ಭಯ, ಭಕ್ತಿಯಲ್ಲೇ ಸಿಎಂ ಡಿಕೆಶಿ ಕಾರ್ಯಭಾರ ಆರಂಭ
ಪ್ರಮಾಣವಚನ ಸ್ವೀಕರಿಸುವಾಗ ಸಮಸ್ತ ಜನತೆಗೆ, ವಿಧಾನಸೌಧದ ಮೆಟ್ಟಿಲಿಗೆ, ಸಿಎಂ ಕುರ್ಚಿಗೆ ನಮಿಸಿದ ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂನ್ 3: ಇಲ್ಲಿನ ಲೋಕಭವನದಲ್ಲಿ ಬುಧವಾರ ಸಂಜೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಅವರು ಭಯ, ಭಕ್ತಿಯಿಂದಲೇ ಕಾರ್ಯಭಾರ ಆರಂಭಿಸಿದ್ದು, ವಿಧಾನಸೌದದ ಮೆಟ್ಟಿಲಿಗೆ ನಮಿಸಿಯೇ ಆಡಳಿತ ಸೌಧ ಪ್ರವೇಶಿಸಿದರು. ಸಿಎಂ ಕುರ್ಚಿಗೂ ನಮಿಸಿ ಮೊದಲ ಕಡತಕ್ಕೆ ಸಹಿ ಹಾಕಿದರು.
ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧದ ಆವರಣಕ್ಕೆ ಬಂದ ನೂತನ ಸಿಎಂ ಶಿವಕುಮಾರ್, ಗಣ್ಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿಯೇ ಒಳಗೆ ಪ್ರವೇಶಿಸಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ, ವೀರ ಗಂಗಾಧರಯ್ಯ ಅಜ್ಜಯ್ಯನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನೆರೆದಿದ್ದ ಸಭಿಕರಿಗೆ ಅಡ್ಡಬಿದ್ದು ನಮಸ್ಕಾರ ಅರ್ಪಿಸಿದರು. ಅಭಿಮಾನಿಗಳ ಡಿ.ಕೆ, ಡಿ.ಕೆ ಉದ್ಘಾರವು ಲೋಕಭವನದ ಗಾಜಿನ ಮನೆಯಲ್ಲಿ ಮಾರ್ದನಿಸಿತು.
ಭೈರವ ಮಾಲೆ ಹಾಕಿದ ನಿರ್ಮಾಲಾನಂದನಾಥ ಸ್ವಾಮೀಜಿ
ಲೋಕಭವನಕ್ಕೆ ಪ್ರವೇಶ ಮಾಡಿದ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಧರ್ಮಗುರುಗಳ, ವಿವಿಧ ಮಠಗಳ ಸ್ವಾಮೀಜಿಗಳು ಆಸೀನರಾಗಿದ್ದ ಕಡೆ ತೆರಳಿ ಆಶೀರ್ವಾದ ಪಡೆದರು. ಆದಿ ಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ ಅವರು ಬೈರವ ಮಾಲೆಯನ್ನು ಹಾಕಿ ಅಭಿನಂದಿಸಿದರು. ಕನಕಪೀಠದ ಸ್ವಾಮೀಜಿ ನಿರಂಜನಾನಂದಪುರಿ ಕರಿ ಕಂಬಳಿ ಹೊದೆಸಿ ನಿಮ್ಮ ಹಾದಿ ಸುಗಮವಾಗಿರಲಿ ಎಂದು ಶುಭಕೋರಿದರು. ಇತರೇ ಸ್ವಾಮೀಜಿಗಳು ರುದ್ರಾಕ್ಷಿ ಸರ, ಕ್ರೈಸ್ತ ಧರ್ಮಗುರುಗಳು ಶಿಲುಬೆಯ ದಾರವನ್ನು ಕೊರಳಿಗೆ ಹಾಕಿ "ನಿಮ್ಮ ಆಡಳಿತ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿ ಇನ್ನೂ ಉತ್ತುಂಗಕ್ಕೆ ಏರಲಿ" ಎಂದು ಹಾರೈಸಿದರು. ಸಂತ ಸೇವಾಲಾಲ್ ಸ್ವಾಮೀಜಿ ಲಂಬಾಣಿ ಕುಸುರಿ ಕಲೆ ಹೊಂದಿರುವ ಶಲ್ಯವನ್ನು ನೀಡಿದರು. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಮಣ್ಯ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥರು ಸೇರಿದಂತೆ ಅನೇಕರು ಆಶೀರ್ವಾದ ಮಾಡಿದರು.
ಹಸ್ತಾಲಾಘವ ಮಾಡಲು ಮುಗಿಬಿದ್ದ ಅಭಿಮಾನಿಗಳು
ಸಭಾಂಗಣದ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೂತನ ಮುಖ್ಯಮಂತ್ರಿಗಳಿಗೆ ಹಸ್ತಾಲಾಘವ ಮಾಡಲು ಮುಗಿಬಿದ್ದರು. ಎಲ್ಲರಿಗೂ ನಗುಮುಖದಿಂದಲೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು ಪ್ರತಿಯೊಬ್ಬರಿಗೂ ಹಸ್ತಲಾಘವ ಮಾಡಿ ಹುರಿದುಂಬಿಸಿದರು.
ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯರು:
ಈ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ, ಕನಕಪೀಠದ ಸ್ವಾಮೀಜಿ ನಿರಂಜನಾನಂದಪುರಿ, ಸಂತ ಸೇವಾಲಾಲ್ ಸ್ವಾಮೀಜಿ, ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿ, ಅರ್ಚ್ ಬಿಷಪ್ ರೆವರೆಂಡ್ ಡಾ. ಪೀಟರ್ ಮಚಾಡೋ, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಭೋವಿ ಮಠದ ಹಿಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ದ್ವಾರಕನಾಥ ಗುರೂಜಿ, ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಸುಬ್ರಮಣ್ಯ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವಿನಯ್ ಗುರೂಜಿ ಹಾಗೂ ಶಿವಕುಮಾರ್ ಅವರ ಧರ್ಮಪತ್ನಿ ಉಷಾ ಶಿವಕುಮಾರ್, ಪುತ್ರಿ ಐಶ್ವರ್ಯ ಡಿಕೆಎಸ್ ಹೆಗಡೆ, ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್, ಸಿನಿಮಾ ತಾರೆ ಹಾಗೂ ಮಾಜಿ ಸಂಸದೆ ರ, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್, ರಮೇಶ್ ಅರವಿಂದ್ ಇತರರು ಇದ್ದರು.


