ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಇಂದಿನಿಂದ 21 ರವರೆಗೆ ನವರಾತ್ರಿ ಆಚರಣೆ ಆರಂಭವಾಗಿದ್ದು, ಪ್ರತಿ ದಿನ ನವರಾತ್ರಿ ಹೋಮ, ದುರ್ಗಾಪೂಜೆ ಹಾಗೂ ಮಹಾ ರುದ್ರಯಾಗ ನಡೆಯಲಿದೆ.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಾನ್ನಿಧ್ಯದಲ್ಲಿ ಜರುಗಲಿರುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನವರಾತ್ರಿಯ 9 ದಿನಗಳ ಕಾಲ ದೇವಿಯ ವಿವಿಧ ರೂಪಗಳನ್ನು ಆರಾಧಿಸಲಾಗುತ್ತದೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತೆ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ರೂಪಗಳಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ.
ಸತ್ಯಸಾಯಿ ಹೃದಯ ಮಂದಿರದ ಆವರಣದಲ್ಲಿರುವ ಯಾಗಶಾಲೆಯಲ್ಲಿ ಅ.11 ರಿಂದ 21 ರವರೆಗೆ ಪ್ರತಿದಿನ ಬೆಳಗ್ಗೆ 7.30ಕ್ಕೆ ವಿವಿಧ ಹೋಮಗಳು ನಡೆಯಲಿವೆ. ಮೊದಲ ದಿನ ಸಹಸ್ರ ಮೋದಕ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಶನಿ ಶಾಂತಿ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗಲಿದ್ದು, ನಂತರದ ದಿನಗಳಲ್ಲಿ ದುರ್ಗಾ ಹೋಮ, ಧನ್ವಂತರಿ ಹೋಮ, ಲಲಿತಾ ಹೋಮ, ಮಹಾ ಸರಸ್ವತಿ ಹೋಮ, ಲಕ್ಷ್ಮೀನರಸಿಂಹ ಹೋಮ, ಶಿವ ಪಂಚಾಕ್ಷರಿ ಹೋಮ ಸೇರಿದಂತೆ ವಿವಿಧ ಹೋಮಗಳು ಜರುಗಲಿವೆ.
ಅ.20 ರಂದು ಚಂಡಿಕಾ ಹೋಮ ಹಾಗೂ ಅ.21 ರಂದು ಲಕ್ಷ್ಮೀನಾರಾಯಣ ಹೃದಯ ಹೋಮ, ಕುಬೇರ ಲಕ್ಷ್ಮೀ ಹೋಮ ಮತ್ತು ಮಹಾಪೂರ್ಣಾಹುತಿ ನಡೆಯಲಿದೆ.
ದುರ್ಗಾಪೂಜೆ ಪ್ರತಿದಿನ ಬೆಳಗ್ಗೆ 8.30 ರಿಂದ 11.30 ರವರೆಗೆ ಜರುಗಲಿದ್ದು, ಸಂಜೆ 7 ಗಂಟೆಗೆ ಸಂಧ್ಯಾ ಆರತಿ ಇರಲಿದೆ. ಇದೇ ವೇಳೆ ಪ್ರತಿದಿನ ಸಂಜೆ 4 ಗಂಟೆಗೆ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ಚಂಡಿಕಾ ಪಾರಾಯಣ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹಾಗೂ ಮಹಾಮಂಗಳಾರತಿ ನಡೆಯಲಿದೆ.
ನಾಲ್ಕು ದಿನ ಮಹಾ ರುದ್ರಯಾಗ:
ಅ.18 ರಿಂದ 21 ರವರೆಗೆ ನಾಲ್ಕು ದಿನಗಳ ಕಾಲ ಮಹಾ ರುದ್ರಯಾಗ ಜರುಗಲಿದೆ. ಬೆಳಗ್ಗೆ ಅರುಣ ಪಾರಾಯಣ, ಮಹಾನ್ಯಾಸ ಪಾರಾಯಣ, ಪಂಚಾಮೃತ ಅಭಿಷೇಕ, ರುದ್ರ ಪಾರಾಯಣ ಹಾಗೂ ರುದ್ರಾಭಿಷೇಕದ ಬಳಿಕ ರುದ್ರ ಹೋಮ, ಮೃತ್ಯುಂಜಯ ಹೋಮ ಮತ್ತು ಸಾಯಿ ಗಾಯತ್ರಿ ಹೋಮ ನಡೆಯಲಿವೆ.
ಸಂಜೆ ಕ್ರಮಾರ್ಚನೆ, ಘನಪಾಠ ಹಾಗೂ ಮಹಾಮಂಗಳಾರತಿಗೆ ವ್ಯವಸ್ಥೆ ಮಾಡಲಾಗಿದೆ. ಅ.21ರ ವಿಜಯದಶಮಿಯಂದು ಮಹಾಪೂರ್ಣಾಹುತಿ, ಅಗ್ನಿ ಸಂಯೋಜನೆ, ಕುಂಭಾಭಿಷೇಕ ಹಾಗೂ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ:
ನವರಾತ್ರಿ ಅಂಗವಾಗಿ ಪ್ರತಿದಿನ ಸಂಜೆ 5.30ಕ್ಕೆ ಸತ್ಯಸಾಯಿ ಗ್ರಾಮದಲ್ಲಿರುವ ಸಾಯಿ ಕೃಷ್ಣ ಪ್ರೇಮಾಮೃತಂ ಹಾಲ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬಂಗಾಳದ ಶೈಲಿಯಲ್ಲಿ ದುರ್ಗಾಪೂಜೆ:
ನವರಾತ್ರಿ ಆಚರಣೆಯ ಪ್ರಮುಖ ಆಕರ್ಷಣೆಯಾಗಿ ದುರ್ಗಾಪೂಜೆ ನಡೆಯಲಿದೆ. ಪಶ್ಚಿಮ ಬಂಗಾಳದ ಉತ್ತರ ಕೊಲ್ಕತ್ತಾದ ಕುಮಾರ್ಟೋಲಿಯಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾದ, ಗಂಗಾ ನದಿಯ ಮಣ್ಣಿನಿಂದ ರೂಪಿಸಲಾದ ದುರ್ಗಾದೇವಿಯ ಮೂರ್ತಿಗಳನ್ನು ವಿಶೇಷವಾಗಿ ತರಲಾಗಿದೆ. ಬಂಗಾಳದ ಸಾಂಪ್ರದಾಯಿಕ 'ಢಾಕಿ' ವಾದ್ಯಗಾರರು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ. ಮಹಾ ಅಷ್ಟಮಿಯಂದು ಕುಮಾರಿ ಪೂಜೆ ನಡೆಯಲಿದ್ದು, ಬಾಲಕಿಯರನ್ನು ದುರ್ಗಾದೇವಿಯ ರೂಪದಲ್ಲಿ ಆರಾಧಿಸಲಾಗುತ್ತದೆ.