Dr.Sudha Yadav: ಕರ್ನಾಟಕಕ್ಕೆ ಎರಡನೇ ಮಹಿಳಾ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ನೇಮಕ.. ಫುಲ್ ಡೀಟೇಲ್ಸ್

Dr.Sudha Yadav: ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ನೇಮಕಗೊಂಡಿದ್ದಾರೆ.

Oct 12, 2026 - 22:32
Oct 12, 2026 - 22:32
Dr.Sudha Yadav: ಕರ್ನಾಟಕಕ್ಕೆ ಎರಡನೇ ಮಹಿಳಾ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ನೇಮಕ.. ಫುಲ್ ಡೀಟೇಲ್ಸ್

ಬೆಂಗಳೂರು: ಕರ್ನಾಟಕ ರಾಜಭವನಕ್ಕೆ ನೂತನ ಮುಖ್ಯಸ್ಥರ ನೇಮಕವಾಗಿದೆ. ಹಿರಿಯ ಬಿಜೆಪಿ ನಾಯಕಿ ಡಾ.ಸುಧಾ ಯಾದವ್ (Dr.Sudha Yadav) ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕ ಮಾಡಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು ಮಹತ್ವದ ಆದೇಶ ಹೊರಡಿಸಿದ್ದಾರೆ.  

ರಾಷ್ಟ್ರಪತಿ ಭವನದಿಂದ ಸಂಜೆ ಪ್ರಕಟವಾದ ಆದೇಶದ ಪ್ರಕಾರ, ದೇಶದ 6 ರಾಜ್ಯಗಳಿಗೆ ಏಕಕಾಲದಲ್ಲಿ ಹೊಸ ರಾಜ್ಯಪಾಲರನ್ನು ನೇಮಿಸಲಾಗಿದೆ. ಕರ್ನಾಟಕದೊಂದಿಗೆ ಕೇರಳ, ತಮಿಳುನಾಡು, ಒಡಿಶಾ ಉತ್ತರಾಖಂಡ ಮತ್ತು ಸಿಕ್ಕಿಂ ರಾಜ್ಯಗಳು ಸೇರಿವೆ.  

ಕರ್ನಾಟಕದ ಹಾಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ ಡಾ.ಸುಧಾ ಯಾದವ್ ಬರಲಿದ್ದು, ಅವರು ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲರು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ 1999 ರಿಂದ 2002 ರವರೆಗೆ ವಿ.ಎಸ್.ರಮಾದೇವಿ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.  

ಯಾರು ಈ ಸುಧಾ ಯಾದವ್?

ಮೂಲತಃ ಹರಿಯಾಣದ ರೇವಾರಿ ಜಿಲ್ಲೆಯ ಮೋಟ್ಲಾ ಕಲಾನ್ ಗ್ರಾಮದವರಾದ ಸುಧಾ ಯಾದವ್, 'ಯಾದವ' ಸಮುದಾಯದ ಒಬಿಸಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಬಿಜೆಪಿಯ ಅತ್ಯುನ್ನತ ನೀತಿ ನಿರೂಪಣಾ ಸಂಸ್ಥೆಗಳಾದ ಕೇಂದ್ರ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಅವರ ರಾಜಕೀಯ ಪ್ರವೇಶದ ಹಿಂದೆ ತ್ಯಾಗ ಮತ್ತು ದೇಶಸೇವೆಯ ಕಥೆಯಿದೆ. 1999ರ ಕಾರ್ಗಿಲ್ ಯುದ್ಧದಲ್ಲಿ ಗಡಿ ಭದ್ರತಾ ಪಡೆಯ ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಅವರ ಪತಿ ಸುಖ್ಬೀರ್ ಸಿಂಗ್ ಯಾದವ್ ಹುತಾತ್ಮರಾದರು. ನಂತರ ಅಂದಿನ ಬಿಜೆಪಿ ಉಸ್ತುವಾರಿಯಾಗಿದ್ದ ನರೇಂದ್ರ ಮೋದಿ ಅವರ ವಿಶೇಷ ಮನವಿಯ ಮೇರೆಗೆ ಅವರು ಸಾರ್ವಜನಿಕ ಜೀವನಕ್ಕೆ ಬಂದರು.  

1999ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಸಂಸದೆಯಾದರು. ಐಐಟಿ ರೂರ್ಕಿಯಿಂದ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ-ಪಿಎಚ್.ಡಿ ಪದವಿ ಪಡೆದಿರುವ ಅವರು, ಶಿಕ್ಷಣ ತಜ್ಞೆಯೂ ಹೌದು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇನ್ನು ಸಿಕ್ಕಿಂ ರಾಜ್ಯಪಾಲ ಓಂ ಪ್ರಕಾಶ್ ಮಾಥೂರ್ ಕೇರಳಕ್ಕೆ ವರ್ಗಾವಣೆಗೊಂಡಿದ್ದು, ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಅವರು ತಮಿಳುನಾಡಿನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.