ನ.22ಕ್ಕೆ ಜಪಾನ್‌ನಲ್ಲಿ ವಿಶ್ವ ಕನ್ನಡಿಗರ ಸಂಗಮ.. ಕನ್ನಡ ಬಳಗದ ಬೆಳ್ಳಿಹಬ್ಬ & ನಾವಿಕೋತ್ಸವ

Global Kannadigas Gathering In Japan: ನ.22ಕ್ಕೆ ಜಪಾನ್‌ನಲ್ಲಿ ವಿಶ್ವ ಕನ್ನಡಿಗರ ಸಂಗಮವಾಗಲಿದ್ದು, ಕನ್ನಡ ಬಳಗದ ಬೆಳ್ಳಿಹಬ್ಬ ಹಾಗೂ ನಾವಿಕೋತ್ಸವ ನಡೆಯಲಿದೆ.

Oct 12, 2026 - 12:23
Oct 12, 2026 - 12:24
ನ.22ಕ್ಕೆ ಜಪಾನ್‌ನಲ್ಲಿ ವಿಶ್ವ ಕನ್ನಡಿಗರ ಸಂಗಮ..  ಕನ್ನಡ ಬಳಗದ ಬೆಳ್ಳಿಹಬ್ಬ & ನಾವಿಕೋತ್ಸವ
ಡಾ.ಅನು ಭಟ್

ಟೋಕಿಯೋ: ಸೂರ್ಯ ಉದಯಿಸುವ ನಾಡು ಜಪಾನ್‌ನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕರ್ನಾಟಕದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ 'ಟೋಕಿಯೋ ಕನ್ನಡ ಬಳಗ' ತನ್ನ 25ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. 

ಈ ವಿಶೇಷ ಸಂದರ್ಭದಲ್ಲಿ ಉತ್ತರ ಅಮೆರಿಕ ವಿಶ್ವ ಕನ್ನಡಿಗರ ಒಕ್ಕೂಟವಾದ 'ನಾವಿಕ (NAVIKA – North America Vishva Kannada Association) ಹಾಗೂ ಟೋಕಿಯೋ ಕನ್ನಡ ಬಳಗದ ಸಹಯೋಗದಲ್ಲಿ ಇದೇ ನ.22 ರಂದು ಜಪಾನ್ ರಾಜಧಾನಿ ಟೋಕಿಯೋದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ನಾವಿಕೋತ್ಸವವನ್ನು ಜಂಟಿಯಾಗಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಕಾರ್ಯಕ್ರಮಕ್ಕೆ 150ಕ್ಕೂ ಹೆಚ್ಚು ಕನ್ನಡಿಗರು ಹಾಗೂ ಅತಿಥಿಗಳು ಆಗಮಿಸುವ ನಿರೀಕ್ಷೆಯಿದೆ. ವಿದೇಶಿ ನೆಲದಲ್ಲಿ ಕನ್ನಡದ ನುಡಿ, ಸಂಸ್ಕೃತಿ, ಸ್ನೇಹ ಮತ್ತು ಅಭಿಮಾನವನ್ನು ಸಂಭ್ರಮಿಸುವ ಈ ಉತ್ಸವವು ಜಾಗತಿಕ ಕನ್ನಡ ಸಮುದಾಯದ ಅಪರೂಪದ ಸಂಗಮವಾಗಲಿದೆ.

'ಕಿಝುನ' - ಗಡಿಮೀರಿದ ಬಾಂಧವ್ಯದ ಸಂಕೇತ

ನಾವಿಕವು ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಗ್ಗೂಡಿಸಿ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕರ್ನಾಟಕದ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಂಘಟನೆಯಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಅಮೆರಿಕದ ಹೊರಗೆ ನಾವಿಕೋತ್ಸವ ಆಯೋಜಿಸುವ ಪರಂಪರೆಯ ಭಾಗವಾಗಿ ಈ ಬಾರಿ ಟೋಕಿಯೋ ಕನ್ನಡ ಬಳಗದ ಬೆಳ್ಳಿಹಬ್ಬದೊಂದಿಗೆ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಲಾಗಿದೆ.

ಈ ಐತಿಹಾಸಿಕ ಕಾರ್ಯಕ್ರಮಕ್ಕೆ 'ಕಿಝುನ' (KIZUNA) ಎಂದು ಹೆಸರಿಡಲಾಗಿದೆ. ಜಪಾನಿ ಭಾಷೆಯಲ್ಲಿ ಕಿಝುನ ಎಂದರೆ ಬಾಂಧವ್ಯ, ಸಂಬಂಧ ಹಾಗೂ ಪರಸ್ಪರ ಬೆಸೆಯುವ ಆತ್ಮೀಯತೆಯ ಸಂಕೇತ. ದೇಶ, ಭಾಷೆ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ವಿಶ್ವದ ಕನ್ನಡಿಗರನ್ನು ಪ್ರೀತಿ, ಸ್ನೇಹ ಮತ್ತು ಸಾಂಸ್ಕೃತಿಕ ಅಭಿಮಾನದಿಂದ ಒಂದಾಗಿಸುವುದು ಈ ಹೆಸರಿನ ಆಶಯವಾಗಿದೆ.

ಟೋಕಿಯೋ ಕನ್ನಡ ಬಳಗದ ಇತಿಹಾಸದಲ್ಲಿ ನಾವಿಕದಂತಹ ಪ್ರತಿಷ್ಠಿತ ಕನ್ನಡ ಸಂಘಟನೆಯೊಂದಿಗೆ ಈ ಮಟ್ಟದ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. ಹೀಗಾಗಿ ಜಪಾನಿನ ಕನ್ನಡಿಗರು, ನಾವಿಕದ ಸದಸ್ಯರು ಹಾಗೂ ವಿವಿಧ ದೇಶಗಳಿಂದ ಆಗಮಿಸಲಿರುವ ಕನ್ನಡಿಗರಲ್ಲಿ ವಿಶೇಷ ಉತ್ಸಾಹ ಮನೆಮಾಡಿದೆ.

ವಿಶ್ವದ ಕನ್ನಡಿಗರಿಗೆ ನಾವಿಕ ಅಧ್ಯಕ್ಷೆ ಡಾ.ಅನು ಭಟ್ ಆಹ್ವಾನ:

ಕಾರ್ಯಕ್ರಮಕ್ಕೆ ವಿಶ್ವದ ಎಲ್ಲ ಕನ್ನಡಿಗರನ್ನು ಆಹ್ವಾನಿಸಿರುವ ನಾವಿಕ ಅಧ್ಯಕ್ಷೆ ಡಾ.ಅನು ಭಟ್ ಮಾತನಾಡಿ, 'ಟೋಕಿಯೋ ಕನ್ನಡ ಬಳಗದ 25ನೇ ವರ್ಷದ ಬೆಳ್ಳಿಹಬ್ಬದ ಸಂದರ್ಭದಲ್ಲಿ ನಾವಿಕೋತ್ಸವವನ್ನು ಜಂಟಿಯಾಗಿ ಆಚರಿಸುತ್ತಿರುವುದು ನಮಗೆ ಅಪಾರ ಸಂತೋಷ ಮತ್ತು ಹೆಮ್ಮೆಯ ವಿಷಯ. ವಿಶ್ವದ ಹಲವು ದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು 'ಕಿಝುನ' ಎಂಬ ಬಾಂಧವ್ಯದ ಸೇತುವೆಯಡಿ ಒಂದೇ ವೇದಿಕೆಗೆ ತರುತ್ತಿರುವುದು ವಿಶೇಷವಾಗಿದೆ.

'ನವೆಂಬರ್ 22ರಂದು ಟೋಕಿಯೋದಲ್ಲಿ ನಡೆಯಲಿರುವ ಈ ಜಾಗತಿಕ ಕನ್ನಡ ಹಬ್ಬದಲ್ಲಿ ಎಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಬೇಕು. ಕನ್ನಡದ ನುಡಿ, ಸಂಸ್ಕೃತಿ, ಸ್ನೇಹ ಹಾಗೂ ಹೆಮ್ಮೆಯನ್ನು ನಮ್ಮೊಂದಿಗೆ ಸಂಭ್ರಮಿಸಲು ವಿಶ್ವದ ಕನ್ನಡಿಗರೆಲ್ಲರನ್ನೂ ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ' ಎಂದು ತಿಳಿಸಿದ್ದಾರೆ.

ಗಣ್ಯರ ಉಪಸ್ಥಿತಿ, ಸಾಂಸ್ಕೃತಿಕ ವೈಭವ:

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯರ ವೇದಿಕೆಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಭಾಗವಹಿಸಲಿದ್ದಾರೆ. ಜನಪ್ರಿಯ ಹಿರಿಯ ನಟ ಡಾ ಶ್ರೀನಾಥ್ ಹಾಗೂ ಅವರ ಪತ್ನಿ ಗೀತಾ ಶ್ರೀನಾಥ್ ಅವರ ಉಪಸ್ಥಿತಿಯು ಸಮಾರಂಭಕ್ಕೆ ವಿಶೇಷ ಮೆರುಗು ನೀಡಲಿದೆ.

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ.ದಯಾನಂದ, ಐಎಎಸ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರು, ವಿದೇಶಗಳಲ್ಲಿ ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುನ್ನಡೆಸುತ್ತಿರುವ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜಾಗತಿಕ ಕನ್ನಡ ಸಮುದಾಯದ ಸದಸ್ಯರು ಈ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಲೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳ ಕುರಿತು ಚಿಂತನ-ಮಂಥನ:

ಈ ಉತ್ಸವವು ಕೇವಲ ಸಾಂಸ್ಕೃತಿಕ ಆಚರಣೆಗೆ ಸೀಮಿತವಾಗದೆ, ಜ್ಞಾನ ವಿನಿಮಯ, ಅನುಭವ ಹಂಚಿಕೆ ಮತ್ತು ವಿಚಾರ ವಿನಿಮಯಕ್ಕೂ ಮಹತ್ವ ನೀಡಲಿದೆ.

ಕಲೆ, ವಾಣಿಜ್ಯ, ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶೇಷ ಉಪನ್ಯಾಸಗಳು, ಚರ್ಚೆಗಳು ಹಾಗೂ ವಿಚಾರಗೋಷ್ಠಿಗಳು ನಡೆಯಲಿವೆ. ಜಗತ್ತಿನ ವಿವಿಧ ಭಾಗಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರು ತಮ್ಮ ವೃತ್ತಿಪರ ಅನುಭವಗಳು, ಯಶೋಗಾಥೆಗಳು ಮತ್ತು ಹೊಸ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಯುವ ಪೀಳಿಗೆಗೆ ಪ್ರೇರಣೆ ನೀಡುವ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗಿದ್ದು, ಕನ್ನಡಿಗರ ಪ್ರತಿಭೆ, ಸಾಧನೆ ಮತ್ತು ಜಾಗತಿಕ ಅವಕಾಶಗಳನ್ನು ಪರಿಚಯಿಸುವ ಪ್ರಯತ್ನ ನಡೆಯಲಿದೆ. ನೃತ್ಯ, ಸಂಗೀತ, ನಾಟಕ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಲಿವೆ.

ವಿದೇಶಿ ನೆಲದಲ್ಲಿ ಬೆಳೆಯುತ್ತಿರುವ ಕನ್ನಡದ ಮುಂದಿನ ಪೀಳಿಗೆಗೆ ಮಾತೃಭಾಷೆಯ ಮಹತ್ವವನ್ನು ಪರಿಚಯಿಸುವುದರ ಜೊತೆಗೆ, ಕರ್ನಾಟಕದ ಸಾಂಸ್ಕೃತಿಕ ಬೇರುಗಳೊಂದಿಗೆ ಅವರ ಸಂಬಂಧವನ್ನು ಗಟ್ಟಿಗೊಳಿಸುವುದೂ ಈ ಉತ್ಸವದ ಪ್ರಮುಖ ಆಶಯವಾಗಿದೆ.

ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಭರದ ಸಿದ್ಧತೆ:

ಕಾರ್ಯಕ್ರಮದ ಸಿದ್ಧತೆಗಳು ಈಗಾಗಲೇ ಉತ್ಸಾಹದಿಂದ ನಡೆಯುತ್ತಿವೆ ಎಂದು ಟೋಕಿಯೋ ಕನ್ನಡ ಬಳಗದ ಮೀಡಿಯಾ ಲೀಡ್ ಗಣೇಶ ಮೇಗೂರ್ ತಿಳಿಸಿದ್ದಾರೆ.

ಟೋಕಿಯೋ ಕನ್ನಡ ಬಳಗದ ಬೆಳ್ಳಿಹಬ್ಬದ ವರ್ಷದಲ್ಲೇ ನಾವಿಕದೊಂದಿಗೆ ಇಂತಹ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಮಗೆ ಅಪಾರ ಸಂತೋಷ ಮತ್ತು ಉತ್ಸಾಹ ತಂದಿದೆ. ಕಾರ್ಯಕ್ರಮದ ಪ್ರತಿಯೊಂದು ಅಂಶವೂ ಸ್ಮರಣೀಯವಾಗುವಂತೆ ನಮ್ಮ ತಂಡಗಳು ಹಲವು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ವಿಶ್ವದ ವಿವಿಧ ದೇಶಗಳಿಂದ ಆಗಮಿಸುವ ಕನ್ನಡಿಗರು ಮತ್ತು ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ನಾವು ಕಾತರರಾಗಿದ್ದೇವೆ. ನವೆಂಬರ್ 22ರಂದು ಟೋಕಿಯೋವನ್ನು ಜಾಗತಿಕ ಕನ್ನಡ ಸಂಭ್ರಮದ ಕೇಂದ್ರವನ್ನಾಗಿಸುವ ಗುರಿಯೊಂದಿಗೆ ಸಿದ್ಧತೆಗಳು ವೇಗವಾಗಿ ಸಾಗುತ್ತಿವೆ,” ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ಕನ್ನಡ ಬಾಂಧವ್ಯಕ್ಕೆ ಹೊಸ ಮೈಲಿಗಲ್ಲು:

ಟೋಕಿಯೋ ಕನ್ನಡ ಬಳಗದ 25 ವರ್ಷಗಳ ಪಯಣ ಮತ್ತು ನಾವಿಕದ ಜಾಗತಿಕ ಕನ್ನಡ ಸೇವೆಯನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಈ ಜಂಟಿ ಉತ್ಸವವು ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಾಧ್ಯತೆಯಿದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಜಾಗತಿಕ ಪ್ರಚಾರಕ್ಕೆ ಹೊಸ ಆಯಾಮ ನೀಡುವುದರ ಜೊತೆಗೆ, ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಸಾಧನೆ, ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಏಕತೆಯನ್ನು ಅನಾವರಣಗೊಳಿಸುವ ಮಹತ್ವದ ವೇದಿಕೆಯಾಗಿ ಈ ಕಾರ್ಯಕ್ರಮ ರೂಪುಗೊಳ್ಳಲಿದೆ.

'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ವಿಶ್ವದ ಮೂಲೆಮೂಲೆಗಳಿಗೆ ಸಾರುವ ಆಶಯದೊಂದಿಗೆ ನಡೆಯಲಿರುವ ಈ ಐತಿಹಾಸಿಕ ಕನ್ನಡ ರಾಜ್ಯೋತ್ಸವ, ಬೆಳ್ಳಿಹಬ್ಬ ಮತ್ತು ನಾವಿಕೋತ್ಸವಕ್ಕೆ ವಿಶ್ವದ ಎಲ್ಲ ಕನ್ನಡಿಗರಿಗೂ ಟೋಕಿಯೋ ಕನ್ನಡ ಬಳಗ ಹಾಗೂ ನಾವಿಕದ ವತಿಯಿಂದ ಹೃತ್ಪೂರ್ವಕ ಆಹ್ವಾನ ನೀಡಲಾಗಿದೆ.

ಹೆಚ್ಚಿನ ಮಾಹಿತಿ: ಟೋಕಿಯೋ ಕನ್ನಡ ಬಳಗ
Facebook: Tokyo Kannada Balaga 
Instagram: @tokyokannadabalaga
Website: https://www.navika.org

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.