ಸಂತ ಫಿಲೋಮಿನಾ ಕಾಲೇಜು: ವಿಪತ್ತು ನಿರ್ವಹಣಾ ತರಬೇತಿ ಆಯೋಜನೆ
St Philomena College: ಕಾಲೇಜಿನ ರಜತ ಮಹೋತ್ಸವ ಸ್ಮಾರಕ ಸಭಾಂಗಣದಲ್ಲಿ 'ಎನ್‌ಡಿಆರ್‌ಎಫ್ ಯೂತ್ ಲೈಫ್‌ಲೈನ್ - ಸ್ಟೂಡೆಂಟ್ ಬಿಎಲ್ಎಸ್ ಮಿಷನ್' ವಿಪತ್ತು ನಿರ್ವಹಣಾ ತರಬೇತಿ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪುತ್ತೂರು: ಪ್ರವಾಹ, ಭೂಕುಸಿತ ಹಾಗೂ ಕಟ್ಟಡ ಕುಸಿತದಂತಹ ಸಂಕಷ್ಟದ ಸಮಯದಲ್ಲಿ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನೂರಾರು ಜೀವಗಳನ್ನು ರಕ್ಷಿಸುವ 'ಎನ್‌ಡಿಆರ್‌ಎಫ್'ನ ಕಾರ್ಯ ನಿಜಕ್ಕೂ ಶ್ಲಾಘನೀಯ. ಕೇವಲ ರಕ್ಷಣಾ ಕಾರ್ಯಾಚರಣೆಗೆ ಸೀಮಿತವಾಗದೆ, ವಿದ್ಯಾರ್ಥಿ-ಯುವಜನರಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಿಜವಾದ ಹೀರೋಗಳೇ ನಮ್ಮ ಎನ್‌ಡಿಆರ್‌ಎಫ್ ಯೋಧರು ಎಂದು ಸಂತ ಫಿಲೋಮಿನಾ ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಜಯಕುಮಾರ್ ಮೊಳೆಯಾರ್ ಹೇಳಿದರು.
ಕಾಲೇಜಿನ ರಜತ ಮಹೋತ್ಸವ ಸ್ಮಾರಕ ಸಭಾಂಗಣದಲ್ಲಿ 3/19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ, 5 ಕರ್ನಾಟಕ ನೇವಲ್ ಎನ್‌ಸಿಸಿ, ಎನ್ಎಸ್ಎಸ್, ರೋವರ್ಸ್-ರೇಂಜರ್ಸ್, ಯೂತ್ ರೆಡ್‌ಕ್ರಾಸ್, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಎನ್‌ಡಿಆರ್‌ಎಫ್ ದಕ್ಷಿಣ ಕನ್ನಡ ವತಿಯಿಂದ ಈಚೆಗೆ ಏರ್ಪಡಿಸಿದ್ದ 'ಎನ್‌ಡಿಆರ್‌ಎಫ್ ಯೂತ್ ಲೈಫ್‌ಲೈನ್ - ಸ್ಟೂಡೆಂಟ್ ಬಿಎಲ್ಎಸ್ ಮಿಷನ್' ವಿಪತ್ತು ನಿರ್ವಹಣಾ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಉಸ್ತುವಾರಿ ಸಹಾಯಕ ಉಪ ನಿರೀಕ್ಷಕ ಭಂಕರ್ ಅವಿನಾಶ್ ಮಾತನಾಡಿ, 'ವಿಪತ್ತು ಯಾವಾಗ, ಎಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ವಿದ್ಯಾರ್ಥಿಗಳು ಸಿದ್ಧರಿದ್ದರೆ ಸಾವು-ನೋವನ್ನು ತಪ್ಪಿಸಬಹುದು. ವಿಪತ್ತು ಸನ್ನದ್ಧತೆ, ತುರ್ತು ಪ್ರತಿಕ್ರಿಯೆ ಮತ್ತು ಜೀವ ಉಳಿಸುವಕೌಶಲ್ಯಗಳನ್ನು ಕಲಿತರೆ, ವೈದ್ಯರು ಬರುವ ಮೊದಲಿನ 'ಗೋಲ್ಡನ್ ಅವರ್'ನಲ್ಲಿ ಒಂದು ಜೀವವನ್ನು ಉಳಿಸಬಹುದು. ಯುವಜನರು ಕೈಜೋಡಿಸಿದರೆ ವಿಪತ್ತು ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಒಂದು ಸರಿಯಾದ ನಿರ್ಧಾರ ನೂರು ಜನರಿಗೆ ದಾರಿದೀಪವಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಎನ್‌ಸಿಸಿ ಭೂಸೇನೆ ಅಧಿಕಾರಿ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೇರಾ ,ಎನ್‌ಸಿಸಿ ನೌಕಾಪಡೆ ಅಧಿಕಾರಿ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್ ಕೆ, ಐಕ್ಯೂಎಸಿ ಸಂಯೋಜಕ ಡಾ.ಎದ್ವಿನ್ ಎಸ್ ಡಿಸೋಜಾ, ಯುವ ರೆಡ್ ಕ್ರಾಸ್ ಸಂಯೋಜಕಿ ಡಾ.ಡಿಂಪಲ್ ಜೆನ್ನಿಫರ್ ಫರ್ನಾಂಡಿಸ್, ರೋವರ್ ಲೀಡರ್ ಖಲಂದರ್ ಶರೀಫ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಸ್ಪರ್ಲ್ ಫಿಯೋನ ಪಿರೇರ ಉಪಸ್ಥಿತರಿದ್ದರು.

ಎಂಎಸ್‌ಡಬ್ಲ್ಯೂ ಸಂಯೋಜಕಿ ಶ್ರೀಮಣಿ ಸ್ವಾಗತಿಸಿದರು. ಎನ್ಎಸ್ಎಸ್ ಯೋಜನಾಧಿಕಾರಿ ಪ್ರೊ.ಕೆ.ಚಂದ್ರಶೇಖರ್ ವಂದಿಸಿದರು. ಫಾತಿಮಾ ನಿಧಾ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಸಿಪಿಆರ್ ಮಾಡುವ ವಿಧಾನ, ರಕ್ತಸ್ರಾವ ನಿಯಂತ್ರಣ, ಗಂಟಲಲ್ಲಿ ಸಿಲುಕಿದಾಗ ಮಾಡುವ ಹೈಮ್ಲಿಕ್ ವಿಧಾನ, ಸುಟ್ಟ ಗಾಯಕ್ಕೆ ಪ್ರಾಥಮಿಕ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.
