಆಕರ್ಷಣೆ ಹೆಚ್ಚಬಹುದು. ಇದರಿಂದ ವಿದೇಶಿ ಹೂಡಿಕೆದಾರರು ಮತ್ತೆ ಭಾರತದ ಮಾರುಕಟ್ಟೆಯತ್ತ ಮುಖ ಮಾಡಬಹುದು ಎಂಬ ನಿರೀಕ್ಷೆಯೂ ವ್ಯಕ್ತವಾಗಿದೆ.

2026ರ ಜನವರಿಯಿಂದ ಇದುವರೆಗೆ ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು ಸುಮಾರು ರೂ.3.1 ಲಕ್ಷ ಕೋಟಿ ಹಿಂಪಡೆದಿದ್ದಾರೆ ಎಂದು ಮನಿಕಂಟ್ರೋಲ್ ವರದಿ ತಿಳಿಸಿದೆ. 2025ರ ಇಡೀ ವರ್ಷದಲ್ಲಿ ಹಿಂಪಡೆಯಲಾಗಿದ್ದ ರೂ.1.7 ಲಕ್ಷ ಕೋಟಿ ಮೊತ್ತಕ್ಕಿಂತ ಇದು ಹೆಚ್ಚಾಗಿದೆ. ವಿದೇಶಿ ಹೂಡಿಕೆದಾರರ ನಿರಂತರ ನಿರ್ಗಮನವು ಮಾರುಕಟ್ಟೆಯ ಮೇಲೆ ಒತ್ತಡ ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ತೆರಿಗೆ ವ್ಯವಸ್ಥೆಯ ಮರುಪರಿಶೀಲನೆಗೆ ಒತ್ತು ನೀಡಲಾಗುತ್ತಿದೆ.

ಪ್ರಸ್ತುತ, ಅರ್ಹ ಷೇರು ಹೂಡಿಕೆಗಳಿಂದ ಒಂದು ಹಣಕಾಸು ವರ್ಷದಲ್ಲಿ ಗಳಿಸುವ ರೂ.1.25 ಲಕ್ಷಕ್ಕಿಂತ ಹೆಚ್ಚಿನ ದೀರ್ಘಾವಧಿ ಬಂಡವಾಳ ಲಾಭಕ್ಕೆ ಶೇಕಡ 12.5% ತೆರಿಗೆ ವಿಧಿಸಲಾಗುತ್ತಿದೆ. ಈ ತೆರಿಗೆ ದರವನ್ನು ಕಡಿತಗೊಳಿಸುವುದು, ವಿದೇಶಿ ಹೂಡಿಕೆದಾರರ ಲಾಭವನ್ನು ರೂಪಾಯಿ ಬದಲಿಗೆ ಡಾಲರ್ ಲೆಕ್ಕದಲ್ಲಿ ಪರಿಗಣಿಸುವುದು ಸೇರಿದಂತೆ ಕೆಲವು ಪ್ರಸ್ತಾವನೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಡಾಲರ್ ಎದುರು ರೂಪಾಯಿ ಪಾತಾಳಕ್ಕೆ ಕುಸಿಯುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಈ ಪ್ರಸ್ತಾಪ ಪರಿಗಣಿಸುತ್ತಿದೆ.

ತೆರಿಗೆ ಕಡಿತದ ನಿರೀಕ್ಷೆಯಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿ, ಮಾರುಕಟ್ಟೆಗೆ  ವಿದೇಶದಿಂದ ಹೊಸ ಹಣ ಹರಿದುಬರುವ ಸಾಧ್ಯತೆಯಿದೆ. ತೆರಿಗೆ ನೀತಿಯಲ್ಲಿ ಹೂಡಿಕೆದಾರರಿಗೆ ಅನುಕೂಲಕರ ಬದಲಾವಣೆಗಳಾದರೆ ಷೇರು ಮಾರುಕಟ್ಟೆಯಲ್ಲಿ ಶೇಕಡ 3 ರಿಂದ ಶೇಕಡ 4% ಏರಿಕೆ ಕಾಣಬಹುದು ಎಂಬ ಅಂದಾಜು ಮಾರುಕಟ್ಟೆ ವಲಯದಲ್ಲಿ ವ್ಯಕ್ತವಾಗಿದೆ.

ಆದರೆ  ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ವಿದೇಶಿ ಹೂಡಿಕೆದಾರರ ನಿರ್ಧಾರಗಳು ತೆರಿಗೆ ನೀತಿಯೊಂದರ ಮೇಲೆಯೇ ಅವಲಂಬಿತವಾಗಿರುವುದಿಲ್ಲ. ಬದಲಿಗೆ ಈ ಬಾರಿ ದೇಶದ ಷೇರು ಮಾರುಕಟ್ಟೆಯ ಮೇಲಿನ ಒತ್ತಡ ಹೆಚ್ಚಿಸಿರುವುದು ಮಧ್ಯಪ್ರಾಚ್ಯ ಬಿಕ್ಕಟ್ಟು.

ಹೀಗಾಗಿ, ತೆರಿಗೆ ಕಡಿತದ ನಿರೀಕ್ಷೆ ಮಾರುಕಟ್ಟೆಗೆ ತಾತ್ಕಾಲಿಕ ಉತ್ತೇಜನ ನೀಡಬಹುದಾದರೂ, ವಿದೇಶಿ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಮರಳುವರೇ ಎಂಬುದು ಸರ್ಕಾರದ ಅಂತಿಮ ನಿರ್ಧಾರ ಮತ್ತು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಮೇಲೆ ಅವಲಂಬಿತವಾಗಿದೆ.

ಲೇಖಕರು: ಸುರಭಿ ಭಟ್ 
ಇಮೇಲ್: bhatsurabhi311@gmail.com

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.